ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಯತಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ದೇಶದ ಸಂಪತ್ತನ್ನು ಕೆಲವು ರಾಜಕಾರಣಿಗಳು, ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದು, ಒಂದೊಂದು ಹಗರಣದಲ್ಲಿನ ಸಂಪತ್ತಿನ ಮೌಲ್ಯವೇ ದೇಶದ ಒಟ್ಟು ಬಜೆಟಿನ ಗಾತ್ರಕ್ಕಿಂತ ಹೆಚ್ಚಿದೆ. ಇವತ್ತು ಬಹಳ ಸುಲಭವಾಗಿ ಹಣ ಮಾಡಬಹುದು ಎಂಬ ಕಾರಣಕ್ಕೆ ಯುವ ಸಮುದಾಯವೂ ರಾಜಕಾರಣಿಗಳಾಗಬೇಕೆಂದು ಅಪೇಕ್ಷೆ ಪಡುವಂಥ ಆತಂಕಕಾರಿ ಸ್ಥಿತಿ ಎದುರಾಗಿದೆ. ಇಂಥ ಗಂಭೀರ ಪರಿಸ್ಥಿತಿಗಳು ದೇಶದ ಭವಿಷ್ಯವನ್ನು ಮಂಕಾಗಿಸುತ್ತಿವೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಅವರು ಭಾನುವಾರ ಬೆಳಗ್ಗೆ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರ ತೀರ್ಥರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಭೀರ ಸಮಾಲೋಚನೆ ನಡೆಸಿದರು.ಕೆಲವು ರಾಜ್ಯಗಳಲ್ಲಿನ ಒಂದೊಂದು ಹಗರಣದ ಮೊತ್ತ ಕೋಟ್ಯಂತರ ರು. ಗಳಾಗಿವೆ. ಯಾವ ಸಂವಿಧಾನ, ಯಾವ ಕಾನೂನುಗಳಿಂದಲೂ ಇದರ ನಿಯಂತ್ರಣ ಅಸಾಧ್ಯ ಎಂಬಂತಾಗಿದೆ. ರಾಜಕಾರಣಿಗಳು, ಕಾಯ್ದೆ ಕಾನೂನು ಸಂವಿಧಾನಗಳೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡುವಾಗ ಬಹಳ ಬೇಸರವಾಗುತ್ತಿದೆ. ಆದ್ದರಿಂದ ಹೊಸ ಪೀಳಿಗೆಗೆ ದುರಾಸೆಯಿಂದ ದೂರವಿರುವ, ದೇಶಾಭಿಮಾನ ಹಾಗೂ ಮಾನವೀಯತೆಯ ಪಾಠ ಹೇಳಬೇಕಾಗಿದೆ ಎಂದರು.
ಯತಿತ್ರಯರೂ ಹೆಗ್ಡೆಯವರ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿ ಅವರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
-------------------ನನಗಿರುವುದು ಒಂದೇ ಮನೆ, ಒಬ್ಬಳೇ ಹೆಂಡತಿ: ನ್ಯಾ. ಹೆಗ್ಡೆ ಪೇಜಾವರ ಶ್ರೀಗಳೊಂದಿಗೆ ಮಾತನಾಡುತ್ತಾ, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಹಗರಣವೊಂದರ ತನಿಖೆ ಮಾಡಿದ ಸಂದರ್ಭದಲ್ಲಿ ಅವರು ನನಗೆ ಕರೆ ಮಾಡಿ ಏರುಧ್ವನಿಯಿಂದ ಗದರಿಸಿದರು. ಆಗ ನಾನು ಹೇಳಿದೆ, ನಿಮ್ಮ ಏರುಧ್ವನಿಯ ಗದರಿಕೆ ಬೇಕಿಲ್ಲ. ನನಗೆ ಇರುವುದು ಒಂದೇ ಮನೆ, ಒಬ್ಬಳೇ ಹೆಂಡತಿ. ನಿಮ್ಮ ಅಪ್ಪನಂತೆಯೇ ನನ್ನ ತಂದೆಯವರೂ ರಾಜಕಾರಣಿಯಾಗಿದ್ದವರು, ಆದರೆ ಭ್ರಷ್ಟರಾಗಿರಲಿಲ್ಲ. ನನಗೆ ದುರಾಸೆ ಮತ್ತು ದೇಶದ ಸಂಪತ್ತನ್ನು ಲೂಟಿಹೊಡೆಯುವಂತೆ ಯಾರೂ ಹೇಳಿ ಕೊಟ್ಟಿಲ್ಲ ಎಂದು ಉತ್ತರ ನೀಡಿದ್ದೆ ಎಂದು ನ್ಯಾ.ಹೆಗ್ಡೆ ನೆನಪಿಸಿಕೊಂಡರು.ಇವತ್ತಿನ ತನಕ ರಾಜ್ಯದ 1836 ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡ್ತಾ ಇದ್ದೇನೆ. ನಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದೇನೆ. ಆದರೆ ಯಾರಿಂದಲೂ ಒಂದು ಪೈಸೆ ಖರ್ಚು ಪಡೆಯದೇ ನನ್ನ ಕಿಸೆಯಿಂದಲೇ ವ್ಯಯಿಸುತ್ತಿದ್ದೇನೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.