ಕ್ರಮಕೈಗೊಳ್ಳುವಂತೆ ದೂರು ನೀಡಿದ್ದ ಮುಂಬೈನ ಜೆಎಂಜೆ ಕಂಒನಿ ವ್ಯವಸ್ಥಾಪಕ ಕನ್ನಡಪ್ರಭ ವಾರ್ತೆ ಚಳ್ಳಕೆರೆ ಚಳ್ಳಕೆರೆಯಲ್ಲಿ ನಕಲಿ ಗುಟ್ಕಾ ತಯಾರಿಕೆ ಘಟಕ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅನುಮಾನಗೊಂಡು ಪರಿಶೀಲನೆ ನಡೆಸಿದ ಗುಟ್ಕಾ ಕಂಪನಿಯವರು ನಕಲಿ ಗುಟ್ಕಾ ತಯಾರಿಕ ಘಟಕವನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಳ್ಳಕೆರೆ ನಗರದ ಅಜ್ಜಯ್ಯಗುಡಿ ರಸ್ತೆಯ ಹಳೆಯದಾದ ಖಾಸಗಿ ಮಿಲ್‌ನಲ್ಲಿ ಯಾವುದೇ ನಾಮಫಲಕವಿಲ್ಲದೆ ನಕಲಿ ಗುಟ್ಕಾವನ್ನು ತಯಾರು ಮಾಡಲಾಗುತ್ತಿತ್ತು. ಮುಂಬೈನ ಜೆಎಂಜೆ ತಯಾರಿಕೆ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಈ ಬಗ್ಗೆ ದೂರು ನೀಡಿದ್ದು, ನಮ್ಮ ಕಂಪನಿಯ ಟ್ರೇಡ್ ಮಾರ್ಕ್ ಆದ ಜಿಒಎ ನಂ-೦೧, ಜೊತೆಯಲ್ಲಿ ಜೆ.ಎಂ. ಜೋಶಿಯವರ ಭಾವಚಿತ್ರ ಉಪಯೋಗಿಸಿ ನಮ್ಮ ಕಂಪನಿ ತಯಾರು ಮಾಡದ ಪಾನ್ ಮಸಾಲ ಮತ್ತು ಅಡಿಗೆ ಉತ್ಪನ್ನಗಳನ್ನು ನಮ್ಮ ಟ್ರೇಡ್ ಮಾರ್ಕ್ ದುರುಪಯೋಗಿಸಿಕೊಂಡು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಹ ಪ್ರಾಣಕ್ಕೆ ಅಪಾಯವಾಗುವ ಸಂಭವಿದ್ದು, ನಕಲಿ ಗುಟ್ಕಾ ಘಟಕದ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಘಟಕದಲ್ಲಿ ಬಿಹಾರ ಮೂಲದ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಘಟಕದ ಒಳಭಾಗದಲ್ಲೇ ಅವರು ಊಟ, ತಿಂಡಿ ಜೊತೆಗೆ ಅಲ್ಲಿಯೇ ತಂಗಿದ್ದು, ನಕಲಿ ಗುಟ್ಕಾ ತಯಾರಿಕೆಯಲ್ಲಿ ತೊಡಗಿದ್ದರು. ಇವರೆಲ್ಲರ ಮೇಲುಸ್ತುವಾರಿ ನೋಡಿಕೊಳ್ಳಲು ಒಬ್ಬ ಮ್ಯಾನೇಜರ್ ಇದ್ದು, ಈ ಬಗ್ಗೆ ಕಂಪನಿ ವ್ಯವಸ್ಥಾಪಕರು ಮಾಡಿರುವ ಆರೋಪದ ಬಗ್ಗೆ ಇಲ್ಲಿನ ಪೊಲೀಸರು ಕೂಲಂಕುಷ ತನಿಖೆಗೆ ಇಳಿದಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ ಅಂದಾಜು ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗುಟ್ಕಾಗಳು ಮಾರಾಟವಾಗುತ್ತಿದ್ದು, ಅಸಲಿ, ನಕಲಿ ಯಾವುದೆಂಬುವುದನ್ನು ಗ್ರಾಹಕರು ಪತ್ತೆಹಚ್ಚುವ ಗೋಚಿಗೆ ಹೋಗದೆ ಕೊಂಡಕೂಡಲೇ ಅವುಗಳನ್ನು ಬಾಯಿಗೆ ಇಳಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಗುಟ್ಕಾ ಮಾರಾಟಕ್ಕೂ ಸಹ ತೆರಿಗೆ ವಿಧಿಸಿದ ಹಿನ್ನೆಲೆಯಲ್ಲಿ ನಕಲಿ ಗುಟ್ಕಾ ಘಟಕ ಆರಂಭವಾಗಿದೆ ಎಂಬ ಆರೋಪವಿದೆ. ಇಲ್ಲಿನ ಖಾಸಗಿ ಮಿಲ್ ಆವರಣದಲ್ಲಿರುವ ನಕಲಿ ಗುಟ್ಕಾ ತಯಾರಿಕ ಘಟಕದಲ್ಲಿ ಅಡಿಕೆಯೂ ಸೇರಿದಂತೆ ಇನ್ನಿತರ ವಸ್ತುಗಳಿದ್ದು, ತಯಾರಿಸುವ ಮಿಷನ್ ಇದ್ದು, ಕೆಲವು ಕಂಪನಿ ಹೆಸರಿನಲ್ಲಿ ಫೌಚ್‌ಗಳು ಸಹ ಪತ್ತೆಯಾಗಿವೆ. ಆದರೆ, ಸಾರ್ವಜನಿಕವಾಗಿ ಯಾರಿಗೂ ಅನುಮಾನಬಾರದಂತೆ ಮಿಲ್ ಒಳಭಾಗದಲ್ಲೇ ನಕಲಿ ಗುಟ್ಕಾ ತಯಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಕಂಪನಿ ವ್ಯವಸ್ಥಾಪಕರೇ ಮಾಹಿತಿ ಪಡೆದು ಇಲ್ಲಿಗೆ ಆಗಮಿಸಿ ನಕಲಿ ಗುಟ್ಕಾ ತಯಾರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವರಾಜು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.