ಬಸವರಾಜ ಹಿರೇಮಠ

ಧಾರವಾಡ:

ನೂತನ ತಾಲೂಕು ರಚನೆಯಾಗಿ ಏಳು ವರ್ಷಗಳಾದರೂ ಅಳ್ನಾವರ ಮಾತ್ರ ಅಭಿವೃದ್ಧಿಯ ಹಾದಿಗೆ ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರೂ ಆಗಿದ್ದ ಸಂತೋಷ ಲಾಡ್ ಅವರ ಸ್ವ ಕ್ಷೇತ್ರ ಕ್ಷೇತ್ರದ ಪ್ರಮುಖ ಭಾಗವಾದ ಅಳ್ನಾವರ ಹೆಸರಿಗೆ ಮಾತ್ರ ತಾಲೂಕು. ಇಲ್ಲಿ ಆಡಳಿತಾತ್ಮಕವಾಗಿ ಹೇಳಿಕೊಳ್ಳುವ ಯಾವ ಬದಲಾವಣೆ ಆಗಿಲ್ಲ ಎಂಬುದು ಅಳ್ನಾವರ ಜನರ ಬೇಸರದ ಮಾತು.

ಮೂರು ದಶಕಗಳ ತೀವ್ರ ಹೋರಾಟದ ಫಲವಾಗಿ ಪ್ರತ್ಯೇಕ ತಾಲೂಕಿನ ಬೇಡಿಕೆಯನ್ನು ರಾಜ್ಯ ಸರ್ಕಾರ 2019ರಲ್ಲಿ ಹೊಸ ತಾಲೂಕು ಎಂದು ಘೋಷಣೆ ಮಾಡಿತ್ತು. ಧಾರವಾಡದಿಂದ ಸುಮಾರು 35 ಕಿಮೀ ದೂರದಲ್ಲಿರುವ ಅಳ್ನಾವರ 35,000 ಜನಸಂಖ್ಯೆ ಹೊಂದಿರುವ ಕೃಷಿ ಪ್ರಧಾನ ಪಟ್ಟಣ. ಈ ತಾಲೂಕಿನಲ್ಲಿ ಅಳ್ನಾವರ ಪಟ್ಟಣ ಪಂಚಾಯ್ತಿ ಸೇರಿದಂತೆ ಕಡಬಗಟ್ಟಿ, ಬೆಣಚಿ, ಅರವಟಿಗಿ ಹಾಗೂ ಹೊನ್ನಾಪೂರ ಎಂಬ ಗ್ರಾಮ ಪಂಚಾಯ್ತಿಗಳಿದ್ದು ಒಟ್ಟು 13 ಕಂದಾಯ ಗ್ರಾಮಗಳನ್ನು ಹೊಂದಿರುವ ರಾಜ್ಯದ ಅತ್ಯಂತ ಚಿಕ್ಕ ತಾಲೂಕು ಹೌದು.

ಮೂರೇ ಕಚೇರಿಗಳ ತಾಲೂಕು:


ಸಾಮಾನ್ಯವಾಗಿ ಒಂದು ತಾಲೂಕಿನಲ್ಲಿ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ, ನ್ಯಾಯಾಲಯ, ಆರೋಗ್ಯ ಹೀಗೆ ಅನೇಕ ಇಲಾಖೆಗಳ ಅಗತ್ಯತೆ ಇದೆ. ಆದರೆ, ಅಳ್ನಾವರದಲ್ಲಿ ತಹಸೀಲ್ದಾರ್‌ ಕಚೇರಿಯಲ್ಲಿಯೇ ಖಜಾನೆ ಇಲಾಖೆ ಹಾಗೂ ಎಪಿಎಂಸಿ ಆವರಣದ ಸಭಾಭವನದಲ್ಲಿ ತಾಲೂಕು ಪಂಚಾಯ್ತಿ ಹೊರತುಪಡಿಸಿ ಮತ್ತ್ಯಾವ ಸರ್ಕಾರಿ ಕಚೇರಿಗಳಿಲ್ಲ. ಹೀಗಾಗಿ ಪ್ರತಿಯೊಂದು ಪ್ರಮುಖ ಕಾರ್ಯಕ್ಕಾಗಿ ಅಳ್ನಾವರ ಜನರು ಧಾರವಾಡಕ್ಕೆ ಬರುವುದು ಮಾತ್ರ ತಪ್ಪಿಲ್ಲ.

ವಿಶೇಷ ಅನುದಾನವಿಲ್ಲ:

ಅಳ್ನಾವರ ಅಭಿವೃದ್ಧಿ ಕಾಣದೇ ಪಟ್ಟಣ ಪಂಚಾಯ್ತಿ ಮಾದರಿಯಲ್ಲಿ ಇದ್ದು, ದಾಂಡೇಲಿಯ ಕಾಳಿ ನದಿಯಿಂದ ಕುಡಿಯುವ ನೀರು ಹೊರತುಪಡಿಸಿ ಅಗತ್ಯ ಮೂಲಸೌಕರ್ಯ ಒದಗಿಸಲು, ಸರ್ಕಾರಿ ಕಚೇರಿ ಸ್ಥಾಪಿಸಲು ಹಾಗೂ ಹೊಸ ತಾಲೂಕು ಅಭಿವೃದ್ಧಿಗೆ ವಿಶೇಷ ಹಣ ಒದಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ ಎಂಬುದು ಕಣ್ಮುಂದಿದೆ. ಅಳ್ನಾವರದ ಮೂಲಕ ಹಾದು ಹೋಗುವ ಮತ್ತು ಕರ್ನಾಟಕವನ್ನು ಗೋವಾಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸ್ಥಿತಿ ಹೇಳುವಂತಿಲ್ಲ. ನಿತ್ಯದ ಪ್ರಯಾಣಿಕರಿಗೆ ಹದಗೆಟ್ಟ ರಸ್ತೆ ಹಾಗೂ ಸೇತುವೆ ತೀವ್ರ ತೊಂದರೆಯಾಗಿದೆ. ಇದು ಸ್ಥಳೀಯ ಕಟ್ಟಿಗೆ ವ್ಯವಹಾರಗಳ ಮೇಲೂ ಪರಿಣಾಮ ಬೀರಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಕಾಗದದ ಮೇಲೆ ಕ್ರೀಡಾಂಗಣ:

ಅಳ್ನಾವರದಲ್ಲಿ ಕ್ರೀಡಾ ಮೂಲಸೌಕರ್ಯವೂ ಇಲ್ಲ. ಕಾಗದದ ಮೇಲೆ ಮಾತ್ರ ಕ್ರೀಡಾಂಗಣವಿದ್ದು, ಸ್ಥಳೀಯ ಕ್ರೀಡಾಪುಟಗಳು ಕ್ರೀಡಾ ಸೌಲಭ್ಯಗಳಿಂದ ತೀವ್ರವಾಗಿ ವಂಚಿತರಾಗಿದ್ದಾರೆ. ಅಥ್ಲೆಟಿಕ್ ಟ್ರ್ಯಾಕ್‌ ಅಥವಾ ಇತರ ಕ್ರೀಡಾ ಸೌಲಭ್ಯಗಳಿಲ್ಲ. ಸಮುದಾಯ ಆರೋಗ್ಯ ಕೇಂದ್ರ ಎಂದು ಮೇಲ್ದರ್ಜಗೆ ಏರಿಸಿದ್ದರೂ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯಗಳಲ್ಲಿಯೇ ನಡೆಯುತ್ತಿದೆ. ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ರೋಗಿಗಳನ್ನು ಕಾಡುತ್ತಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಾ ಸಮುದಾಯವಿದ್ದು ಸಚಿವರಾಗಿದ್ದ ಸಂತೋಷ ಲಾಡ್‌ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ, ಅಭಿವೃದ್ಧಿಗೆ ನಿರೀಕ್ಷಿತ ವೇಗ ಮಾತ್ರ ದೊರೆಯಲಿಲ್ಲ. ತಾಲೂಕು ಪಂಚಾಯಿತಿ ನಿರ್ಮಾಣಕ್ಕೆ ಜಾಗ ಹಾಗೂ ಅನುದಾನ ತಂದಿರುವ ಕೊಡುಗೆ ಮಾತ್ರ ಲಾಡ್‌ಗೆ ಸಲ್ಲುತ್ತದೆ. ಉಳಿದಂತೆ ಲಾಡ್‌ ಸ್ವ ಕ್ಷೇತ್ರ ನಿರ್ಲಕ್ಷಿಸಿ ಹೆಚ್ಚಿನ ಗಮನ ಬೆಂಗಳೂರು, ಧಾರವಾಡ ಮತ್ತು ಹುಬ್ಬಳ್ಳಿಯ ಮೇಲೆ ಕೇಂದ್ರೀಕೃತವಾಗಿದ್ದು, ಅಳ್ನಾವರಕ್ಕೆ ಸಿಗಬೇಕಾದ ಮಾನ್ಯತೆ, ಅಭಿವೃದ್ಧಿ ಅವರಿಂದ ಆಗಿಲ್ಲ ಎಂದು ಸ್ಥಳೀಯರು ನೇರವಾಗಿ ಆರೋಪಿಸುತ್ತಾರೆ.

ಸ್ಥಳೀಯರ ಬೇಡಿಕೆ ಮೇರೆಗೆ ಅಳ್ನಾವರನ್ನು ತಾಲೂಕಾಗಿದೆ. ಆದರೆ, ಆಡಳಿತ ಸರ್ಕಾರ ತಾಲೂಕಿನಲ್ಲಿ ಯಾವ ಕಚೇರಿ ಪ್ರಾರಂಭಿಸಿಲ್ಲ. ಆರ್ಥಿಕ, ಆಡಳಿತಾತ್ಮಕವಾಗಿ ಅಭಿವೃದ್ಧಿಯ ಮಾಡದೇ ತಾಲೂಕು ಹಿಂದುಳಿಯುವಂತೆ ಮಾಡಿದೆ. ಅಭಿವೃದ್ಧಿ ನಿರೀಕ್ಷೆ ಜನರು ಇನ್ನೂ ಇಟ್ಟಿದ್ದಾರೆ. ಕಾದು ನೋಡಿ ಪ್ರತಿಭಟನೆ ಸಜ್ಜಾಗುತ್ತೇವೆ.

ಶಿವಾಜಿ ಡೊಳ್ಳಿನ, ಎಂಎಸ್‌ಐಎಲ್ ಮಾಜಿ ನಿರ್ದೇಶಕ