ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭ್ರಷ್ಟಾಚಾರ ದೇಶಕ್ಕೆ ದೊಡ್ದ ಮಾರಕ. ಇದನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿ ಹಂತದಲ್ಲೇ ಅರಿವು ಮೂಡಿಸಲಾಗುತ್ತಿದೆ ಎಂದು ಮಂಡ್ಯದ ಲೋಕಾಯುಕ್ತ ವಿಭಾಗದ ಎಸ್‍ಪಿ ಸುರೇಶ್ ಬಾಬು ಹೇಳಿದರು.ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಜಾಗೃತಿ ನಮ್ಮ ಒಟ್ಟು ಜವಾಬ್ದಾರಿಯಾಗಿದೆ. ಸಪ್ತಾಹದ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಸುಧಾರಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಅಪರಾಧ, ಭ್ರಷ್ಟಾಚಾರ ಹಾಗೂ ದುರ್ನಡತೆ ಬಗ್ಗೆ ವಿವರಿಸಿದ ಅವರು, ಸಂಬಳ ಬಿಟ್ಟು ಬೇರೆ ಯಾವುದೇ ರೂಪರ ಹಣ ಪಡೆದರೂ ಅದು ಭ್ರಷ್ಟಾಚಾರ. ಡೆನ್ಮಾರ್ಕ್, ಫಿನ್‌ಲ್ಯಾಂಡ್ ನಂತಹ ದೇಶಗಳಲ್ಲಿ ಭ್ರಷ್ಟಾಚಾರ ತುಂಬಾ ಕಡಿಮೆ ಇದೆ. ಪ್ರತಿಯೊಬ್ಬರು ಭ್ರಷ್ಟಾಚಾರದ ವಿರುದ್ಧ ಕಾನೂನು ಅರಿವು, ಕರ್ತವ್ಯ ತಿಳಿವಳಿಕೆ ಇರಬೇಕು ಎಂದರು.ಮಂಡ್ಯದ ಲೋಕಾಯುಕ್ತ ವಿಭಾಗದ ಡಿವೈಎಸ್ಪಿ ಎಸ್.ಎಚ್.ಸುನೀಲ್ ಕುಮಾರ್ ಮಾತನಾಡಿ, ಕ್ಯಾನ್ಸರ್ ರಿಂದ ಭ್ರಷ್ಟಾಚಾರ ಹರಡುತ್ತಲೇ ಇದೆ. ದೇಶದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಇದಕ್ಕಾಗಿ ವಿದ್ಯಾರ್ಥಿ, ಯುವ ಸಮುೂಹ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಅಕ್ರಮ ದಾರಿಯಲ್ಲಿ ಹೋದರೆ ನ್ಯಾಯ ಬದ್ಧವಾಗಿ ಆಗಬೇಕಾದ ಕೆಲಸ ಆಗಲ್ಲ. ಭ್ರಷ್ಟಾಚಾರದಿಂದಾಗುವ ಅನಾಹುತಗಳಿಂದ ಕಾನೂನಿನ ಮೇಲೆ ನಂಬಿಕೆ ಇರೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಮಾನತೆ ಇರುವುದಿಲ್ಲ. ಭ್ರಷ್ಟತೆ ಹೆಚ್ಚಾದಂತೆ ಬಡತನ ಹೆಚ್ಚಾಗುತ್ತಿದೆ ಎಂದು ಎಚ್ಚರಿಸಿದರು.ಸಾರ್ವಜನಿಕರು ಯಾವುದೇ ಇಲಾಖೆಯಲ್ಲಿ ಕೆಲಸ ಆಗದೇ ಇರುವಾಗ ಮತ್ತು ತಮ್ಮನ್ನು ಸತಾಯಿಸಿದಲ್ಲಿ ಹಾಗೂ ತಮ್ಮಲ್ಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಲೋಕಾಯುಕ್ತ ಕಚೇರಿಗೆ ದೂರಗಳನ್ನು ಸಲ್ಲಿಸಬೇಕು. ಅದೂ ಕೂಡಾ ಸೂಕ್ತ ದಾಖಲೆಯೊಂದಿಗೆ ಎಂದರು.
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕುಮಾರ್ ಮಾತನಾಡಿ, ಶೇ.90% ವಿದ್ಯಾರ್ಥಿಗಳಿಗೆ ಸರಕಾರ ಕೆಲಸಕ್ಕೆ ಸೇರಬೇಕೆಂಬ ಬಯಕೆ ಇದೆ. ನಿಮಗೆ ಮೊದಲು ಕಾನೂನಿನ ಅರಿವು ಇದ್ದರೆ ಸಮಾಜವನ್ನು ಸುಧಾರಣೆ ಮಾಡಬಹುದು. ಹೀಗಾಗಿ ಇಂತಹ ಅರಿವು, ಸಪ್ತಾಹವನ್ನು ಆಯೋಜಿಸಲಾಗಿದೆ ಎಂದರು.ಲಂಚ ಪಡೆಯುವುದು, ನೀಡುವುದು ಕಾನೂನು ಪ್ರಕಾರ ಅಪರಾಧ. ಇದರಲ್ಲಿ ಭಾಗಿಯಾದವರಿಗೆ ಜೈಲು ಶಿಕ್ಷೆ ಜೊತೆಗೆ ಕೆಲಸದಿಂದ ವಜಾಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಆಗಬೇಕಿದೆ ಹೇಳಿದರು.
ಇದೇ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕುಮಾರ್ ಅವರು ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳೊಂದಿಗೆ ಮಂಡ್ಯದ ಲೋಕಾಯುಕ್ತ ವಿಭಾಗದ ಎಸ್‍ಪಿ ಸುರೇಶ್ ಬಾಬು ಸಂವಾದ ನಡೆಸಿದರು.ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗಿಯಾಗಿದ್ದರು.