ಗುರುರಾಜ ಗೌಡೂರು
ಕನ್ನಡಪ್ರಭ ವಾರ್ತೆ ಲಿಂಗಸುಗೂರುಹತ್ತಿ ಬಿತ್ತಿ ಬತ್ತಿ ಕಾಣೆ, ಜೋಳ ಬಿತ್ತಿ ಬಾನ ಕಾಣೆ, ಮನೆ ತುಂಬ ಮಕ್ಕಳು ಹಡೆದೆ, ಗಂಡನ ಸುಖ ಸಿಗಲಿಲ್ಲ ಎಂಬಂತೆ ಇತ್ತೀಚೆಗೆ ಎಡಬಿಡದೇ ಸುರಿಯುತ್ತಿರುವ ಮಳೆಗೆ ಕೊಳೆಯುತ್ತಿರುವ ಬೆಳೆ ಕಂಡು ಹತಾಸೆಗೊಂಡ ಅನ್ನದಾತನ ಅಳಲಾಗಿದೆ.
ಪ್ರಸಕ್ತ ಮುಂಗಾರು ನಿರೀಕ್ಷೆಗೂ ಮೊದಲೇ ಪ್ರವೇಶ ಆಯಿತು. ರೈತರು ಮುಂಗಾರಿನ ದೀರ್ಘ ಕಾಲದ ಬೆಳೆಗಳಾದ ಹತ್ತಿ, ತೊಗರಿ, ಜೊತೆಗೆ ಮೂರು ತಿಂಗಳಲ್ಲಿ ಬೆಳೆಯುವ ಸಜ್ಜೆ, ಸೂರ್ಯಕಾಂತಿ, ಎಳ್ಳು, ಹೆಸರು, ಸೂರ್ಯಕಾಂತಿ ಸೇರಿದಂತೆ ಬಿತ್ತನೆ ಮಾಡಿದರು. ಬಿತ್ತನೆ ಬಳಿಕ ಮಳೆ ಬಾರದೇ ಖುಷ್ಕಿ ಪ್ರದೇಶದ ಮುದಗಲ್ ಹೋಬಳಿಯಲ್ಲಿ ತೊಗರಿ, ಸಜ್ಜೆ ಬಾಡಿದ್ದವು ಇನ್ನೇನೂ ಮಳೆ ಬರಲ್ಲ ಬೆಳೆ ಕಥೆ ಮುಗಿಯಿತು ಎನ್ನುವಾಗಲೇ ವರುಣ ಭರ್ಜರಿ ಆಗಮನ ಮುಂಗಾರು ಬೆಳೆಗೆ ಹೊಸ ಕಳೆ ಉಂಟು ಮಾಡಿತು. ಬೆಳೆಯ ಬೆಳವಣಿಗೆ ಕಣ್ತುಂಬಿಕೊಂಡ ರೈತರು ಆನಂದತುಂದಿಲರಾದರು.ಆಶ್ಲೇಷ, ಮೇಘ ಮಳೆಗಳ ಬಿಡದೇ ಸುರಿಯುತ್ತಿವೆ. ಪರಿಣಾಮ ಹತ್ತಿಗೆ ತಾಮ್ರ ರೋಗ ಅಂಟಿದರೆ ತೊಗರಿಗೆ ಸಿಡಿ ರೋಗ ಬಂದು ಒಣಗಲು ಆರಂಭಿಸಿದೆ. ಈಗಾಗಲೇ ತಗ್ಗು ಪ್ರದೇಶದಲ್ಲಿ ತೇವಾಂಶ ಹೆಚ್ಚಾಗಿದೆ. ಭೂಮಿಯಲ್ಲಿ ಊಟಿ ನೀರು ಜಿನುಗುತ್ತಿದೆ. ಪರಿಣಾಮ ಮುಂಗಾರು ಹಂಗಾಮಿನ ಬೆಳೆಗಳು ಅಧಿಕ ತೇವಾಂಶದಿಂದ ಒಣಗಲು ಆರಂಭಿಸಿವೆ. ಅತಿಯಾದ ಮಳೆ ಅತಿವೃಷ್ಠಿಯತ್ತ ಸಾಗುತ್ತಿದೆ.
ಇನ್ನೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಸಜ್ಜೆ ಬೆಳೆಗಳು ಕಟಾವಿಗೆ ಬಂದಿವೆ, ಎಳ್ಳು ಕಿತ್ತಿಗೂಡು ಕಟ್ಟಿದ್ದು ಬೆಳೆ ರಾಶಿ ಮಾಡಿಕೊಳ್ಳಲು ಅಸಾಧ್ಯವೆಂಬಂತೆ ಮಳೆ ಬರುತ್ತಿದೆ. ಉತ್ತಮ ಬೆಳೆ ಕನಸು ಕಂಡಿದ್ದ ರೈತರಿಗೆ ವಿಪರೀತ ಮಳೆ ಚಿಂತೆಯ ಮಡುವಿಗೆ ನೂಕಿದೆ.ಮಳೆಯಿಂದ ನಗರ, ಪಟ್ಟಣ, ಗ್ರಾಮಗಳ ಮಣ್ಣಿನ ರಸ್ತೆಗಳು ಕೆಸರುಮಯವಾಗಿವೆ. ಜನ ಜೀವನ ಮಳೆಯಿಂದ ನಲುಗಿದ್ದು ಜನರ ಸಂಚಾರ ನಿಸ್ತೇಜವಾಗಿದೆ. ಇನ್ನೂ ಕೃಷಿ ಚಟುವಟಿಕೆಗೆ ಇಲ್ಲದೇ ರೈತರು ಕೈಕಟ್ಟಿ ಕುಳಿತಿದ್ದಾರೆ. ದನ-ಕರುಗಳು ಮೇಯಲು ತೊಂದರೆ ಆಗಿದೆ. ಕುರಿ-ಮೇಕೆಗಳು ನೀರು ಕುಡಿಯುತ್ತಿಲ್ಲ. ಮಳೆ ಕಾಲುಗಳು ನೆಂದು ಕುಂಟು ಬಿದ್ದಿವೆ. ಸಮರ್ಪಕ ಆಹಾರ, ಗೂಡು ಸಿಗದೇ ಪರಿತಪಿಸುತ್ತಿವೆ.
---ವಿಪರೀತ ಮಳೆ ಜನಜೀವನ ತೊಂದರೆಗೆ ನೂಕಿದೆ. ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ. ಇನ್ನೂ ದನ-ಕರು, ಕುರಿ-ಮೇಕೆಗಳಿಗೆ ನೀರು ಕುಡಿಯಲು ಆಗುತ್ತಿಲ್ಲ. ಮೇವು ಸರಿಯಾಗಿ ಸಿಗದೇ ಮಳೆ ತೀವ್ರ ತೊಂದರೆ ತಂದೊಡ್ಡಿದೆ.
- ಗಿರಿಯಪ್ಪ ಕನ್ನಾಳ, ರೈತ ನರಕಲದಿನ್ನಿ.