ಯಲಬುರ್ಗಾ: ತಾಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಅಧಿಕಾರಿ ಭ್ರಷ್ಟಾಚಾರ ನಡೆಸಿದರೆ ನಡೆಯುವುದಿಲ್ಲ. ಎಲ್ಲರೂ ಭ್ರಷ್ಟಚಾರ ಮುಕ್ತ ಆಡಳಿತಕ್ಕೆ ಸಹಕರಿಸಬೇಕು. ಸಮಯಪ್ರಜ್ಞೆ ಜತೆ ನನ್ನೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ: ತಾಲೂಕಿನ ಯಾವ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ಜನತೆಗೆ ನೀರು ಪೂರೈಕೆ ಮಾಡುವ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಬೇಕು. ಹಿಂದೆ ಮಾಡಿದ ರೀತಿಯಲ್ಲಿ ಕಾಮಗಾರಿಯನ್ನು ಬೇಜವಾಬ್ದಾರಿಯಿಂದ ಮಾಡಿದರೆ ಸಹಿಸುವುದಿಲ್ಲ. ಜೆಜೆಎಂ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದೆ. ಹಾಗೆಯೇ ತಾಲೂಕಿನ ವಿವಿಧ ಭಾಗಗಳಲ್ಲಿ ಈ ಯೋಜನೆಯಡಿ ಪೈಪ್‌ಲೈನ್ ಹಾಳಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಅವುಗಳನ್ನು ಸರಿಪಡಿಸಿ ನೀರು ಪೂರೈಸಬೇಕು ಎಂದು ಹೇಳುತ್ತಿದ್ದಂತೆ ಎಇಇ ರಿಜ್ವಾನಬೇಗಂ ಪ್ರತಿಕ್ರಿಯಿಸಿ, ಗುತ್ತಿಗೆದಾರರು ಮಾಡಿದ ತಪ್ಪಿಗೆ ಹೀಗಾಗಿದೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಾಮಗಾರಿಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ತಾಲೂಕಿನ ಎಲ್ಲ ಗ್ರಾಪಂ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ಕಸ ವಿಲೇವಾರಿ, ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸರಿಪಡಿಸುವ ಮುಖ್ಯ ಜವಾಬ್ದಾರಿ ಆಯಾಯ ಪಿಡಿಒಗಳ ಮೇಲಿದೆ. ಶಾಲಾ ಕಟ್ಟಡಗಳು, ವಸತಿ ನಿಲಯಗಳು, ನಿರ್ಮಿಸಿದ ಕೆಲವೇ ತಿಂಗಳಗಳಲ್ಲಿ ಮೇಲ್ಚಾವಣಿ ಕುಸಿತವಾಗುತ್ತಿವೆ ಎಂದು ರಾಯರಡ್ಡಿ ಹೇಳಿದರು. ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲು ಕೆಕೆಆರ್‌ಡಿಬಿ, ನಿರ್ಮಿತಿ ಕೇಂದ್ರ, ಜಿಪಂ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನ ಬಳಗೇರಿ, ಬಂಡಿ, ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಹೊಸದಾಗಿ ಆರೋಗ್ಯ ಪ್ರಾಥಮಿಕ ಕೇಂದ್ರಗಳನ್ನು ಮಂಜೂರು ಮಾಡಿಸಲಾಗಿದೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಕರೆಯಿಸಿ ಅವುಗಳಿಗೆ ಚಾಲನೆ ನೀಡಲಾಗುವುದು. ಇನ್ನೂ ಪಟ್ಟಣ ಸೇರಿದಂತೆ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ಸಚಿವರ ಜತೆ ಚರ್ಚಿಸಿ ನೀಗಿಸಲಾಗುವುದು ಎಂದರು.
ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪ್ರಾಣೇಶ, ಸಿಪಿಐ ಮೌನೇಶ್ವರ ಮಾಲಿಪಾಟೀಲ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.