ವಿ.ಶ್ರೀನಿವಾಸಪ್ರಸಾದ್ ಸಾಮಾಜಿಕ ಕಳಕಳಿಯ ಸಮಾಜದ ಶಕ್ತಿಯಾದವರು: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork |  
Published : Sep 30, 2026, 01:15 AM IST
51 | Kannada Prabha

ಸಾರಾಂಶ

ವಿ.ಶ್ರೀನಿವಾಸಪ್ರಸಾದ್ ಅವರು ವಿದ್ಯಾರ್ಥಿ ಜೀವನದಲ್ಲಿ ಸಮುದಾಯದ ಪರ ನಿಲುವು ಹೊಂದಿ, ಬಿ.ಬಸವಲಿಂಗಪ್ಪ ಅವರ ಹೆಜ್ಜೆಗೆ ಹೆಜ್ಜೆ ಹಾಕಿದವರು, ಬಿ.ಬಸವಲಿಂಗಪ್ಪ ಮತ್ತು ವಿ.ಶ್ರೀನಿವಾಸಪ್ರಸಾದ್ ಅವರ ಧೈರ್ಯ ಸ್ಥೈರ್ಯಕ್ಕೆ ಯಾರು ಸಾಟಿಯಾಗಲಾರರು, ಈ ಇಬ್ಬರು ನಾಯಕರು ಮಾತ್ರ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟು ಹುಲಿ ಎನಿಸಿದವರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ಅವರು ವ್ಯಕ್ತಿಯಾಗಿರದೇ ಸಾಮಾಜಿಕ ಕಳಕಳಿಯ ಸಮಾಜದ ಶಕ್ತಿಯಾಗಿದ್ದವರು. ಬಿ.ಬಸವಲಿಂಗಪ್ಪ, ವಿ.ಶ್ರೀನಿವಾಸ ಪ್ರಸಾದ್ ಇಬ್ಬರು ದಲಿತ ಸಮುದಾಯದ ಹುಲಿಗಳು, ಬೇರೆ ಎಲ್ಲ ನಾಯಕರು ಸ್ವಾರ್ಥ ತುಂಬಿದ ಚಮಚಗಳು ಎಂದು ವಿಧಾನ ಪರಿಷತ್‌ ಪ್ರತಿ ಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ ವಿ.ಶ್ರೀನಿವಾಸಪ್ರಸಾದ್ ಅವರ 79ನೇ ಜನ್ಮ ದಿನಾಚರಣೆ ಹಾಗೂ ಸ್ವಾಭಿಮಾನಿಯ ಧೀಮಂತ ಹೆಜ್ಜೆಗಳು ಎಂಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿ.ಶ್ರೀನಿವಾಸಪ್ರಸಾದ್ ಅವರು ವಿದ್ಯಾರ್ಥಿ ಜೀವನದಲ್ಲಿ ಸಮುದಾಯದ ಪರ ನಿಲುವು ಹೊಂದಿ, ಬಿ.ಬಸವಲಿಂಗಪ್ಪ ಅವರ ಹೆಜ್ಜೆಗೆ ಹೆಜ್ಜೆ ಹಾಕಿದವರು, ಬಿ.ಬಸವಲಿಂಗಪ್ಪ ಮತ್ತು ವಿ.ಶ್ರೀನಿವಾಸಪ್ರಸಾದ್ ಅವರ ಧೈರ್ಯ ಸ್ಥೈರ್ಯಕ್ಕೆ ಯಾರು ಸಾಟಿಯಾಗಲಾರರು, ಈ ಇಬ್ಬರು ನಾಯಕರು ಮಾತ್ರ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟು ಹುಲಿ ಎನಿಸಿದವರು, ಮಿಕ್ಕೆಲ್ಲರು ಸ್ವಾರ್ಥ ರಾಜಕಾರಣ ಮಾಡಿದ ಸ್ವಾರ್ಥಿಗಳು ಹಾಗೂ ಚಮಚಗಳೇ ಎಂದರು.

ಜೀವ ಕೊಟ್ಟವರ, ಜೀವ ತೆಗೆದ ಸಿದ್ದರಾಮಯ್ಯ:

ವಿ.ಶ್ರೀನಿವಾಸಪ್ರಸಾದ್ ರವರ ಕೃಪಾಕಟಾಕ್ಷದಿಂದ 2026ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯರವರು ಕಡಿಮೆ ಮತಗಳ ಅಂತರದಲ್ಲಿ ಗೆದ್ದರು, ಆದರೆ, ದಲಿತರ ಶ್ರಮದಿಂದ ಗೆದ್ದ ಸಿದ್ದರಾಮಯ್ಯ ರಾತ್ರೋರಾತ್ರಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಜೀವ ಕೊಟ್ಟವರ, ಜೀವ ತೆಗೆದ ನಿಮಗೆ ಮಾನವೀಯತೆ ಇದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ನೀಲಗಿರಿ ಮರದಂತೆ ಪ್ರಿಯಾಂಕ್‌ ಖರ್ಗೆ:

ವಿ.ಶ್ರೀನಿವಾಸಪ್ರಸಾದ್ ಅವರ ಜಾಗಕ್ಕೆ ಪ್ರಿಯಾಂಕ್‌ ಖರ್ಗೆ ಅವರನ್ನು ತಂದಿರಿ, ಪ್ರಿಯಾಂಕ್‌ ಖರ್ಗೆ ನೀಲಗಿರಿ ಮರವಿದ್ದ ಹಾಗೆ, ನೀಲಗಿರಿ ಮರವು ಭೂಮಿಗೆ ಮಾರಕವಾಗುವ ಜೊತೆಗೆ ಪಕ್ಕದಲ್ಲಿರುವ ಬೆಳೆಯನ್ನು ನಾಶಪಡಿಸುತ್ತದೆ. ಅಂತೆಯೇ ನೀಲಗಿರಿ ಮರದಂತೆ ಪ್ರಿಯಾಂಕ್‌ ಖರ್ಗೆ ಎಲ್ಲರನ್ನೂ ನಾಶಪಡಿಸುತ್ತಾರೆ. ಅಂಥವರನ್ನು ವಿ.ಶ್ರೀನಿವಾಸ್ ಪ್ರಸಾದ್ ಜಾಗಕ್ಕೆ ತಂದ ನೀವು ಅವರಿಗೆ ಕೊಡುವ ಗೌರವವೇ, ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್, 53 ಸಾವಿರ ಎಸ್ಇಪಿ ಅನುದಾನವನ್ನು ನುಂಗಿ ದಲಿತರಿಗೆ ದ್ರೋಹ ಬಗೆದಿದ್ದಾರೆ, ದಲಿತರಿಗೆ ಕಾಂಗ್ರೆಸ್ ನಲ್ಲಿ ದಲಿತರು ಇರಬೇಕೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ಸಂವಿಧಾನ ತೊಂದರೆಯಲ್ಲಿದೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎನ್ನುತ್ತಾರೆ, ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ ಸಂವಿಧಾನವನ್ನು ಏಕೆ ಬದಲಾಯಿಸಲಿಲ್ಲ? ವಾಸ್ತವವಾಗಿ ಸಂವಿಧಾನ ತೊಂದರೆಯಲ್ಲಿಲ್ಲ, ಕಾಂಗ್ರೆಸ್ ನಾಯಕರು ತೊಂದರೆಯಲ್ಲಿದ್ದಾರೆ, 12ರಷ್ಟಿದ್ದ ಮೀಸಲಾತಿಯನ್ನು ಶೇ. 17ಕ್ಕೆ ಏರಿಸಿದ್ದು ಬಿಜೆಪಿ, ಜೊತೆಗೆ ಗರ್ಭಗುಡಿ ಸಂಸ್ಕೃತಿಯಲ್ಲೂ ಸಹ ದಲಿತರಿಗೆ ಅವಕಾಶವಿದೆ ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ ಎಂದರು.

ಅನೇಕ ರಾಜಕಾರಣಿಯ ಏಣಿಯಾಗಿದ್ದವರು ಪ್ರಸಾದ್:

ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಮಾತನಾಡಿ, ವಿ.ಶ್ರೀನಿವಾಸ ಪ್ರಸಾದ್ ಅನೇಕ ಸಣ್ಣಪುಟ್ಟ ತಳ ಸಮುದಾಯದ ರಾಜಕೀಯ ನಾಯಕರ ಏಣಿ ಯಾಗಿದ್ದರು. ಅವರು ಎಂದೂ ಕೂಡ ಅಧಿಕಾರಕ್ಕಾಗಿ ಅಂಟಿಕೊಂಡು ಅನುಕೂಲ ಇಂದು ರಾಜಕಾರಣಿಯಾಗಿರಲಿಲ್ಲ, ಜೊತೆಗೆ ಸಿದ್ದಾಂತದೊಂದಿಗೆ ಎಂದಿಗೂ ರಾಜ ಮಾಡಿಕೊಳ್ಳದೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಕ್ಷರ ಅಳವಡಿಸಿಕೊಂಡ ಧೀಮಂತ ರಾಜಕಾರಣಿ ಎಂದರು.

ಸಾನಿಧ್ಯ ವಹಿಸಿದ್ದ ಬೋಧಿರತ್ನ ಬಂತೇಜಿ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರು ಯಾವುದನ್ನು ಮುಚ್ಚುಮರೆ ಇಲ್ಲದೆಯೇ ಇದ್ದುದ್ದನ್ನು ಇದ್ದ ಹಾಗೆ ಹೇಳುವ ಎದೆಗಾರಿಕೆಯಿದ್ದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರು ಪಕ್ಷಾಂತರಿಯಾಗಿದ್ದರೂ ಸಹ ತತ್ವಾಂತರಿಯಾಗದೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಚಾಚು ತಪ್ಪದೆ ಪಾಲಿಸಿದವರು ಎಂದರು.

ಮುಖ್ಯಭಾಷಣಕಾರರಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರು ಶೋಷಿತರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದವರು, ಶ್ರೀನಿವಾಸಪ್ರಸಾದ್ ಅವರು ಸ್ವಾಭಿಮಾನಿ ಹಾಗೂ ಹಠವಾದಿ ಸ್ವಭಾವದವರಾಗಿದ್ದರು, ಜೊತೆಗೆ ಪ್ರಸಾದ್ ಅವರ ಬದುಕಿನಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ ಪ್ರಮುಖ ಮೌಲ್ಯಗಳಾಗಿದ್ದವು, ಈ ಮೂರು ಪರಿಕಲ್ಪನೆಗಳನ್ನು ತಮ್ಮ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಬುದ್ಧ, ಬಸವ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆದಿದ್ದರು, ತಾವು ಏನು ಮಾಡಬೇಕು ಎಂದು ನಿರ್ಧರಿಸುತ್ತಿದ್ದರೋ, ಅದನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಕಾರ್ಯರೂಪಕ್ಕೆ ತರುತ್ತಿದ್ದರು, ಜನರ ಸಮಸ್ಯೆಗಳು ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅವರು ಸದಾ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ಸಮಾಜದಲ್ಲಿ ಅವಕಾಶಗಳಿಂದ ವಂಚಿತವಾಗಿರುವ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗುವುದು ಹಾಗೂ ಅವರ ಹಕ್ಕುಗಳಿಗಾಗಿ ಮಾತನಾಡುವುದು ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಜೀವನದ ಪ್ರಮುಖ ಭಾಗವಾಗಿತ್ತು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ ಸಮುದಾಯಗಳ ಪರವಾಗಿ ಅವರು ನಿರಂತರವಾಗಿ ಧ್ವನಿ ಎತ್ತಿದ್ದರು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕೇವಲ ಮಾತಿನಲ್ಲಿ ಉಳಿಸದೆ, ತಮ್ಮ ರಾಜಕೀಯ ನಡೆಗಳ ಮೂಲಕವೂ ಪ್ರತಿಪಾದಿಸಿದ್ದರು, ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ವರ್ಗಗಳ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಧೀಮಂತ ರಾಜಕಾರಣಿ, ಇದೇ ಕಾರಣದಿಂದಾಗಿ ಅವರು ರಾಜಕೀಯದಲ್ಲಿ ಸುದೀರ್ಘವಾಗಿ ಸಕ್ರಿಯವಾಗಿ ಇರಲು ಸಾಧ್ಯವಾಗಿದೆ ಎಂದರು.

ಮಾಜಿ ಶಾಸಕ ಬಿ.ಹರ್ಷವರ್ಧನ್, ಭಾಗ್ಯಲಕ್ಷ್ಮಿ ವಿ. ಶ್ರೀನಿವಾಸಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಮಂಗಳಾ ಸೋಮಶೇಖರ್, ಗುರುಸ್ವಾಮಿ, ಶೈಲಾ ಬಾಲರಾಜು, ಸದಾನಂದ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಮುಖಂಡರಾದ ವಿನಯಕುಮಾರ್, ಶ್ರೀನಿವಾಸ ರೆಡ್ಡಿ, ಚಂದ್ರು, ಬಿ.ಎಸ್. ರಾಮು, ಡಾ. ರೇವಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ