ಶಾಸಕರ ನೇತೃತ್ವದಲ್ಲಿ ರಾಣೀಕೆರೆ ತೂಬು ತೆರವಿಗೆ ಕ್ಷಣಗಣನೆ

KannadaprabhaNewsNetwork |  
Published : Jul 09, 2026, 02:15 AM IST
ಚಳ್ಳಕೆರೆ ಸುದ್ದಿಗಳು444 | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ರಾಣೀಕೆರೆ ಏರಿ ಮೇಲೆ ಸ್ವಚ್ಛತೆ ಮಾಡಿರುವುದು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ಮೀರಾಸಾಬಿಹಳ್ಳಿ ಕೆರೆಯ ತೂಬನ್ನು ತೆಗೆದು ಕೆಳಭಾಗದ ವಿಡಪನಕುಂಟೆ, ವಿಶ್ವೇಶ್ವರ ಪುರ, ಕರೀಕೆರೆ, ರಂಗವ್ವನಹಳ್ಳಿ ಭಾಗದಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂಗಳಿಗೆ ನೀರು ಹರಿಸುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

ಇಂದು ಗುರುವಾರ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಕೆರೆ ಅಚ್ಚು ಕಟ್ಟುದಾರರು ಮತ್ತು ಈ ಭಾಗದ ಎಲ್ಲಾ ಜನರ ಒಮ್ಮತದ ಮೇರೆಗೆ ನೀರು ಹರಿಸುವ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ಈಜು ತಜ್ಞರ ತಂಡದಿಂದ ತೂಬು ಪರೀಕ್ಷೆ ನಡೆಸಿ ತೆರವುಗೊಳಿಸುವ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ಲಭ್ಯವಾಗಿದೆ.

ಕೆರೆ ಅಚ್ಚುಕಟ್ಟು ಪ್ರದೇಶದ ಮೇಲುಭಾಗದ ಎರಡು ಹಳ್ಳಿಗಳ ಜನರು ನೀರು ಹರಿಸುವ ಕಾರ್ಯಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತಿಪಡಿಸಿದ ಹಿನ್ನೆಲೆಯಲ್ಲಿ ನೀರು ಹರಿಸುವ ಕಾರ್ಯ ಕೆಲವು ವಾರಗಳ ಮಟ್ಟಿಗೆ ಮುಂದಕ್ಕೆ ಹೋಗಿತ್ತು. ಪರಿಸ್ಥಿತಿಯನ್ನು ಅವಲೋಕಿಸಿದ ಶಾಸಕ ಟಿ.ರಘುಮೂರ್ತಿ ಅವರು ತಕ್ಷಣವೇ ಎಚ್ಚತ್ತುಕೊಂಡು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ತೆಗೆದು ಆ ಭಾಗದ ಜನರು ಸೇರಿದಂತೆ ಅಚ್ಚುಕಟ್ಟುದಾರರ ಜೊತೆ ಸಮಾಲೋಚನೆ ನಡೆಸಿ ಎಲ್ಲರ ಅಭಿಪ್ರಾಯವನ್ನು ಕೇಳಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ ವಿರೋಧಿಸುವವರ ಮನವೊಲಿಸಲಾಗಿತ್ತು.

ಶಾಸಕರ ಸಮಾಲೋಚನಾ ಸಭೆಯಲ್ಲಿ ಎಲ್ಲರೂ ಒಮ್ಮತಕ್ಕೆ ಬಂದು ರಾಣೀಕೆರೆಯಿಂದ ಕೆಳಭಾಗದ ಮೂರು ಚೆಕ್ ಡ್ಯಾಂಗಳಿಗೆ ನೀರು ಬಿಡಲು ಒಪ್ಪಿದ್ದರು. ಇದರ ಜೊತೆಗೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಸುಮಾರು ವರ್ಷಗಳಿಂದ ಹೂಳು ತುಂಬಿರುವ ಕೆರೆಯಲ್ಲಿ ಹೂಳು ತೆಗೆಸುವ ಕಾರ್ಯವಾಗಬೇಕು. ಕೆಳಭಾಗದ ಹಳ್ಳಿಗಳ ಚೆಕ್ ಡ್ಯಾಂಗಳಿಗೆ ನೀರು ಹರಿಸುವಾಗ ಗುಂಡಿ ತಗ್ಗುಗಳನ್ನು ಮುಚ್ಚಬೇಕು. ವಿನಾಕಾರಣ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಬೇಡಿಕೆಗಳಿಗೂ ಶಾಸಕರು ಸಮ್ಮತಿಸಿ ಅಧಿಕಾರಿಗಳಿಂದ ಮಾಹಿತಿ ವಿವರಿಸಿದ್ದರು.

ಗುರುವಾರ ಶಾಸಕರು ಬರುವ ಕಾರ್ಯಕ್ರಮ ನಿಗಧಿಯಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಏರಿ ಮೇಲೆ ಬೆಳೆದು ನಿಂತಿದ್ದ ಜಾಲಿಗಿಡಗಳನ್ನು ತೆರವುಗೊಳಿಸಿದ್ದಾರೆ. ಈ ಕುರಿತು ‘ಕನ್ನಡಪ್ರಭ’ ಈ ಹಿಂದೆ ವರದಿ ಮಾಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದೀಗ ಶಾಸಕರು ಬರುವ ಸಮಯದಲ್ಲಿ ರಾಣೀಕೆರೆ ಮೇಲ್ಭಾಗವನ್ನು ಸಿಂಗಾರಗೊಳಿಸಿದಂತೆ ಮಾಡಿದ್ದಾರೆ. ಜಾಲಿಗಿಡಗಳ ತೆರವುಗೊಳಿಸಿ, ಕೆಳಭಾಗದ ಕಾಲುವೆಯಲ್ಲಿ ಸರಾಗವಾಗಿ ನೀರು ಚೆಕ್ ಡ್ಯಾಂಗಳಿಗೆ ಹೋಗುವಂತೆ ಮಾಡಿದ್ದಾರೆ.

ಭರಮಸಾಗರ, ಬೊಮ್ಮಸಮುದ್ರ ಸರ್ವೆ ನಂಬರಿನ ಭಾಗದಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿರುವ ಅಧಿಕಾರಿಗಳು ಮೀರಾಸಾಬಿಹಳ್ಳಿ ವ್ಯಾಪ್ತಿಯ ಒತ್ತುವರಿಗೆ ಯಾಕೋ ಮನಸ್ಸು ಮಾಡುತ್ತಿಲ್ಲ. ಮೈಸೂರು ಅರಸರು ಈ ಭಾಗದ ಜನರ ಬವಣೆ ನೀಗಿಸಲು ಕಟ್ಟಿಸಿದ ಐತಿಹಾಸಿಕ ಕೆರೆಯನ್ನು ಉಳಿಸಬೇಕಾದುದು ಈ ಭಾಗದ ಜನರ ಆದ್ಯ ಕರ್ತವ್ಯ. ಅದೇ ರೀತಿ ಒತ್ತುವರಿ ಮಾಡಿರುವುದನ್ನೂ ಅಧಿಕಾರಿಗಳು ತೆರವುಗೊಳಿಸುವುದೂ ಸೇರಿದಂತೆ ಹೂಳು ತುಂಬಿರುವ ಕೆರೆಯನ್ನು ಹೂಳು ತೆಗೆಸುವ ಮೂಲಕ ಕೆರೆ ರಕ್ಷಣೆ ಮಾಡುವ ಹೊಣೆ ಅಧಿಕಾರಿಗಳದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಬೆಳವಣಿಗೆಯತ್ತ ಪೋಷಕರು ಗಮನ ಹರಿಸಿ
18ರಂದು ಭೋವಿ ಗುರುಪೀಠದಲ್ಲಿ ಭೋವಿ ಜನೋತ್ಸವ