ಗುಮ್ಮಟ ನಗರಿಯಲ್ಲಿ ದೀಪಗಳ ವೈಭವಕ್ಕೆ ಕ್ಷಣಗಣನೆ

KannadaprabhaNewsNetwork | Published : Jan 22, 2024 2:15 AM

ಸಾರಾಂಶ

ಗುಮ್ಮಟ ನಗರಿಯಲ್ಲಿ ಎಲ್ಲ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ದೀಪಗಳನ್ನು ಬೆಳಗಿಸಿ ರಾಮ ಮಂದಿರ ಲೋಕಾರ್ಪಣೆಯ ಕ್ಷಣವನ್ನು ಆನಂದಿಸುವ ನಿಟ್ಟಿನಲ್ಲಿ ಜನತೆ ಸಜ್ಜಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಗುಮ್ಮಟ ನಗರಿಯಲ್ಲಿ ಎಲ್ಲ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ದೀಪಗಳನ್ನು ಬೆಳಗಿಸಿ ರಾಮ ಮಂದಿರ ಲೋಕಾರ್ಪಣೆಯ ಕ್ಷಣವನ್ನು ಆನಂದಿಸುವ ನಿಟ್ಟಿನಲ್ಲಿ ಜನತೆ ಸಜ್ಜಾಗುತ್ತಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಕ್ಷಣಗಣನೆಗೆ ಗುಮ್ಮಟ ನಗರಿಯ ಜನರು ಸಜ್ಜಾಗಿದ್ದು, ಅಲ್ಲದೆ ರಾಮಮಂದಿರ ಸೇರಿದಂತೆ ಹಲವಾರು ದೇವಾಲಯಗಳಲ್ಲಿ ರಾಮ ಭಜನೆ, ಹೋಮ-ಹವನ, ಯಜ್ಞ-ಯಾಗಾದಿಗಳ ಮೂಲಕ ರಾಮ ಮಂದಿರ ಲೋಕಾರ್ಪಣೆಯನ್ನು ಧಾರ್ಮಿಕವಾಗಿ ಆಚರಿಸಲಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಬೃಹತ್ ಎಲ್‌ಇಡಿ ಪರದೆಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿ ರಾಮಮಂದಿರ ಲೋಕಾರ್ಪಣೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲು ಮುಂದಾಗಿವೆ.

ರಾಮ ನವಮಿ ಉತ್ಸವ ಅಂಗವಾಗಿ ಬೃಹತ್ ಮೆರವಣಿಗೆ, ಅರ್ಥಫೂರ್ಣವಾದ ಕಾರ್ಯಕ್ರಮಗಳ ಆಚರಣೆಗೆ ಸದಾ ಮುಂಚೂಣಿ ವಹಿಸುವ ಉಮೇಶ ವಂದಾಲ ರಾಮ ಮಂದಿರ ಲೋಕಾರ್ಪಣೆಯನ್ನು ಹಬ್ಬದಂತೆ ಆಚರಿಸಲು ಕಾರ್ಯಯೋಜನೆ ರೂಪಿಸಿದ್ದಾರೆ.

ಕಿರಾಣ ಬಜಾರ್‌ನಲ್ಲಿ ದಿಪೋತ್ಸವ, ರಾಮ ದೇವರಿಗೆ ಪೂಜೆ ಹಾಗೂ ಎಲ್ಲರಿಗೂ ಬಾದಾಮಿ ಹಾಲು ವಿತರಣೆ ಮಾಡುವ ಮೂಲಕ ಆಚರಿಸಲು ಯುವ ಮುಖಂಡ ಉಮೇಶ ಕಾರಜೋಳ ಅವರು ತಂಡದೊಂದಿಗೆ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಾಲಯದಲ್ಲಿ ಜ.೨೨ರ ಬೆಳಗ್ಗೆ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿಕೊಂಡಿದೆ. ಸುಮಾರು ೨೫ಕ್ಕೂ ಹೆಚ್ಚು ಋತ್ವಿಕರು ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ನೇತೃತ್ವದಲ್ಲಿ ಯಜ್ಞವನ್ನು ನೆರವೇರಿಸುವರು. ಯಾಗದಲ್ಲಿ ಒಟ್ಟು ೫ ಹೋಮಕುಂಡಗಳು, ನೂರೊಂದು ಕಲಶಗಳನ್ನು ಸ್ಥಾಪಿಸಲಾಗುತ್ತಿದೆ.

ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣವು, ನಮ್ಮೆಲ್ಲರ ಜೀವನದಲ್ಲಿ ಅದೃಷ್ಟವಶಾತ್ ಬಂದಿದೆ. ಈ ಅಮೂಲ್ಯ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಲು, ನಗರದಲ್ಲಿ ಕನಿಷ್ಠ ಒಂದು ಲಕ್ಷ ದೀಪೋತ್ಸವ ಬೆಳಗಿಸಲು ಗುಮ್ಮಟಿನಗರಿಯರು ಸಿದ್ಧರಾಗಿದ್ದಾರೆ.

Share this article