ಡಾ.ಮಂಜುನಾಥ್ ರಿಂದ ಚುನಾವಣಾ ಆಯೋಗಕ್ಕೆ ಪತ್ರ

KannadaprabhaNewsNetwork |  
Published : Jun 03, 2024, 12:31 AM ISTUpdated : Jun 03, 2024, 09:16 AM IST
5.ಡಾ.ಸಿ.ಎನ್ .ಮಂಜುನಾಥ್  | Kannada Prabha

ಸಾರಾಂಶ

 ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದರ ಬೆನ್ನ ಹಿಂದೆಯೇ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದರ ಬೆನ್ನ ಹಿಂದೆಯೇ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರವಾಗಿ ರೂಪುಗೊಂಡಿದೆ. ಹಾಲಿ ಸಂಸದ ಡಿಕೆ ಸುರೇಶ್‌ ಅವರನ್ನು ಸೋಲಿಸಲೇಬೇಕು ಎಂದು ಬಿಜೆಪಿ - ಜೆಡಿಎಸ್ ಮೈತ್ರಿ ನಾಯಕರು ಹೃದ್ರೋಗ ತಜ್ಞ ವೈದ್ಯ ಡಾ. ಸಿಎನ್​​ ಮಂಜುನಾಥ್​ ಅವರನ್ನು ಕಣಕ್ಕಿಳಿಸಿದ್ದಾರೆ. ಹೀಗಾಗಿ ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಇದೀಗ ಯಾರು ಗೆಲ್ಲಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

ಈ ಮಧ್ಯೆ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತಿವೆ.

ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಮಂಜುನಾಥ್ ಸೇರಿದಂತೆ ಬಿಜೆಪಿ, ಜೆಡಿಎಸ್​ ನಾಯಕರಲ್ಲಿ ಸಂತಸ ಮನೆ ಮಾಡಿದ್ದು, ಫಲಿತಾಂಶಕ್ಕಾಗಿ ಕಾತರರಿಂದ ಕಾಯುತ್ತಿದ್ದಾರೆ.

ಹೀಗಾಗಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ, ಗಲಾಟೆಗಳು ಆಗಬಾರದು ಎಂದು ಡಾ.ಮಂಜುನಾಥ್​ ಅವರು ಮುಂಜಾಗ್ರತಾವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಮತ‌ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 

ಪತ್ರದಲ್ಲಿ ಏನಿದೆ ?

ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ ಮಾಡಬೇಕು. ಎಣಿಕೆ ಕೇಂದ್ರದ ಸುತ್ತಲೂ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ನಿಯೋಜನೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ವ್ಯಕ್ತಿಯ ಅನಧಿಕೃತ ಪ್ರವೇಶ ಅಥವಾ ಉಲ್ಲಂಘನೆಯ ಪ್ರಯತ್ನಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.

ಪಕ್ಷದ ಏಜೆಂಟ್‌ಗಳು ಸೇರಿದಂತೆ ಮತ ಎಣಿಕೆ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಬೇಕು. ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಅವರ ಉಪಸ್ಥಿತಿಯು ಅತ್ಯಗತ್ಯವಾಗಿದ್ದು, ಅವರ ಪೂರ್ವ ಅನುಮತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಮಂಜುನಾಥ್ ರವರು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅಳಿಯ ಕೂಡ ಆಗಿರುವ ಡಾ ಸಿ.ಎನ್‌. ಮಂಜುನಾಥ್‌ ರವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸಹೋದರ ಡಿ.ಕೆ.ಸುರೇಶ್‌ ಅವರಿಗೆ ಮೊದಲ ಸೋಲಿನ ರುಚಿ ತೋರಿಸುತ್ತಾರ ಎಂಬುದು ಕುತೂಹಲ ಮೂಡಿಸಿದ್ದು, ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವುದು ಜೂನ್​ 4ರಂದು ತಿಳಿಯಲಿದೆ. 

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ