ಪರಿಷತ್‌ ಚುನಾವಣೆ: ಕೈಗೆ ಭರ್ಜರಿ ಗೆಲುವು

KannadaprabhaNewsNetwork |  
Published : Jun 19, 2026, 02:00 AM IST
ಪರಿಷತ್‌ ಚುನಾವಣೆ | Kannada Prabha

ಸಾರಾಂಶ

ಗುರುವಾರ ನಡೆದ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನಿಖರ ತಂತ್ರಗಾರಿಕೆ, ಅಳೆದು ತೂಗಿ ಮತಗಳ ಹಂಚಿಕೆ, ವಿಪಕ್ಷ ಶಾಸಕರಿಂದ ಅಡ್ಡ ಮತದಾನ ಮಾಡಿಸುವಲ್ಲಿ ಕಂಡ ಯಶಸ್ಸಿನಿಂದಾಗಿ ಗುರುವಾರ ನಡೆದ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಮೂಲಕ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಶಾಸಕರ ಒಗ್ಗಟ್ಟು ಒಡೆಯುವಲ್ಲಿ ಕಾಂಗ್ರೆಸ್‌ ಸಫಲವಾಗಿದೆ.

ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಲೆಂದೇ ಮತಗಳ ಸಂಖ್ಯೆ ಕಡಿಮೆಯಿದ್ದರೂ ಐದನೇ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಮೊದಲಿಗೆ ನಾಲ್ವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿ ನಂತರ ಮತಗಳ ಲೆಕ್ಕಾಚಾರ, ಎರಡನೇ ಪ್ರಾಶಸ್ತ್ಯ ಮತಗಳ ಪರಿಗಣನೆ ಹಾಗೂ ವಿರೋಧ ಪಕ್ಷದಲ್ಲಿನ ಅಸಮಾಧಾನಿತ ಶಾಸಕರನ್ನು ಸೆಳೆಯುವ ತಂತ್ರಗಾರಿಕೆ ಮೂಲಕ ಐದನೇ ಅಭ್ಯರ್ಥಿಯಾಗಿ ವಿನಯ್‌ ಕಾರ್ತಿಕ್‌ ಅವರನ್ನು ಕಣಕ್ಕಿಳಿಸಲಾಗಿತ್ತು. ಇದೀಗ ವಿರೋಧ ಪಕ್ಷದ 11 ಶಾಸಕರು ವಿನಯ್‌ ಕಾರ್ತಿಕ್‌ ಪರ ಮತ ಚಲಾವಣೆ ಮಾಡಿದ ಪರಿಣಾಮ, ಸಂಖ್ಯಾಬಲವಿಲ್ಲದಿದ್ದರೂ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ಗೆಲುವು ಸಾಧಿಸಿದ್ದಾರೆ.

ಮತ ಹಂಚಿಕೆಯಲ್ಲಿ ನಿಖರ ಲೆಕ್ಕಾಚಾರ:

ಐವರು ಅಭ್ಯರ್ಥಿಗಳಿಗೂ ಕಾಂಗ್ರೆಸ್‌ ಅಳೆದು ತೂಗಿ ಎಚ್ಚರಿಕೆಯಿಂದ ಮತ ಹಂಚಿಕೆ ಮಾಡಿತ್ತು. ಕಾಂಗ್ರೆಸ್‌ನ 134, ಪಕ್ಷೇತರ 4 ಹಾಗೂ ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಅವರ ಮತಗಳು ಸೇರಿ ಕಾಂಗ್ರೆಸ್‌ ಅಭ್ಯರ್ಥಿಗೆ 140 ಮತಗಳಿದ್ದವು. ಇನ್ನು, ಪ್ರತಿ ಅಭ್ಯರ್ಥಿಗೂ ಗೆಲುವಿಗಾಗಿ ಮೊದಲ ಪ್ರಾಶಸ್ತ್ಯದ ತಲಾ 28 ಮತಗಳು ಅಗತ್ಯವಿದ್ದವು. ಆದರೂ, ಮೊದಲ ನಾಲ್ವರು ಅಭ್ಯರ್ಥಿಗಳ ಪೈಕಿ ಬಿ.ಕೆ.ಹರಿಪ್ರಸಾದ್‌, ಬಿ.ಎಸ್‌.ಶಿವಣ್ಣ, ತಿಪ್ಪಣ್ಣಪ್ಪ ಕಮಕನೂರು ಅವರಿಗೆ ತಲಾ 30 ಮತಗಳನ್ನು ಹಂಚಿಕೆ ಮಾಡಿ, ಉಳಿದ 50 ಮತಗಳಲ್ಲಿ ಪಿ.ವಿ.ಮೋಹನ್‌ಗೆ 29 ಮತ್ತು ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ಗೆ 21 ಮತಗಳನ್ನು ಹಂಚಿಕೆ ಮಾಡಲಾಗಿತ್ತು. ಉಳಿದಂತೆ ಎರಡನೇ ಪ್ರಾಶಸ್ತ್ಯದ ಮತಗಳ ಪೈಕಿ ಎಲ್ಲವನ್ನೂ ವಿನಯ್‌ ಕಾರ್ತಿಕ್‌ ಪರ ಚಲಾವಣೆ ಮಾಡುವಂತೆ ಸೂಚಿಸಲಾಗಿತ್ತು. ಆ ಮೂಲಕ ವಿನಯ್‌ ಕಾರ್ತಿಕ್‌ ಅವರನ್ನು ಗೆಲ್ಲಿಸಲು ಯೋಜನೆ ರೂಪಿಸಲಾಗಿತ್ತು.

11 ಶಾಸಕರನ್ನು ಸೆಳೆಯುವಲ್ಲಿ ಸಫಲ:

ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗಿನಿಂದ ಬಿಜೆಪಿ ಮತ್ತು ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿಯಿತ್ತು. ಅದರಲ್ಲೂ ಜೆಡಿಎಸ್‌ನಿಂದ ಹೆಚ್ಚಿನ ಶಾಸಕರ ಮತ ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಚಲಾವಣೆಯಾಗುತ್ತದೆ ಎಂಬ ಅನುಮಾನ ಇತ್ತು. ಆದರೆ, ಬಿಜೆಪಿಗೆ ಅಡ್ಡ ಮತದಾನದ ಪರಿಣಾಮ ಅಷ್ಟಾಗಿ ಇರುವುದಿಲ್ಲ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಜೆಡಿಎಸ್‌ ಸೇರಿ ಬಿಜಪಿ ಶಾಸಕರು ಕೂಡ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಪರ ಅಡ್ಡ ಮತದಾನ ಮಾಡಿದ್ದಾರೆ. ಅದರ ಪರಿಣಾಮ ಕಾಂಗ್ರೆಸ್‌ನಿಂದ ನಿಗದಿಯಾಗಿದ್ದ 21 ಮತ್ತು ಬಿಜೆಪಿ-ಜೆಡಿಎಸ್‌ನ 11 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಸೇರಿ ಒಟ್ಟು 32 ಮತಗಳು ಲಬಿಸಿ ವಿನಯ್‌ ಕಾರ್ತಿಕ್‌ ಗೆಲುವು ಸಾಧಿಸಿದರು. ಅಲ್ಲದೆ, ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷದ ಉಳಿದ ನಾಲ್ವರು ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿದರು.

ಬಿಜೆಪಿಗೆ ಭ್ರಮನಿರಸನ:

ಅಡ್ಡ ಮತದಾನದ ಸುಳಿವೇ ಇಲ್ಲದ ಬಿಜೆಪಿಗೆ ಇದು ಭ್ರಮನಿರಸ ಉಂಟು ಮಾಡಿದೆ. ಬಿಜೆಪಿಯಲ್ಲಿನ ಅಸಮಾಧಾನಿತ ಶಾಸಕರಿಂದಲೇ ಅಡ್ಡ ಮತದಾನ ನಡೆದಿದೆ ಎಂದು ಹೇಳಲಾಗುತ್ತಿದೆ. ಅದರ ಜತೆಗೆ ಕೆಲ ಪ್ರಕರಣಗಳಿಂದ ರಿಲೀಫ್‌ ನೀಡುವುದು, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, 2028ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಭರವಸೆಯನ್ನು ಕಾಂಗ್ರೆಸ್‌ನಿಂದ ನೀಡಿದ ಪರಿಣಾಮ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಮೊದಲ ಸವಾಲು ಗೆದ್ದ ನೂತನ ಸಿಎಂ ಡಿಕೆಶಿ-ಕೆಪಿಸಿಸಿ ಅಧ್ಯಕ್ಷ ಬಿಕೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ತಮಗೆ ಎದುರಾಗಿದ್ದ ವಿಧಾನ ಪರಿಷತ್‌ ಚುನಾವಣೆಯೆಂಬ ಮೊದಲ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಗೆಲುವು ಸಾಧಿಸಿದ್ದಾರೆ. ಶಾಸಕರನ್ನು ಹಿಡಿದಿಟ್ಟಿದ್ದು, ಸಿದ್ದರಾಮಯ್ಯ ಸೇರಿ ಪಕ್ಷದ ಹಿರಿಯ ನಾಯಕರೊಂದಿಗಿನ ನಿರಂತರ ಸಂಪರ್ಕ, ಶಾಸಕರಿಗೆ ಮಾರ್ಗದರ್ಶನ ಕೊಡಿಸಿದ್ದು, ಮತಗಳ ಹಂಚಿಕೆಯಲ್ಲಿ ತೋರಿದ ನಿಖರತೆ, ವಿರೋಧ ಪಕ್ಷಗಳ ಶಾಸಕರಲ್ಲಿ ಯಾರು ಅಡ್ಡ ಮತದಾನ ಮಾಡಬಹುದು ಎಂಬುದು ಗುರುತಿಸುವಲ್ಲಿ ಇಬ್ಬರೂ ನಾಯಕರು ಸಫಲರಾಗಿದ್ದಾರೆ. ಆಮೂಲಕ ಐದನೇ ಅಭ್ಯರ್ಥಿ ಗೆಲುವಿಗೆ ಸಂಖ್ಯಾಬಲ ಕೊರತೆಯಿದ್ದರೂ ವಿಪಕ್ಷಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ್ಕಿಯ ಸುದೀರ್ಘ ಇತಿಹಾಸ ಬಿಂಬಿಸುವ ದಿ ಲ್ಯಾಂಪ್‌ ಬೆರರ್ಸ್‌ ಕೃತಿ
ಅಳ್ನಾವರಕ್ಕೆ ಬೇಕು ಶರವೇಗದ ಅಭಿವೃದ್ಧಿ ಭಾಗ್ಯ!