ಭ್ರಷ್ಟಾಚಾರ ದೊಡ್ಡ ಪಿಡುಗು : ದುಷ್ಟರ ಸಂವಾಹರವೇ ನನ್ನ ಸಂಕಲ್ಪ - ಉಪ ಲೋಕಾಯುಕ್ತ

KannadaprabhaNewsNetwork |  
Published : Feb 14, 2025, 12:32 AM ISTUpdated : Feb 14, 2025, 12:48 PM IST
ಪೋಟೋ ಇದೆ. | Kannada Prabha

ಸಾರಾಂಶ

ಭ್ರಷ್ಟಾಚಾರ ದೊಡ್ಡ ಪಿಡುಗಾಗಿದ್ದು, ಅದರ ನಿರ್ಮೂಲನೆಯಾದರೆ ದೇಶ ಪ್ರಪಂಚದಲ್ಲೇ ನಂ. 1 ಆಗುತ್ತದೆ. ನನ್ನ ಅಧಿಕಾರವಧಿಯಲ್ಲಿ ಒಳ್ಳೆಯವರಿಗೆ ಯಾವಾಗಲೂ ನನ್ನ ರಕ್ಷಣೆ ಇರುತ್ತೆ. 

ಹಾವೇರಿ: ಭ್ರಷ್ಟಾಚಾರ ದೊಡ್ಡ ಪಿಡುಗಾಗಿದ್ದು, ಅದರ ನಿರ್ಮೂಲನೆಯಾದರೆ ದೇಶ ಪ್ರಪಂಚದಲ್ಲೇ ನಂ. 1 ಆಗುತ್ತದೆ. ನನ್ನ ಅಧಿಕಾರವಧಿಯಲ್ಲಿ ಒಳ್ಳೆಯವರಿಗೆ ಯಾವಾಗಲೂ ನನ್ನ ರಕ್ಷಣೆ ಇರುತ್ತೆ. ಆದರೆ, ಭ್ರಷ್ಟರು, ದುಷ್ಟರನ್ನು ನಾನು ಬಿಡಲ್ಲ, ದುಷ್ಟಸಂಹಾರವೇ ನನ್ನ ಸಂಕಲ್ಪ ಎಂದು ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಗುಡುಗಿದರು.

ನಗರದ ಜಿಲ್ಲಾ ಗುರು ಭವನದಲ್ಲಿ ಗುರುವಾರ ಹಾವೇರಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರುಗಳ ಸ್ವೀಕಾರ ಹಾಗೂ ವಿಚಾರಣೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಕಾಲು ಮುಟ್ಟುತ್ತೇನೆ. ಮೋಸ ಮಾಡಿದರೆ ಕತ್ತು ಹಿಡಿಯುತ್ತೇನೆ. ಇದಕ್ಕೆ ಸಾರ್ವಜನಿಕರು, ಅಧಿಕಾರಿಗಳ ಸಹಕಾರ ಬಹಳ ಮುಖ್ಯ ಎಂದರು.

ವಿದ್ಯಾವಂತರಿಂದಲೇ ಗಂಡಾಂತರ:ದೇಶದಲ್ಲಿ ಇಂದು ಶೇ. 80ರಷ್ಟು ವಿದ್ಯಾವಂತರಿದ್ದಾರೆ. ಆದರೆ ಶೇ. 90ರಷ್ಟು ವಿದ್ಯಾವಂತರಿಂದ ದೇಶಕ್ಕೆ ತೊಂದರೆಯಾಗುತ್ತಿದೆ. ವಿದ್ಯಾವಂತ ಮೋಸಗಾರರಿಂದ ದೇಶ ಅಧೋಗತಿಗೆ ಹೋಗಬಹುದು ಎಂದು ಡಿ.ಜಿ. ಗುಂಡಪ್ಪನವರು ಹೇಳಿದ್ದರು. ಲೋಕಾಯುಕ್ತ ದಾಳಿಯಲ್ಲಿ ನೋಡಿದ್ದೀರಿ. ಎಂಥೆಂಥ ಕುಳಗಳನ್ನು ಹಿಡಿಯಲಾಗಿದೆ. ಸಣ್ಣ-ಸಣ್ಣ ನೌಕರರು ಕೋಟಿ, ಕೋಟಿ ಆಸ್ತಿ ಮಾಡಿದ್ದಾರೆ. ನೀವು ಆಸ್ತಿ ಮಾಡುವುದು ನಿಮ್ಮ ಪೀಳಿಗೆಯನ್ನು ಹಾಳು ಮಾಡಲು, ಅನ್ಯಾಯದ ಹಣದ ಊಟದಲ್ಲಿ ಋನಾತ್ಮಕತೆ ಇರುತ್ತದೆ. ಆದರೆ ಕಷ್ಟಪಟ್ಟು ದುಡಿದ ಹಣದಲ್ಲಿ ಧನಾತ್ಮಕತೆ ಇರುತ್ತದೆ. ನ್ಯಾಯಯುತವಾಗಿ ಜೀವನ ಮಾಡಬೇಕು ಎಂದು ಕಿವಿಮಾತು ಹೇಳಿದರು

.ಕೆಲಸದಲ್ಲಿ ರಾಮರಾಜ್ಯ:ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ರಾಮರಾಜ್ಯ ದೇವಸ್ಥಾನಕ್ಕೆ ಹೋಗುವುದಲ್ಲ, ನಮ್ಮ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವುದು ರಾಮರಾಜ್ಯವಾಗಿದೆ. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಿಸ್ವಾರ್ಥದಿಂದ ಬದುಕಬೇಕು. ಶಿಸ್ತು ರೂಢಿಸಿಕೊಳ್ಳಬೇಕು, ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಭ್ರಷ್ಟಾಚಾರ ತೊಡೆದುಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು. 

ಸುಳ್ಳು ದೂರು ಕೊಟ್ಟರೆ ಶಿಕ್ಷೆ:ನಿಮ್ಮ ಸ್ವಾರ್ಥಕ್ಕಾಗಿ ಲೋಕಾಯುಕ್ತ ಇಲ್ಲ, ಲೋಕಾಯುಕ್ತರಿಗೆ ನೀಡುವ ದೂರುಗಳು ನಿಖರವಾಗಿರಬೇಕು. ಒಂದು ವೇಳೆ ಸುಳ್ಳು ಎಂದು ಗೊತ್ತಾದರೆ ಮೂರು ತಿಂಗಳ ಜೈಲು ಶಿಕ್ಷೆ ನೀಡಲಾಗುವುದು. ಕೆಲವು ಸಂಘ-ಸಂಸ್ಥೆಗಳು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಮಹನೀಯರ ಹೆಸರು ಹಾಗೂ ಫೋಟೋ ಹಾಕಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಅವರ ಮೇಲೆ ಅಷ್ಟು ಭಕ್ತಿ ಇದ್ದರೆ ದೇವರ ಫೋಟೋ ಪಕ್ಕ ಇಟ್ಟು ಪೂಜೆ ಮಾಡಿ, ಆದರೆ ಹೆಸರಿಗೆ ಮಸಿಬಳಿಯುವ ಮಾಡಬೇಡಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಭ್ರಷ್ಟಾಚಾರ ಸರ್ಕಾರಿ ಹಾಗೂ ಖಾಸಗಿ ವಲಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರದಲ್ಲಿ ವ್ಯಾಪಿಸಿದೆ. ಲಂಚ, ವಂಚನೆ, ದುರುಪಯೋಗ, ದುರ್ನಡತೆ, ಸೃಜನಪಕ್ಷಪಾತ ಹೀಗೆ ವ್ಯಾಖ್ಯಾನಿಸಲಾಗುತ್ತದೆ. ಶೇ. 51ರಷ್ಟು ಸರ್ಕಾರಿ ನೌಕರರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಶೇ.77ರಷ್ಟು ಜನರು ತಮ್ಮ ಕೆಲಸಕ್ಕೆ ತೊಂದರೆಯಾಗಬಾರದು ಎಂದು ಹಣ ನೀಡುತ್ತಾರೆ. 

ಭ್ರಷ್ಟಾಚಾರ ತಡೆಗೆ ಕರ್ನಾಟಕ ಲೋಕಾಯುಕ್ತ ಹುಟ್ಟುಹಾಕಲಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್.ಲಕ್ಷ್ಮಿನಾರಾಯಣ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶುಕುಮಾರ, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರಾದ ಅರವಿಂದ ಎನ್.ವಿ., ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಇತರರಿದ್ದರು.ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಲೋಕಾಯುಕ್ತ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ