ಎಲ್ಲಾ ವೃತ್ತಿಪರ ಕೋರ್ಸಿಗೆ ಒಟ್ಟಿಗೆ ಕೌನ್ಸೆಲಿಂಗ್‌: ಕೆಇಎ

KannadaprabhaNewsNetwork |  
Published : Jun 03, 2024, 12:31 AM IST

ಸಾರಾಂಶ

ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟಿಗೇ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀಟ್‌ ಫಲಿತಾಂಶದ ನಂತರ ಅದರ ಕೌನ್ಸೆಲಿಂಗ್‌ ವೇಳಾಪಟ್ಟಿಯನ್ನು ನೋಡಿಕೊಂಡು ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟಿಗೇ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.ಒಟ್ಟಿಗೆ ಕೌನ್ಸೆಲಿಂಗ್‌ ನಡೆಸುವ ನಿರ್ಧಾರ ಹಿನ್ನೆಲೆಯಲ್ಲಿ ನೀಟ್‌ ಕೌನ್ಸೆಲಿಂಗ್‌ ವೇಳಾಪಟ್ಟಿಗೂ ಮೊದಲೇ ಸಿಇಟಿ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಿದರೆ ಗೊಂದಲವಾಗಬಹುದು. ಹಾಗಾಗಿ ಕೌನ್ಸೆಲಿಂಗ್‌ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು. ಈ ಬಾರಿ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಯಾರೂ ಕೆಇಎ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ ಎಂದು ಕೆಇಎ ಅಧಿಕಾರಿಗಳು ಹೇಳಿದ್ದಾರೆ.ನೀಟ್‌ ಪರೀಕ್ಷೆ ತೆಗೆದುಕೊಂಡಿದ್ದರೂ ರಾಜ್ಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾದರೆ ಕೆಇಎಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕೆಲವರು ಅರ್ಜಿ ಸಲ್ಲಿಸಿಲ್ಲ ಎಂದು ಹೇಳುತ್ತಿದ್ದು, ಅಂತಹವರಿಗೆ ಅನುಕೂಲ ಮಾಡಲು ನೀಟ್‌ ಫಲಿತಾಂಶದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಪ್ರಸಕ್ತ ಸಾಲಿನ ಸೀಟ್ ಮ್ಯಾಟ್ರಿಕ್ ಇನ್ನೂ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಕಾಲೇಜು/ಕೋರ್ಸ್ ವಾರ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ ಕೋರ್ಸ್‌ಗಳ ಶುಲ್ಕ ನಿಗದಿ ಸಂಬಂಧ ಒಂದು ಸಭೆ ನಡೆದಿದ್ದು, ಸದ್ಯದಲ್ಲೇ ಆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದರು.ಅಂಕ ದಾಖಲಿಸಿ ರ್‍ಯಾಂಕ್‌ ಪಡೆದುಕೊಳ್ಳಿ:

ವೃತ್ತಿಪರ ಕೋರ್ಸುಗಳ ಪ್ರವೇಶ ಸಂಬಂಧ ಶನಿವಾರ ಪ್ರಕಟಗೊಂಡಿರುವ ಸಿಇಟಿ-2024 ಫಲಿತಾಂಶದಲ್ಲಿ ರ್‍ಯಾಂಕ್‌ ತಡೆಹಿಡಿದಿರುವ ಅಥವಾ ರ್‍ಯಾಂಕ್‌ ನೀಡದೆ ಇರುವ ಅಭ್ಯರ್ಥಿಗಳು ಆತಂಕ ಪಡಬೇಕಿಲ್ಲ. ಸೋಮವಾರ ಬಿಡುಗಡೆ ಮಾಡುವ ಪೋರ್ಟಲ್‌ನಲ್ಲಿ ತಮ್ಮ ಪಿಯುಸಿ ಅಂಕಗಳನ್ನು ದಾಖಲಿಸಿ ರ್‍ಯಾಂಕ್‌ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಸಿಇಟಿಗೆ ಅರ್ಜಿ ಸಲ್ಲಿಸುವಾಗ ಕೆಲವರು ಪಿಯುಸಿಯಲ್ಲಿ ನೀಡಿದ್ದ ಯೂನಿಕ್‌ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವ ಕಾರಣ ರ್‍ಯಾಂಕ್‌ ಪ್ರಕಟಣೆ ಆಗಿರುವುದಿಲ್ಲ. ಇಂತಹ ಸುಮಾರು 3000 ಅಭ್ಯರ್ಥಿಗಳು ಇದ್ದಾರೆ. ಅವರೆಲ್ಲರಿಗೂ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ