ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ಮಾಜಾಳಿಯ ಮಾರ್ಕೆಪೂನವ್ ಜಾತ್ರೆ

KannadaprabhaNewsNetwork | Published : Feb 14, 2025 12:32 AM

ಸಾರಾಂಶ

ಮಾಜಾಳಿ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು.

ಕಾರವಾರ: ತಾಲೂಕಿನ ಮಾಜಾಳಿಯಲ್ಲಿ ಮಾರ್ಕೆಪೂನವ್ ದೇವರ ಜಾತ್ರಾ ಮಹೋತ್ಸವ ಗುರುವಾರ ಶ್ರದ್ಧಾ- ಭಕ್ತಿಯಿಂದ ನಡೆಯಿತು. ಹರಕೆಯ ಹಿನ್ನೆಲೆ ಗಂಡುಮಕ್ಕಳು ಹೊಟ್ಟೆಯ ಭಾಗಕ್ಕೆ ಸೂಜಿ ಚುಚ್ಚಿ ದಾರ ಪೋಣಿಸಿಕೊಂಡರೆ, ಹೆಣ್ಣುಮಕ್ಕಳು ಕುಲದೇವರಿಗೆ ದೀಪ ಹಚ್ಚುವ ಮೂಲಕ ವಿಶೇಷವಾಗಿ ಭಕ್ತಿ ಪ್ರದರ್ಶಿಸಿದರು.

ಮಾಜಾಳಿ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು.

ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡುಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಜೀವನದಲ್ಲಿ ಎಂಥ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ವಿವಾಹಕ್ಕೂ ಪೂರ್ವ ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಜಾತ್ರೆಯಲ್ಲಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಮಕ್ಕಳ ಪಾಲಕರೇ ತಂದಿದ್ದ ಸೂಜಿ ದಾರವನ್ನು ಅರ್ಚಕರು ಪೋಣಿಸಿ ಹೊಟ್ಟೆ ಭಾಗದಲ್ಲಿ ಸೂಜಿ ಚುಚ್ಚಿ ಒಂದು ಗಂಟು ಹಾಕುತ್ತಿದ್ದಂತೆ ಮಕ್ಕಳು ಸಂಪ್ರದಾಯದಂತೆ ಅಯ್ಯಯ್ಯೋ ಎಂದು ಕೂಗಿದರು.

ಹೆಣ್ಣುಮಕ್ಕಳು ಕುಲದೇವರಿಗೆ ದೀವಜ್‌(ದೀಪ) ಹರಕೆ ಅರ್ಪಿಸಿದರು. ಈ ಗ್ರಾಮದ ಯುವತಿ ಅಥವಾ ಸೊಸೆಯಾಗಿ ಆಗಮಿಸಿದವರು ಧಾಡ್ ದೇವಸ್ಥಾನದ ಆವರಣದಿಂದ ದೀಪ ಬೆಳಗಿಕೊಂಡು ತಲೆ ಮೇಲೆ ದೀಪವನ್ನಿರಿಸಿಕೊಂಡು ದೇವತಿ ದೇವಸ್ಥಾನದ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಆ ದೇವತೆಗೆ ತಾವು ಹೊತ್ತು ತಂದ ದೀಪದಿಂದ ಆರತಿ ಮಾಡಿ, ದೇವರಿಗೆ ನಮಸ್ಕರಿಸಿ, ದೀಪಗಳನ್ನು ಅಲ್ಲಿಯೇ ಇಟ್ಟು ಮರಳಿದರು. ಹರಕೆ ಹೊತ್ತುಕೊಂಡ ಮಹಿಳೆಯರು ಕೂಡಾ ದೀಪ ಸೇವೆ ನೀಡಿದರು.

ಧಾಡ್ ದೇವಸ್ಥಾನದಿಂದ ೧ ಕಿಮೀ ದೂರವಿರುವ ದೇವತಿ ದೇವಿಯ ದೇವಸ್ಥಾನದ ವರೆಗೆ ಕನಕಾಂಬರ ಹೂವಿನಿಂದ ಸಿಂಗಾರಗೊಂಡ ಬಂಡಿಯನ್ನು ಸ್ಥಳೀಯ ಯುವಕರು ಎಳೆದರು. ಬಂಡಿಯೊಂದಿಗೆ ಹರಕೆ ಹೊತ್ತವರು, ಸೂಜಿದಾರ ಪೋಣಿಸಿಕೊಂಡವರು ದೇವತಿ ದೇವಸ್ಥಾನದ ಬಳಿ ತೆರಳಿದರು. ಅಲ್ಲಿ ದಾರವನ್ನು ತೆಗೆಸಿಕೊಂಡ ಬಳಿಕ ಅವರ ಹರಕೆ ತೀರಿದಂತಾಗುತ್ತದೆ.

ಎರಡು ಬಂಡಿಯನ್ನು ಅಲಂಕಾರಗೊಳಿಸಲಾಗಿತ್ತು. ಇದನ್ನು ಸ್ಥಳೀಯರು ಒಂದು ಗಂಡು ಇನ್ನೊಂದು ಹೆಣ್ಣು ಎಂದು ನಂಬುತ್ತಾರೆ. ಗಂಡು ಎಂದು ನಂಬುವ ಬಂಡಿ ಮುಂದೆ ಸಾಗಿದರೆ ಹೆಣ್ಣು ಬಂಡಿ ಹಿಂದಿನಿಂದ ಸಾಗುತ್ತದೆ. ಧಾಡ್ ದೇವಸ್ಥಾನದಿಂದ ದೇವತಿ ದೇವಸ್ಥಾನದ ವರೆಗೆ ಬಂಡಿ ಯೋ.. ಬಂಡಿ ಯೋ.. ಎಂದು ಘೋಷಣೆ ಕೂಗುತ್ತ ಎಳೆದರು. ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಸ್ಥಳೀಯರೊಂದೇ ಅಲ್ಲದೇ ಗೋವಾ, ಮಹಾರಾಷ್ಟ್ರ ಒಳಗೊಂಡು ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

Share this article