ಕನಕಪುರ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಿ.ನಾಗೇಂದ್ರ ಇಬ್ಬರೂ ರಾಜೀನಾಮೆ ನೀಡಬೇಕು ಹಾಗೂ ಕೂಡಲೇ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಶಿರಸ್ತೇದಾರ್ ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ವಾಲ್ಮೀಕಿ ನಿಗಮದ ಪರಿಶಿಷ್ಟ ಜಾತಿ ಮತ್ತು ವರ್ಗದ ಬಡವರ ಹಣವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ಹಿಂದುಳಿದ ಸಮುದಾಯದ ನಿಗಮಕ್ಕೆ ನ್ಯಾಯ ಕೊಡಿಸಬೇಕಾಗಿದ್ದ ಸರ್ಕಾರ ತಮ್ಮ ಪರವಾಗಿ ಕೆಲಸ ಮಾಡುವ ಎಸ್‌ಐಟಿ ರಚಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಹಾಗೂ ಸಚಿವರಿಗೆ ಕ್ಲೀನ್‌ಚಿಟ್ ನೀಡುವ ಹುನ್ನಾರ ನಡೆಸುತ್ತಿದೆ. ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಿ ಯೂನಿಯನ್ ಬ್ಯಾಂಕ್ ಬರೆದಿರುವ ಪತ್ರವನ್ನು ಆಧರಿಸಿ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಪ್ರಾಮಾಣಿಕ ಅಧಿಕಾರಿಗಳಿಗೆ ಹಿಂಸೆ ಮತ್ತು ಕಿರುಕುಳ ನೀಡಲಾಗುತ್ತಿದೆ. ಸಚಿವರ ಮಾತನ್ನು ಕೇಳದ ನೌಕರರಿಗೆ ಹಿಂಸೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಭ್ರಷ್ಟಾಚಾರದ ಹಣ ಎಲ್ಲಿಂದ, ಯಾರಿಗೆ ಹಾಗೂ ಯಾರು ದುಡ್ಡು ಪಡೆದಿದ್ದಾರೆ ಎನ್ನುವ ಕುತೂಹಲದ ಪ್ರಶ್ನೆಗಳಾಗಿದ್ದು ಪ್ರಕರಣದ ಸಮಗ್ರ ತನಿಖೆ ನಡೆಸಲು ಸಚಿವರ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದರು.
ಕೆಆರ್‌ಎಸ್ ಪಕ್ಷದ ಹೊಸದುರ್ಗದ ಪ್ರಶಾಂತ್ ಮಾತನಾಡಿ, ಹಿರಿಯ ಅಧಿಕಾರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಹೊರಗೆ ತರಲಾರದೆ ಬೇಸತ್ತು ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇದರ ಹಿಂದೆ ಸಚಿವರು, ಹಲವು ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕೆಂದು ಸರ್ಕಾರ ವನ್ನು ಆಗ್ರಹಿಸಿದರು.ರೈತಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್, ದುಂಡಪ್ಪ, ಕೆ.ಆರ್.ಸುರೇಶ್, ದುರ್ಗೇಶ್, ಸ್ವಾಮಿ, ಭಾರತೀಯ ಮೂಲ ನಿವಾಸಿ ಕಾವಲುಪಡೆ ಅಧ್ಯಕ್ಷ ರಾಜಮೌರ್ಯ, ಗೋಪಿ ಇತರರು ಉಪಸ್ಥಿತರಿದ್ದರು.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣವನ್ನು ಸಿಬಿಐಗೆ ಒಪ್ಪಿಸಿ ಸಚಿವ ಬಿ.ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ತಾಲೂಕು ಪದಾಧಿಕಾರಿಗಳು ಕನಕಪುರ ಶಿರಸ್ತೇದಾರ್ ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.