ನಗರಸಭೆ ಅಧಿಕಾರಿಗಳಿಂದ ಘನತ್ಯಾಜ್ಯಕ್ಕೆ ಬೆಂಕಿ

KannadaprabhaNewsNetwork | Published : Feb 14, 2025 12:32 AM

ಸಾರಾಂಶ

ಪಟ್ಟಣ ವ್ಯಾಪ್ತಿಯ ಹೊರ ವಲಯದಲ್ಲಿ ನಗರಸಭೆ ಸ್ಥಾಪಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡಬೇಕೆಂಬ ನಿಯಮ ಉಲ್ಲಂಘನೆಯಾಗಿದ್ದು, ಇಲ್ಲಿ ರಾಜಾರೋಷವಾಗಿ ಕಸವನ್ನು ಬೆಂಕಿ ಹಾಕಿ ಸುಡುವ ಮೂಲಕ ಕೊಳ್ಳೇಗಾಲ ನಗರಸಭೆ ವಿವಾದಕ್ಕೀಡಾಗಿದೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣ ವ್ಯಾಪ್ತಿಯ ಹೊರ ವಲಯದಲ್ಲಿ ನಗರಸಭೆ ಸ್ಥಾಪಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಮಾರಾಟ ಮಾಡಬೇಕೆಂಬ ನಿಯಮ ಉಲ್ಲಂಘನೆಯಾಗಿದ್ದು, ಇಲ್ಲಿ ರಾಜಾರೋಷವಾಗಿ ಕಸವನ್ನು ಬೆಂಕಿ ಹಾಕಿ ಸುಡುವ ಮೂಲಕ ಕೊಳ್ಳೇಗಾಲ ನಗರಸಭೆ ವಿವಾದಕ್ಕೀಡಾಗಿದೆ.

ಹೌದು, ನಿಯಮ ಉಲ್ಲಂಘಿಸಿ ನಗರಸಭಾಧಿಕಾರಿಗಳು ಘನತ್ಯಾಜ್ಯ ವಿಲೇವಾರಿ ಘಟಕವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಕಾಡಂಚಿನಲ್ಲಿರುವ ಈ ಘಟಕದಲ್ಲಿ ಆಗಿಂದಾಗೆ ಬೆಂಕಿ ಹಾಕಿ ಕಸವನ್ನು ಸುಡುವ ಮೂಲಕ ಪರಿಸರ ಪ್ರೇಮಿಗಳನ್ನು ಕೆರಳಿಸುತ್ತಿದೆ. ಮಾತ್ರವಲ್ಲ ಬೆಂಕಿ ಹಾಕುವುದರಿಂದ ಪರಿಸರ ಮಾಲಿನ್ಯದ ಜೊತೆ ಕಾಡು ಪ್ರಾಣಿಗಳ ಸ್ವಚ್ಛಂದ ಸಂಚಾರಕ್ಕೂ ಸಂಚಕಾರ ತಂದೊಡ್ಡಿದೆ ಎನ್ನಬಹುದು.

ಮಧುಮಲೈ ಗುಡ್ಡದಲ್ಲಿ ನಗರಸಭೆ ಒಂದೂವರೆ ದಶಕಗಳ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಗುಡ್ಡದಲ್ಲಿ ಸ್ಥಾಪಿಸಲಾಗಿದೆ. ಮನೆ ಮನೆಯಿಂದ ಕಸ ಸಂಗ್ರಹಿಸಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಗೊಬ್ಬರವಾಗಿ ಪರಿವರ್ತನೆ ಮಾಡಿ, ಅದನ್ನು ರೈತರಿಗೆ ಕಡಿಮೆ ವೆಚ್ಚದಲ್ಲಿ (ದರ) ಗೊಬ್ಬರ ನೀಡಬೇಕು ಎಂಬುದು ಈ ಘಟಕ ಸ್ಥಾಪನೆಯ ಪ್ರಮುಖ ಉದ್ದೇಶ. ಎಲ್ಲೂ ಸಹಾ ಈ ಪ್ರಕ್ರಿಯೆ ಆಗುತ್ತಿಲ್ಲ, ಕಸವನ್ನು ಬೇರ್ಪಡಿಸುವ ಕೆಲಸವೂ ಆಗುತ್ತಿಲ್ಲ, ನಗರಸಭೆ ಎಲ್ಲ ಕಸವನ್ನು ಒಟ್ಟಾಗಿಯೇ ಪಡೆದು ಸುಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ ಅಕ್ಕ, ಪಕ್ಕದ ಜಮೀನು ಮಾಲೀಕರು, ವಾಸ ಮನೆ ಹಾಗೂ ಕಾಡಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೂ ಸಂಚಕಾರ ಉಂಟಾಗುತ್ತಿದೆ.

ಘನತ್ಯಾಜ್ಯ ಘಟಕ ನಿರ್ವಹಣೆಗೆ ಲಕ್ಷಾಂತರ ಹಣವನ್ನು ಸರ್ಕಾರ ನೀಡುತ್ತಿದೆ. ಆದರೆ ಕಳೆದ ದಶಕಗಳಿಂದಲೂ ಇಲ್ಲಿನ ಅಧಿಕಾರಿಗಳು ಕಮಿಷನ್ ಆಸೆಗೆ ವಾಹನ ಖರೀದಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈ ಹಣದಲ್ಲಿ ಖರೀದಿಸಿದ ಕೆಲ ವಾಹನಗಳು ನಿರುಪಯುಕ್ತವಾಗಿ ನಿಲ್ಲಿಸಲಾಗಿದೆ ಎಂಬ ಗಂಭೀರ ಆರೋಪ ಸಾರ್ವಜನಿಕರದ್ದು. ಮಧುಮಲೈ ಗುಡ್ಡದಲ್ಲಿ ನಿಯಮ ಮೀರಿ ಕಸ ಸುಡುತ್ತಿರುವುದರಿಂದ ಪರಿಸರ ಮಾಲಿನ್ಯದ ಜೊತೆ ಕೊಳವೆ ಬಾವಿ ನೀರು ಸಹಾ ಇದರಿಂದ ಕಲುಷಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನಾದರೂ ಸಂಬಂಧಪಟ್ಟ ನಗರಸಭೆ ಆಯುಕ್ತರು, ಅಧ್ಯಕ್ಷರು, ನಗರಸಭೆ ಸದಸ್ಯರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೌಕರರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈಗಲಾದರೂ ಜಿಲ್ಲಾಡಳಿತ ಗಮನಹರಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 10 ದಿನದಲ್ಲಿ ಒಮ್ಮೆ ಹಾಗೂ ಹಿಂದೆ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದ್ದು ನಾವೆ ನಂದಿಸುವ ಕೆಲಸ ಮಾಡಿದ್ದೇವೆ. ಆಕಸ್ಮಿಕವಾಗಿ ಬೆಂಕಿ ಬಿದ್ದ ಅನೇಕ ಪ್ರಕರಣಗಳಿವೆ. ಆಗ ನಾವು ತಕ್ಷಣ ಬೆಂಕಿ ಆರಿಸಿದ್ದೇವೆ. ಹಸಿ ಹಾಗೂ ಒಣಕಸವನ್ನಾಗಿ ವಿಭಜಿಸಿ ನಗರಸಭೆ ವಾಹನ ನೀಡಬೇಕು ಎಂದು ಹಲವು ಬಾರಿ ಪ್ರಚಾರದ ಜೊತೆ ಮನವಿ ಮಾಡಲಾಗಿದೆ. ಈ ಕುರಿತು ನಾಗರಿಕರು ಅರಿತು ನಗರಸಭೆ ಜೊತೆ ಸಹಕರಿಸಬೇಕು.

-ರಮೇಶ್, ನಗರಸಭೆ ಆಯುಕ್ತರು, ಕೊಳ್ಳೇಗಾಲವಿವಾದಿತ ಜಾಗದಲ್ಲಿ ಕಾಮಗಾರಿ

ನಡೆಸದಂತೆ ಡಿಸಿಎಂ ಕಾರ್ಯದರ್ಶಿ ಪತ್ರ

ಕೊಳ್ಳೇಗಾಲ: ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ನಾಯಕರ ದೊಡ್ಡ ಬೀದಿಯಲ್ಲಿರುವ ಸಂಖ್ಯೆ 15ರ ಅಸೆಸ್‌ಮೆಂಟ್ ನಂ.472ಕ್ಕೆ ಸಂಬಂಧಿಸಿದಂತೆ ವಾರಸುದಾರ ಲೋಕೇಶ್ ಅವರ ಮನವಿಯನ್ನು ಪರಿಶೀಲಿಸಿ ನಿಯಮಾನುಸರ ಕ್ರಮವಹಿಸುವಂತೆ ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಉಪ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್ ಲಿಖಿತ ಪತ್ರದ ಮೂಲಕ ಸೂಚಿಸಿದ್ದಾರೆ.

ಫೆ.6ರಂದು ಕೊಳ್ಳೇಗಾಲ ನಗರಸಭೆ ಆಯುಕ್ತ ರಮೇಶ್ ಅವರಿಗೆ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಲಿಖಿತ ಪತ್ರ ನೀಡಿದ್ದು. ಪತ್ರದಲ್ಲಿ ಪಟ್ಟಣದ ಉಪ್ಪಾರಮೋಳೆ ಬಡಾವಣೆ ರೈತ ಮುಖಂಡ ಲೇಟ್ ಶಿವರಾಮು ಪುತ್ರ ಎಸ್.ಲೋಕೇಶ್ ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ನಾಯಕರ ದೊಡ್ಡ ಬೀದಿಯಲ್ಲಿರುವ ಸಂಖ್ಯೆ 15, ಅಸೆಸ್‌ಮೆಂಟ್ ನಂ.472 ರಲ್ಲಿ ಪೂರ್ವ-ಪಶ್ಚಿಮ 33 ಅಡಿ, ಉತ್ತರ-ದಕ್ಷಿಣ 47 ಅಡಿ ವಿಸ್ತೀರ್ಣ ಉಳ್ಳ ನಿವೇಶನದ ಮಾಲೀಕರಾಗಿ ಸ್ವಾಧೀನಾನುಭವವನ್ನು ಹೊಂದಿದ್ದು, ನಗರಸಭೆ ಸದಸ್ಯ ಶಿವಕುಮಾರ್ ಕಾನೂನು ಬಾಹಿರವಾಗಿ ಸದರಿಯವರ ಖಾಲಿ ನಿವೇಶನದ ಮೇಲೆ ರಸ್ತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರಿದ್ದು ಈ ಕುರಿತು ನ್ಯಾಯಾಲಯದಲ್ಲಿ ಸೈಟಿನ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ದಾವೆ ಹೂಡಿದ್ದು, ನಗರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿವೇಶನಗಳಿಗೆ ಸಂಬಂದಿಸಿದಂತೆ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಕಾಮಗಾರಿ ಕೈಗೊಂಡಿರುತ್ತಾರೆ.

ಈ ಹಿನ್ನೆಲೆ ಪರಿಶೀಲಿಸುವಂತೆ ಹಾಗೂ ಕುಪ್ಪಮ್ಮ ಕಾಲುವೆಯ ಪಶ್ಚಿಮ ಭಾಗಕ್ಕೆ ಸರ್ಕಾರಿ ಜಾಗವು ಒತ್ತುವರಿಯಾಗಿರುವುದು ಕಂಡು ಬಂದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾಲುವೆಯ ಪಶ್ಚಿಮ ಭಾಗದಲ್ಲಿ ರಸ್ತೆ ಕಾಮಗಾರಿ ಮಾಡಲು ಸರ್ಕಾರಿ ಜಾಗವಿದ್ದು, ರಸ್ತೆ ಕಾಮಗಾರಿ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ಖಾಸಗಿ ನಿವೇಶನಗಳ ಮೇಲೆ ಅಕ್ರಮವಾಗಿ ಮಾಡುತ್ತಿರುವ ರಸ್ತೆ ಕಾಮಗಾರಿ ಮುಂದುವರೆಸದಂತೆ ನಿಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ವಿನಂತಿಸಿಕೊಂಡಿರುತ್ತಾರೆ. ಲೋಕೇಶ್ ಅವರ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಶ್ರೀಧರ್ ಪತ್ರದಲ್ಲಿ ವಿವರಿಸಿದ್ದಾರೆ.

Share this article