ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂ. 4ರಂದು ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ ಎಣಿಕೆ ಸಿದ್ಧತೆ ಕುರಿತು ಅವರು ವಿವರಿಸಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15,25,717 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಜೂನ್ 4 ರಂದು ಬೆಳಿಗ್ಗೆ 8 ಗಂಟೆಯವರೆಗೆ ಸ್ವೀಕೃತವಾಗುವ ಅಂಚೆ ಮತ ಪತ್ರಗಳನ್ನು ಸಹ ಎಣಿಕೆಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.9 ಕೊಠಡಿಗಳಲ್ಲಿ ಮತ ಎಣಿಕೆ
ಮಂಗಳವಾರ ಬೆಳಿಗ್ಗೆ 7.30 ಗಂಟೆಗೆ ಭದ್ರತಾ ಕೊಠಡಿಯನ್ನು ಸಾಮಾನ್ಯ ಹಾಗೂ ಎಣಿಕೆ ವೀಕ್ಷಕರು, ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುವುದು. ಮೊದಲಿಗೆ ಬೆಳಿಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಪ್ರಾರಂಭವಾಗಲಿದೆ. ನಂತರ 9 ಕೊಠಡಿಗಳಲ್ಲಿ ಇವಿಎಂ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದರು.ಗೌರಿಬಿದನೂರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಣಿಕೆಯು 26 ಸುತ್ತುಗಳಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಎಣಿಕೆಯು 27 ಸುತ್ತುಗಳಲ್ಲಿ, ಯಲಹಂಕ, ಹೊಸಕೋಟೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 30 ಸುತ್ತುಗಳಲ್ಲಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 28 ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 112 ಎಣಿಕೆ ಮೇಲ್ವಿಚಾರಕರು, 128 ಎಣಿಕೆ ಸಿಬ್ಬಂದಿ ಹಾಗೂ 113 ಎಣಿಕೆ ಸೂಕ್ಷ್ಮ ವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದರು.
ಏಜೆಂಟರಿಗೆ ಗುರುತಿನ ಚೀಟಿಮತ ಎಣಿಕಾ ಏಜೆಂಟರು ನೇಮಕವಾಗಿದ್ದು, ಇವರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಮತ ಎಣಿಕಾ ಕಾರ್ಯಕ್ಕೆ ಹಾಜರಾಗುವ ಅಧಿಕಾರಿ, ಸಿಬ್ಬಂದಿಯವರ ವಾಹನಗಳ ನಿಲುಗಡೆಗೆ ಕಾಲೇಜಿನ ಆಟದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಏಜೆಂಟರ ವಾಹನಗಳ ನಿಲುಗಡೆಗೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟಲ್ ಬಳಿ ಇರುವ ಖಾಲಿ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಸಾಮಾನ್ಯ ವೀಕ್ಷಕರು ಹಾಗು ಎಣಿಕೆಯ ವೀಕ್ಷಕರಾದ ನ್ಯಾಲಿ ಈಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ ಮತ್ತಿತರ ಅಧಿಕಾರಿ ಸಿಬ್ಬಂದಿ ಇದ್ದರು.ಸಿಕೆಬಿ-5 ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿನ ಮತ ಎಣಿಕಾ ಕೇಂದ್ರ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮತ್ತು ಅಧಿಕಾರಿಗಳು ಪರಿಶೀಲಿಸಿದರು.