ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಪೂರ್ವಸಿದ್ಧತೆ ಸಭೆ ನಡೆಯಿತು. ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಪೂರ್ವಸಿದ್ಧತೆ ಸಭೆ
ಕನ್ನಡಪ್ರಭ ವಾರ್ತೆ ಮಣಿಪಾಲ
ಲೋಕಸಭೆಯ ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮ ಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ಪರಿಪಾಲಿಸಿ ಮತ ಎಣಿಕೆ ಕಾರ್ಯ ಯಶಸ್ವಿಯಾಗಿ ನಡೆಸಬೇಕು ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಆಯೋಗದ ವೀಕ್ಷಕ ಹಿತೇಶ್ ಕೆ. ಕೋಯಲ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಸೇಂಟ್ ಸಿಸಿಲಿ ವಿದ್ಯಾಸಂಸ್ಥೆಯಲ್ಲಿ ಜೂ.4ರಂದು ಮತ ಎಣಿಕೆ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಮತ ಎಣಿಕೆ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ ಅವರು, ಪ್ರಜಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಮತಗಳ ರಹಸ್ಯವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಏಜೆಂಟರು ಕೇವಲ ಪೆನ್ನು ಮತ್ತು ನೋಟ್‌ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿಯನ್ನು ತೆಗೆದುಕೊಂಡು ಬರಲು ಮಾತ್ರ ಅವಕಾಶ ನೀಡಬೇಕು, ಮತ ಎಣಿಕೆ ಕೇಂದ್ರದಲ್ಲಿ ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನು ದಾಟಿ ಹೋಗಲು ಅವಕಾಶವಿಲ್ಲ ಎಂದರು.
ಮತ ಎಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂದು ಬೆಳಗ್ಗೆ 5 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಪಹಾರ ಮುಗಿಸಿ 7 ಗಂಟೆಯೊಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು. ಮತ ಎಣಿಕೆ ಕೊಠಡಿಯೊಳಗೆ ಮೊಬೈಲನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೊಠಡಿ ಒಳಗೆ ಮತ ಎಣಿಕೆ ಸಿಬ್ಬಂದಿ, ಏಜೆಂಟ್, ಅಭ್ಯರ್ಥಿಗಳನ್ನು ಹೊರತುಪಡಿಸಿ ಅನಾವಶ್ಯಕವಾಗಿ ಯಾರನ್ನು ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ಮತಯಂತ್ರದ ಎಣಿಕೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮತಯಂತ್ರದ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಬರೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ, ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.