ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ

KannadaprabhaNewsNetwork |  
Published : Oct 26, 2026, 02:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಎಣಿಕೆಗೆ ಬೇಕಾದ ಸಿದ್ಧತೆಗಳನ್ನು ಆಯೋಗವು ಕೈಗೊಂಡಿದ್ದು, ಅ. 27ರಂದು ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ.

ಧಾರವಾಡ: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನವು ಕಳೆದ ಅ. 23ರಂದು ಶಾಂತಿಯುತವಾಗಿ ಜರುಗಿದ್ದು, ಇದೀಗ ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಎಣಿಕೆಗೆ ಬೇಕಾದ ಸಿದ್ಧತೆಗಳನ್ನು ಆಯೋಗವು ಕೈಗೊಂಡಿದ್ದು, ಅ. 27ರಂದು ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ.

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಈ ಕ್ಷೇತ್ರದಲ್ಲಿ ಒಟ್ಟು 97,400 ಮತದಾರರಿದ್ದು, ಅವರಲ್ಲಿ 57,345 ಪುರುಷರು ಹಾಗೂ 40,055 ಮಹಿಳಾ ಮತದಾರರಿದ್ದಾರೆ. ಅ. 23ರಂದು ನಡೆದ ಮತದಾನದಲ್ಲಿ 73,692 ಮತಗಳು ಚಲಾವಣೆಯಾಗಿದ್ದು, ಶೇ.75.66ರಷ್ಟು ಮತದಾನವಾಗಿದೆ.

ಜಿಲ್ಲಾವಾರು ಮತದಾನ: ಧಾರವಾಡ ಜಿಲ್ಲೆಯಲ್ಲಿ 25,240 ಮತಗಳು ಚಲಾವಣೆಯಾಗಿದ್ದು, ಶೇ.71.87ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲಿ 16,778 ಮತಗಳು ಚಲಾವಣೆಯಾಗಿದ್ದು, ಶೇ.77.70ರಷ್ಟು ಮತದಾನವಾಗಿದೆ. ಹಾವೇರಿ ಜಿಲ್ಲೆಯಲ್ಲಿ 19,401 ಮತಗಳು ಚಲಾವಣೆಯಾಗಿದ್ದು, ಶೇ. 78.71ರಷ್ಟು ಮತದಾನವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12,273 ಮತಗಳು ಚಲಾವಣೆಯಾಗಿದ್ದು, ಶೇ.76.52ರಷ್ಟು ಮತದಾನವಾಗಿದೆ.

2020ರಲ್ಲಿ ಶೇ. 70.11ರಷ್ಟು ಮತದಾನ: 2020ರ ಈ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಅವರು 11,409 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಆಗ ಒಟ್ಟು 74,268 ಮತಗಳ ಪೈಕಿ 52,041 ಮತ ಚಲಾವಣೆ ಅಂದರೆ ಶೇ. 70.11 ಮತದಾನವಾಗಿತ್ತು. ಈ ಪೈಕಿ 8,772 ಮತಗಳು ಅಸಿಂಧುವಾಗಿದ್ದವು. ಎಸ್‌.ವಿ. ಸಂಕನೂರ 23,857 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ಸಿನ ಆರ್‌.ಎಂ. ಕುಬೇರಪ್ಪ 12,448, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 6,188 ಮತ ಪಡೆದಿದ್ದರು. ಜೆಡಿಎಸ್‌ನ ಶಿವಶಂಕರ ಕಲ್ಲೂರ 102 ಮತಗಳನ್ನು ಪಡೆದಿದ್ದರೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪ್ರಸ್ತುತ ಬಿಜೆಪಿಯ ಎಸ್‌.ವಿ. ಸಂಕನೂರ, ಕಾಂಗ್ರೆಸ್ಸಿನ ಮೋಹನ ಲಿಂಬಿಕಾಯಿ ಸೇರಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ. 75.66ರಷ್ಟು ಮತದಾನವಾಗಿದೆ.

ಕೃಷಿ ವಿವಿ ಮೇಲೆ ಗಮನ: ಮತದಾನದ ಬಳಿಕ ಮೊಹರು ಮಾಡಿದ ಮತಪೆಟ್ಟಿಗೆಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ. ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಒಟ್ಟು 212 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಮಾಹಿತಿ ನೀಡಿದರು.

14 ಟೇಬಲ್‌ಗಳಲ್ಲಿ ಮತ ಎಣಿಕೆ: ಮಂಗಳವಾರ ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ 14 ಟೇಬಲ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಪ್ರತಿ ಟೇಬಲ್‌ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಇಬ್ಬರು ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಸಂಬಂಧಿತ ಅಧಿಕಾರಿ ಮತ್ತು ಸಿಬ್ಬಂದಿಗೆ ಸೈದ್ಧಾಂತಿಕ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮೂರು ಹಂತಗಳಲ್ಲಿ ತರಬೇತಿ ನೀಡಲಾಗಿದೆ.

ಶುಷ್ಕ ದಿನ ಘೋಷಣೆ: ಮತ ಎಣಿಕೆ ದಿನದಂದು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಮತ ಎಣಿಕೆ ಕಟ್ಟಡದ ಸುತ್ತಮುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 163ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಅ. 26ರ ಸಂಜೆ 4ರಿಂದ ಅ. 27ರ ರಾತ್ರಿ 12ರ ವರೆಗೆ ಧಾರವಾಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಮದ್ಯಪಾನ ಹಾಗೂ ಮದ್ಯ ಸಾಗಾಣಿಕೆ ಸಹ ನಿಷೇಧಿಸಿ ಈ ಅವಧಿಯನ್ನು ಶುಷ್ಕ ದಿನಗಳೆಂದು ಘೋಷಿಸಲಾಗಿದೆ.

ಕೈ-ಕಮಲ ಫೈಟ್: ಪಶ್ಚಿಮ ಪದವೀಧರ ಕ್ಷೇತ್ರದ ಈ ಚುನಾವಣೆಗೆ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಬಿಜೆಪಿಯ ಎಸ್‌.ವಿ. ಸಂಕನೂರ ಹಾಗೂ ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ ಮಧ್ಯೆ ನೇರಾನೇರ ಸ್ಪರ್ಧೆ ಇದೆ. ಮತದಾನದ ನಂತರದಲ್ಲಿ ಪಕ್ಷೇತರರ 12 ಅಭ್ಯರ್ಥಿಗಳ ಪೈಕಿ ವಿದ್ಯಾರ್ಥಿ ಸಂಘಟನೆ ಮುಖಂಡ ಕಾಂತಕುಮಾರ, ಸಂಕನೂರ ಅಥವಾ ಲಿಂಬಿಕಾಯಿ ಅವರ ಸ್ಪಷ್ಟ ಗೆಲುವಿಗೆ ತುಸು ಅಡ್ಡಿಯಾಗುತ್ತಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ. ಇಷ್ಟಾಗಿಯೂ ಸಂಕನೂರ ಅಥವಾ ಲಿಂಬಿಕಾಯಿ ಗೆಲವು ತುಂಬಾ ಕಡಿಮೆ ಮತಗಳ ಅಂತರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಸಂಕನೂರ ಗೆಲವು ಸಾಧಿಸಿದರೆ ಹ್ಯಾಟ್ರಿಕ್‌ ಗೆಲವು ಆಗಲಿದೆ. ಸೋತರೆ ಲಿಂಬಿಕಾಯಿ ಅವರಿಗೆ 2ನೇ ಬಾರಿ ವಿಧಾನ ಪರಿಷತ್‌ನ ಮೆಟ್ಟಿಲು ಏರುವಂತಾಗುತ್ತದೆ. ಒಟ್ಟಾರೆ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಗುಟ್ಟು ಮಾತ್ರ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ. ಫಲಿತಾಂಶ ಪ್ರಕ್ರಿಯೆ ಕ್ಲಿಷ್ಟ: ಪಶ್ಚಿಮ ಪದವೀಧರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್‌ ಚುನಾವಣೆಗಳ ಮತದಾನ ಮತ್ತು ಫಲಿತಾಂಶ ಪ್ರಕ್ರಿಯೆ ಸಾಮಾನ್ಯ ವಿಧಾನಸಭಾ ಚುನಾವಣೆಗಳಿಗಿಂತ ಭಿನ್ನವಾಗಿರುತ್ತದೆ. ಗೆಲ್ಲಲು ಒಬ್ಬ ಅಭ್ಯರ್ಥಿಗೆ ಅಗತ್ಯವಿರುವ ಕನಿಷ್ಠ ಮತಗಳ ಸಂಖ್ಯೆಯನ್ನು ಒಂದು ಸೂತ್ರದ ಮೂಲಕ ಲೆಕ್ಕಹಾಕಲಾಗುತ್ತದೆ. ಮೊದಲ ಹಂತದಲ್ಲಿ ಕೇವಲ ಮೊದಲ ಆದ್ಯತೆ ಪಡೆದ ಮತಗಳನ್ನು ಮಾತ್ರ ಎಣಿಕೆ ಮಾಡಲಾಗುತ್ತದೆ. ಯಾರಾದರೂ ಕೋಟಾ ತಲುಪಿದರೆ ಅವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ, ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಯಾವುದೇ ಅಭ್ಯರ್ಥಿ ಕೋಟಾ (ನಿರ್ದಿಷ್ಟ ಪಡಿಸಿದ ಗೆಲುವಿಗೆ ಬೇಕಾದ ಮತಗಳ ಸಂಖ್ಯೆ) ತಲುಪದಿದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಸ್ಥಾನಗಳಿದ್ದರೆ, ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಹೊರಗಿಟ್ಟು, ಆ ಅಭ್ಯರ್ಥಿಗೆ ಬಿದ್ದಿದ್ದ ಮತಗಳಲ್ಲಿನ 2ನೇ ಆದ್ಯತೆಯನ್ನು ಪರಿಗಣಿಸಿ, ಆಯಾ ಅಭ್ಯರ್ಥಿಗಳಿಗೆ ಬಂದಿರುವ 2ನೇ ಆದ್ಯತೆಯ ಮತಗಳನ್ನು ವರ್ಗಾಯಿಸಲಾಗುತ್ತದೆ. ಯಾವುದಾದರೂ ಅಭ್ಯರ್ಥಿಗೆ ಕೋಟಾಕ್ಕಿಂತ ಹೆಚ್ಚು ಮತಗಳು ಬಂದಿದ್ದರೆ ಅವರ ಗೆಲವು ಘೋಷಿಸಲಾಗುತ್ತದೆ.

ವಿಪ ಚುನಾವಣೆಯಲ್ಲಿ ಮತಯಂತ್ರಗಳು ಇರೋದಿಲ್ಲ. ಒಂದೇ ಬಟನ್‌ ಒತ್ತಿದರೆ ಒಟ್ಟು ಮತಗಳ ಸಂಖ್ಯೆ ತೋರಿಸುವ ಪ್ರಸಂಗ ಇಲ್ಲಿಲ್ಲ. ಏನಿದ್ದರೂ ಪ್ರತಿ ಮತಪತ್ರಗಳನ್ನು ಸಿಬ್ಬಂದಿ ಎಣಿಕೆ ಮಾಡಬೇಕು. ಈ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತದಲ್ಲಿ ಸ್ಪಷ್ಟ ಗೆಲವು ಸಾಧಿಸಿದರೆ ಉತ್ತಮ, ಇಲ್ಲದೇ ಹೋದಲ್ಲಿ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಶುರುವಾಗುತ್ತದೆ. ಒಟ್ಟಾರೆ ಗೆಲ್ಲುವ ಅಭ್ಯರ್ಥಿ ಕೋಟಾ ತಲುಪುವ ವರೆಗೂ ಎಣಿಕೆ ಮಾಡಬೇಕಾದ ಕಾರಣ ಕೆಲವೊಮ್ಮೆ ದೀರ್ಘ ಸಮಯ ವರೆಗೂ ಫಲಿತಾಂಶ ಘೋಷಣೆ ಆಗದೇ ಗೊಂದಲಕ್ಕೆ ಈಡಾಗಿರುವ ಉದಾಹಣೆಗಳು ಸಾಕಷ್ಟಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾವರದಲ್ಲಿ ಅನಧಿಕೃತ ಬೋಟಿಂಗ್‌ ವ್ಯವಸ್ಥೆಗೆ ಆಕ್ರೋಶ
ಉಳಿಕೆಯ ಹಣ ಒಂದೇ ಕಡೆ ಹೂಡಿಕೆ ಸರಿಯಲ್ಲ: ಸಹನಾ ಬಾಳ್ಕಲ್