ಸಿದ್ದರಾಮಯ್ಯ ಜೀವನಪೂರ್ತಿ ರಾಜಕಾರಣದಲ್ಲಿ ಇರಬೇಕು: ಸಚಿವ ಲಾಡ್‌

KannadaprabhaNewsNetwork |  
Published : Oct 29, 2025, 01:15 AM IST
ne[ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನಪೂರ್ತಿ ರಾಜಕಾರಣದಲ್ಲಿ ಇದ್ದುಕೊಂಡು ಜನರ ಸೇವೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕಲಘಟಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜಕೀಯದಿಂದ ನಿವೃತ್ತಿಯಾಗಬಾರದು. ಅವರು ಜೀವನಪೂರ್ತಿ ರಾಜಕಾರಣದಲ್ಲಿ ಇದ್ದುಕೊಂಡು ಜನರ ಸೇವೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಸಿದ್ದರಾಮಯ್ಯ ಅವರಿಗೆ ದೀರ್ಘಾಯುಷ್ಯ ನೀಡಬೇಕು. ಅವರು ಸುದೀರ್ಘವಾಗಿ ರಾಜಕೀಯ ಜೀವನದಲ್ಲಿ ಸದಾಕಾಲ ಮುಂದುವರೆಯಬೇಕು. ರಾಜ್ಯದ ಜನತೆಗೆ ಅವರ ಸಾರ್ವಜನಿಕ ಜೀವನ ಅಗತ್ಯವಾಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಅವರು ಸ್ಪರ್ಧಿಸಬೇಕು ಎಂದು ಮನವಿ ಮಾಡುತ್ತೇನೆ‌ ಎಂದರು.

ಸಹಜ ಪ್ರಕ್ರಿಯೆ

ಸಚಿವ ಸಂಪುಟ ವಿಸ್ತರಣೆ ಸಹಜ ಪ್ರಕ್ರಿಯೆ. ಅದರಲ್ಲಿ ಕ್ರಾಂತಿ ಇಲ್ಲ. ಎಲ್ಲ ಸರ್ಕಾರಗಳು ಮಂತ್ರಿಮಂಡಲ ರಚಿಸುತ್ತವೆ. ಪುನರಚನೆ, ವಿಸ್ತರಣೆ ಎಂದಮೇಲೆ ಕೆಲವರನ್ನು ಸಚಿವ ಸ್ಥಾನದಿಂದ ಕೈಬಿಡುವುದು ಇನ್ನೂ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ರಾಜಕಾರಣಕ್ಕೆ ಬಂದಮೇಲೆ ಎಲ್ಲರೂ ಎಲ್ಲ ತ್ಯಾಗಕ್ಕೂ ಸಿದ್ಧರಿರಬೇಕು ಎಂದರು.

ಗೊಂದಲ ಸೃಷ್ಟಿಸುವ ಕಾರ್ಯ

ಮುಖ್ಯಮಂತ್ರಿ, ಸಚಿವ ಸಂಪುಟ ಪುನಾರಚನೆ ಹೈಕಮಾಂಡ್ ನಿರ್ಧಾರ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವಾಗ ನಾವು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಕುರಿತು ಮಾಧ್ಯಮಗಳು ವಿನಾಕಾರಣ ಗೊಂದಲ ಸೃಷ್ಟಿಸುವ ಕಾರ್ಯವಾಗುತ್ತಿವೆ ಎಂದರು.

ಗಡ್ಕರಿ ಮುಂದಿನ ಪ್ರಧಾನಿ?

ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಬಗ್ಗೆ ಪ್ರತಿಪಕ್ಷಗಳಿಗೆ ಏಕೆ ಕುತೂಹಲವಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇದರಿಂದ ಅವರಿಗೇನು ಆಗಬೇಕಿಲ್ಲ. ಪ್ರತಿಪಕ್ಷದವರು ಜನರಲ್ಲಿ ವಿನಾಕಾರಣ ಗೊಂದಲ‌ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬಿಜೆಪಿಗರು ತಮ್ಮ ಪಕ್ಷದ ಬಗ್ಗೆಯೂ ಒಂದಿಷ್ಟು ಮಾತನಾಡಲಿ. ಈಗಿರುವ ಪ್ರಧಾನಮಂತ್ರಿಯವರನ್ನು ಬದಲಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಏಕೆ ಪ್ರಧಾನಿ ಆಗಬಾರದು? ಎಂದು ತಿರುಗೇಟು ನೀಡಿದರು.

ದರ ನಿಗದಿ ಮಾಡದೇ ಕಬ್ಬು ನುರಿಸುವ ಕಾರ್ಯ ಆರಂಭವಾಗಿದೆ. ಕಬ್ಬು ಆಯುಕ್ತರು ನಿಗದಿ ಮಾಡುವ ದರವನ್ನು ಸಕ್ಕರೆ ಕಾರ್ಖಾನೆಗಳು ಕೊಡಬೇಕು. ಈಗಾಗಲೇ ಬಾಕಿಯಿರುವ ₹10 ಕೋಟಿ ಹಣವನ್ನು ರೈತರಿಗೆ ನೀಡುವಂತೆ ಕೋರ್ಟ್ ಸಹ ಸೂಚಿಸಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಅತಿವೃಷ್ಟಿಯಾಗಿರುವ ಪ್ರದೇಶಗಳಲ್ಲಿ ಈಗಾಗಲೇ ಸರ್ವೇ ಮಾಡಲಾಗಿದೆ. ಇನ್ನು ಕೆಲವೆಡೆ ಮರು ಸಮೀಕ್ಷೆಗೂ ಸೂಚಿಸಲಾಗಿದೆ. ಖರೀದಿ ಕೇಂದ್ರಗಳನ್ನು ಇಂದೇ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಬೆಂಬಲ ಬೆಲೆಯಲ್ಲಿ ಮೊದಲು ಸೋಯಾಬಿನ್ ಖರೀದಿ ಮಾಡಲಾಗುತ್ತದೆ. ಬಳಿಕ ಹೆಸರು ಮತ್ತು ಉದ್ದು ಬೆಳೆಯನ್ನು ಖರೀದಿಸಲಾಗುವುದು. ಗೋವಿನಜೋಳ ಖರೀದಿಸಬೇಕೆಂದು ರೈತರು ಮನವಿ ಮಾಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು