ನಾರಾಯಣ ಹೆಗಡೆ
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆದಿತ್ತು. ಬಿರು ಬಿಸಿಲನ್ನೂ ಲೆಕ್ಕಿಸದೇ ಶೇ. 77.60ರಷ್ಟು ಮತದಾರರು ಆಗಮಿಸಿ ಹಕ್ಕು ಚಲಾಯಿಸಿದ್ದರು. ೯,೦೨,೧೧೯ ಪುರುಷ, ೮,೯೦,೫೭೨ ಮಹಿಳಾ ಹಾಗೂ ಇತರೆ ೮೩ ಸೇರಿ ೧೭,೯೨,೭೭೪ ಮತದಾರರ ಪೈಕಿ ೭,೧೩,೬೧೩ ಪುರುಷರು, ೬,೭೭,೫೭೭ ಹಾಗೂ ಇತರೆ ೨೪ ಮತದಾರರು ಸೇರಿ ೧೩,೯೧,೨೧೪ ಮತದಾರರು ಮತದಾನ ಮಾಡಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆದಿದ್ದರು. ಅದೀಗ ಬಹಿರಂಗಗೊಳ್ಳುವ ಸಮಯ ಬಂದಿದೆ. ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ನಡೆದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಗೆಲುವು ಯಾರಿಗೆ ಎಂಬ ಅಂತಿಮ ಕ್ಷಣದ ಚರ್ಚೆ ಶುರುವಾಗಿದೆ.
ಮೊದಲ ಬಾರಿ ಸಂಸತ್ ಪ್ರವೇಶ: ಕ್ಷೇತ್ರ ಮರುವಿಂಗಡಣೆಯಾದ 2008ರ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಸಲ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಗಡ್ಡದೇವರಮಠ ಮತ್ತು ಮಾಜಿ ಸಿಎಂ ಬೊಮ್ಮಾಯಿ ನಡುವೆ ಸಮಬಲದ ಹಣಾಹಣಿಯೇ ನಡೆದಿದೆ. ಯಾರೇ ಗೆದ್ದರೂ ಅಲ್ಪಮತಗಳ ಅಂತರದಿಂದ ಎಂಬ ಮಾತು ಎಲ್ಲರಿಂದ ಕೇಳಿಬರುತ್ತಿದೆ. ಯಾರು ಗೆದ್ದರೂ ಮೊದಲ ಸಲ ಸಂಸತ್ತಿಗೆ ಪ್ರವೇಶಿಸಲಿದ್ದಾರೆ.ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳ ನಡುವೆ ಸಮಬಲದ ಪೈಪೋಟಿ ನಡೆದಿದ್ದರಿಂದ ಜೂ. 4ರ ಮತ ಎಣಿಕೆ ಬಗ್ಗೆ ಕುತೂಹಲ ಹೆಚ್ಚಿದೆ. ಪ್ರಧಾನಿ ಮೋದಿ ಅವರ ಸಾಧನೆ, ತಾವು ಸಿಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಾಧನೆ ಹೇಳಿಕೊಂಡು ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದ್ದರು. ಕಾಂಗ್ರೆಸಿಗರು ಗ್ಯಾರಂಟಿ ಯೋಜನೆಗಳೊಂದಿಗೆ ಯುವಕ, ಕ್ಷೇತ್ರಕ್ಕೆ ಹೊಸಮುಖ, ಸರಳ ವ್ಯಕ್ತಿತ್ವದ ಅಭ್ಯರ್ಥಿ ಗಡ್ಡದೇವರಮಠ ಅವರನ್ನು ಗೆಲ್ಲಿಸುವಂತೆ ಪ್ರಚಾರ ನಡೆಸಿದ್ದರು. ಮತದಾರರು ಕಳೆದ ಮೇ 7ರಂದು ನಡೆದ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಮತಯಂತ್ರದಲ್ಲಿ ನಮೂದಿಸಿದ್ದಾರೆ. ಈಗ ಜನಾಭಿಪ್ರಾಯ ಯಾರ ಪರ ಎಂದು ತಿಳಿಯುವ ಸಮಯ ಬಂದಿದ್ದು, ಎಲ್ಲರಲ್ಲಿ ಕುತೂಹಲ ಹೆಚ್ಚಿಸಿದೆ.