ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಕ್ಷಣಗಣನೆ

KannadaprabhaNewsNetwork |  
Published : Feb 03, 2024, 01:45 AM IST
2ಕೆಡಿವಿಜಿ15-ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಫೆ.3 ಮತ್ತು 4ರಂದು 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸಮಾರಂಭ ಸ್ಥಳಕ್ಕೆ ಭೇಟಿ ನೀಡಿ, ಪತ್ರಕರ್ತರರೊಂದಿಗೆ ಚರ್ಚಿಸಿದರು. ....................2ಕೆಡಿವಿಜಿ16-ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಫೆ.3 ಮತ್ತು 4ರಂದು 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಸ್ಥಾಪಿಸಿರುವುದು. .................2ಕೆಡಿವಿಜಿ17, 18, 19-ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಫೆ.3 ಮತ್ತು 4ರಂದು 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಹಿರಿಯ ದಿವಂಗತ ಪತ್ರಕರ್ತರ ಹೆಸರಿನಲ್ಲಿ ಸ್ಥಾಪಿಸಿರುವ ಮಹಾದ್ವಾರಗಳು. ..................2ಕೆಡಿವಿಜಿ20-ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಫೆ.3 ಮತ್ತು 4ರಂದು 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಸಿದ್ಧಗೊಂಡ ಕಲ್ಯಾಣ ಮಂಟಪದ ಹಾದಿ. | Kannada Prabha

ಸಾರಾಂಶ

ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳು, ವಿದೇಶದಿಂದಲೂ ಸುಮಾರು 4500ಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಭಾಗವಹಿಸಲಿದ್ದು, 31 ವರ್ಷಗಳ ನಂತರ ನಡೆಯುವ ಪತ್ರಕರ್ತರ ಹಬ್ಬಕ್ಕಾಗಿ ಹಿರಿ-ಕಿರಿಯ ಪತ್ರಕರ್ತರು, ಕುಟುಂಬ ಸದಸ್ಯರು ಕಾತರದಿಂದ ಕಾಯುತ್ತಿದ್ದಾರೆ. ಸಂಘದ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ದಾವಣಗೆರೆ ವರದಿಗಾರರ ಕೂಟದ ಸಹಯೋಗದಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆ.3 ಮತ್ತು 4ರಂದು ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಸಮ್ಮೇಳನಕ್ಕೆ ಇದೀಗ ಕ್ಷಣಗಣನೆ ಶುರುವಾಗಿದೆ.

ಸಮ್ಮೇಳನಕ್ಕೆ ಈಗಾಗಲೇ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಪಿ.ಎನ್.ಲೋಕೇಶ್ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಸ್ವಾಗತಿಸಲು, ಆತಿಥ್ಯ ನೀಡಲು ಬೆಣ್ಣೆ ನಗರಿ ದಾವಣಗೆರೆ ಸಜ್ಜಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳು, ವಿದೇಶದಿಂದಲೂ ಸುಮಾರು 4500ಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಭಾಗವಹಿಸಲಿದ್ದು, 31 ವರ್ಷಗಳ ನಂತರ ನಡೆಯುವ ಪತ್ರಕರ್ತರ ಹಬ್ಬಕ್ಕಾಗಿ ಹಿರಿ-ಕಿರಿಯ ಪತ್ರಕರ್ತರು, ಕುಟುಂಬ ಸದಸ್ಯರು ಕಾತರದಿಂದ ಕಾಯುತ್ತಿದ್ದಾರೆ. ಸಂಘದ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ದಾವಣಗೆರೆ ವರದಿಗಾರರ ಕೂಟದ ಸಹಯೋಗದಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದ ದಾವಣಗೆರೆಯಲ್ಲಿ 1992ರಲ್ಲಿ ಆರ್.ಎಚ್.ಹನುಮಂತಪ್ಪ ಛತ್ರದಲ್ಲಿ ಸಮ್ಮೇಳನ ಆಗಿತ್ತು.

ಜಿಲ್ಲೆ ಪತ್ರಕರ್ತರು ಒಂದಾದ ಕಾರ್ಯಕ್ರಮ:

ಸಮ್ಮೇಳನದ ಹಿನ್ನೆಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ತಾಲೂಕು ಘಟಕಗಳು ಹಾಗೂ ದಾವಣಗೆರೆ ವರದಿಗಾರರ ಕೂಟಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಛಾಯಾಗ್ರಾಹಕರು, ವ್ಯಂಗ್ಯ ಚಿತ್ರಕಾರರ ಒಳಗೊಂಡಂತೆ ಸಮಿತಿಗಳ ರಚಿಸಿದೆ. ಪರ ಊರ ಪ್ರತಿನಿಧಿಗಳು ದಾವಣಗೆರೆ ಸಮ್ಮೇಳನವನ್ನು ಎಲ್ಲಾ ಪತ್ರಕರ್ತರು ಒಮ್ಮತದಿಂದ ಕೈಜೋಡಿಸಿ, ನಾವು, ನೀವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ. ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಹೊಣೆ ತಮ್ಮದು ಎಂಬುದಾಗಿ ಸ್ವಾಗತ ಸಮಿತಿ ಅಧ್ಯಕ್ಷ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಹ ಭರವಸೆ ನೀಡಿರುವುದು ಮಾದರಿ ಸಮ್ಮೇಳನವಾಗುವ ಸಂದೇಶ ನೀಡಿದೆ

ಸಮ್ಮೇಳನದಲ್ಲಿ ಇಂದಿನ ಕಾರ್ಯಕ್ರಮಗಳೇನು?

* ಶನಿವಾರ (ಫೆ.3) ಬೆಳಿಗ್ಗೆ 9ಕ್ಕೆ ರೈಲ್ವೇ ಕೆಳ ಸೇತುವೆ ಬಳಿಯ ಹರ್ಡೇಕರ್ ಮಂಜಪ್ಪ ಪುತ್ಥಳಿ, ಪಾಲಿಕೆ ಆವರಣದ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಂರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಶ್ರೀ ಜಯದೇವ ವೃತ್ತದಿಂದ ಜಾನಪದ ಕಲಾ ತಂಡಗಳು, ಸಂಘ-ಸಂಸ್ಥೆಗಳು, ಸಂಘಟನೆಗಳ ಸಹಯೋಗದಲ್ಲಿ ಪತ್ರಕರ್ತರ ಬೃಹತ್ ಮೆರವಣಿಗೆ ನಡೆಯಲಿದೆ.

ಸಾರೋಟಿನಲ್ಲಿರುವ ವೃಕ್ಷದ ಆಕೃತಿಯ ರೆಂಬೆ ಕೊಂಬೆಯಲ್ಲಿ ಎಲ್ಲಾ ಪತ್ರಿಕೆಗಳ ಶಿರೋನಾಮೆ ಬಿಂಬಿಸಲಾಗುವುದು. ಪತ್ರಕರ್ತರು, ಸಾಹಿತಿಗಳು, ಅಧಿಕಾರಿಗಳು, ಕನ್ನಡ ಪರ ಹೋರಾಟಗಾರರು, ಜನ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.

* ಬೆಳಿಗ್ಗೆ 10.30ಕ್ಕೆ ಸಮಾರಂಭ ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು. ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

* ಮಧ್ಯಾಹ್ನ 2ಕ್ಕೆ `ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’, ಸಂಜೆ 4ಕ್ಕೆ `ಸ್ಥಳೀಯ ಪತ್ರಿಕೆಗಳು:ಹಿಂದೆ-ಇಂದು-ಮುಂದು’ವಿಷಯ ಕುರಿತಂತೆ ಗೋಷ್ಠಿ ಇದೆ. ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಹಿರಿಯ ಪತ್ರಕರ್ತ ಈಶ್ವರ ದೈತೋಟ ಸೇರಿ ಹಿರಿಯ ಪತ್ರಕರ್ತರು ಭಾಗವಹಿಸುವರು. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ನಾಳೆ ಸಮಾರೋಪಕ್ಕೆ ಡಿಸಿಎಂ ಡಿಕೆಶಿ, ವಿಪಕ್ಷ ನಾಯಕ ಅಶೋಕ

ಫೆ.4ರ ಬೆಳಿಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ಜರುಗಲಿದೆ. ಬೆಳಿಗ್ಗೆ 10.30ಕ್ಕೆ `ಮಾಧ್ಯಮ ಮತ್ತು ಸರ್ಕಾರ’, ಬೆಳಿಗ್ಗೆ 11.30ಕ್ಕೆ `ಸಾಮಾಜಿಕ ಮಾಧ್ಯಮ - ವೃತ್ತಿ ವಿಶ್ವಾಸಾರ್ಹತೆ’ ವಿಷಯಗಳ ಕುರಿತ ಗೋಷ್ಠಿಗಳ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕಾ ಉದ್ಘಾಟಿಸುವರು. ನಾಡಿನ ಹಿರಿಯ ಪತ್ರಕರ್ತರು ಭಾಗವಹಿಸುವರು. ಮಧ್ಯಾಹ್ನ 2ಕ್ಕೆ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಸಮಾರೋಪದ ನುಡಿಗಳನ್ನಾಡುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಪ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ ಲಾಡ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರು ವಿಶೇಷ ಆಹ್ವಾನಿತರಾಗಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ