ರಾಮಮೂರ್ತಿ ನವಲಿ ಗಂಗಾವತಿ
ಈಗಾಗಲೇ ದುರ್ಗಾದೇವಿ ದೇವಸ್ಥಾನ ಸಮಿತಿಯಿಂದ ರಾಯಚೂರು ರಸ್ತೆ, ಕನಕಗಿರಿ, ಕೊಪ್ಪಳ ಮತ್ತು ಹುಲಿಗೆಮ್ಮ ಗ್ರಾಮದ ರಸ್ತೆಗಳಲ್ಲಿ ದ್ವಾರಬಾಗಿಲು ನಿರ್ಮಿಸಲಾಗಿದ್ದು, ವಿವಿಧ ವೃತ್ತಗಳಲ್ಲಿ ದುರ್ಗಾದೇವಿ ಮೂರ್ತಿಯ ಭಾವಚಿತ್ರವುಳ್ಳ ಕೇಸರಿ ಬಣ್ಣದ ಬ್ಯಾನರ್ ಅಳವಡಿಸಲಾಗಿದೆ. ಅಲ್ಲದೇ ನಗರದ ರಸ್ತೆಯುದ್ದಕ್ಕೂ ವಿದ್ಯುತ್ ಅಲಂಕಾರ ಮತ್ತು ದೇವಿಯ ಅಲಂಕಾರ ರಾರಾಜಿಸುತ್ತವೆ.
ವಿವಿಧ ಸಮಾಜ ಮತ್ತು ವಿವಿಧ ಸಂಘ ಸಂಸ್ಥೆಯವರು ಸಹ ಜಾತ್ರೆಗೆ ಆಹ್ವಾನ ನೀಡುವ ಬ್ಯಾನರ್ ಹಾಕಿದ್ದು, ದೇಗುಲದ ರಸ್ತೆಯ ಮುಂಭಾಗದಲ್ಲಿ ಭಕ್ತರ ದರ್ಶನಕ್ಕೆ ಬೃಹತ್ ಚಪ್ಪರ ಹಾಕಲಾಗಿದೆ.ಮೂರು ವರ್ಷಕ್ಕೊಮ್ಮೆ ಜಾತ್ರೆ: ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಜರುಗುವ ಗ್ರಾಮ ದೇವತೆ ಜಾತ್ರೆಗೆ ನಗರದ ಗಣ್ಯರು, ಉದ್ಯಮಿಗಳು ಸೇರಿದಂತೆ ವಿವಿಧ ಸಮಾಜದವರು ಜವಾಬ್ದಾರಿ ಹೊತ್ತಿದ್ದಾರೆ. ಕುಂಭ ಮೆರವಣಿಗೆ, ದೇವಿಗೆ ವಿಶೇಷ ಪೂಜೆ, ರಥೋತ್ಸವ, ದೇವಿ ಪುರಾಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಸಾದದ ವ್ಯವಸ್ಥೆ: ದೇವಿ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಮಾಡಲಾಗಿದೆ. ದಿನ ನಿತ್ಯ 25 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ಕಾರಣಕ್ಕೆ ತೊಂದರೆಯಾಗದಂತೆ ಸಮಿತಿಯವರು ವ್ಯವಸ್ಥೆ ಕೈಗೊಂಡಿದೆ.ಗ್ರಾಮದೇವತೆ ದುರ್ಗಾದೇವಿ ಜಾತ್ರೆ ಹಿನ್ನೆಲೆಯಲ್ಲಿ ಬರುವ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದ್ದು. ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮತ್ತು ಸುಗಮವಾಗಿ ದರ್ಶನ ಪಡೆಯುವುದಕ್ಕೆ ಅನುಕೂಲ ಮಾಡಲಾಗಿದೆ, ದಿನ ನಿತ್ಯ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಶ್ರೀದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ತಿಳಿಸಿದ್ದಾರೆ.