ಇಂದು ಬೆಳಗ್ಗೆ 8ರಿಂದ ಮತ ಎಣಿಕೆಗೆ ಸಜ್ಜು: ಡಿಸಿ

KannadaprabhaNewsNetwork |  
Published : Jun 04, 2024, 12:31 AM IST
 3ಕೆಡಿವಿಜಿ11, 12, 13, 14 15-ದಾವಣಗೆರೆ ತಾ. ಶಿವಗಂಗೋತ್ರಿಯ ದಾವಿವಿ ಕ್ಯಾಂಪಸ್ ನ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕಾ ಕಾರ್ಯ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಜೂ.4ರಂದು ಬೆಳಗ್ಗೆ 8ರಿಂದ ನಡೆಯಲಿದೆ. ಮತ ಎಣಿಕೆಗಾಗಿ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

- ಪ್ರತಿ ಕ್ಷೇತ್ರಕ್ಕೆ 14 ಟೇಬಲ್‌, ಪ್ರತಿ ಸುತ್ತಿಗೆ 112 ಮತಗಟ್ಟೆಗಳ ಮತ ಎಣಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಜೂ.4ರಂದು ಬೆಳಗ್ಗೆ 8ರಿಂದ ನಡೆಯಲಿದೆ. ಮತ ಎಣಿಕೆಗಾಗಿ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಮತ ಎಣಿಕಾ ಕೇಂದ್ರದಲ್ಲಿ ಸೋಮವಾರ ಸಿದ್ಧತೆ ಕಾರ್ಯ, ಕೊಠಡಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿಗೆ 112 ಮತಗಟ್ಟೆಗಳ ಎಣಿಕೆ ಆಗಲಿದೆ ಎಂದರು.

ಇಡೀ ಕ್ಷೇತ್ರದಲ್ಲಿ 1947 ಮತಗಟ್ಟೆಗಳಿದ್ದು, ಕನಿಷ್ಠ 16 ಹಾಗೂ ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಸ್ಟ್ರಾಂಗ್‌ ರೂಂ ಪಕ್ಕದಲ್ಲೇ 8 ಕೌಂಟಿಂಗ್‌ ರೂಂ ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರು ಎಣಿಕೆ ವೀಕ್ಷಕರು, ಎಣಿಕೆ ಸಹಾಯಕರು, ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸುವರು. ರಾಜಕೀಯ ಪಕ್ಷಗಳ ಏಜೆಂಟರು ಇರುತ್ತಾರೆ. ಅಂಚೆ ಮತ ಎಣಿಕೆಗೆ 12 ಟೇಬಲ್‌ಗಳನ್ನು ಹಾಕಲಾಗಿದ್ದು, ಸೇವಾ ಮತದಾರರ ಮತ ಎಣಿಕೆಗೆ 1 ಟೇಬಲ್‌ನಲ್ಲಿ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಎಣಿಕೆ ಪ್ರಕ್ರಿಯೆಯು ಜೂ.4ರ ಬೆಳಗ್ಗೆ 6.30ರಿಂದ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಮತ ಎಣಿಕೆ ಆರಂಭವಾಗಲಿದೆ. ಬೆಳಗ್ಗೆ 8 ಗಂಟೆಗೆ ಜೊತೆಯಲ್ಲಿಯೇ ವಿದ್ಯುನ್ಮಾನ ಮತ ಯಂತ್ರದ ಎಣಿಕೆ ಕಾರ್ಯ ಆರಂಭವಾಗಲಿದೆ. ಪ್ರತಿ ಸುತ್ತಿನ ಎಣಿಕೆ ಮುಕ್ತಾಯವಾದ ನಂತರ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಫಲಿತಾಂಶ ಪ್ರಚಾರಪಡಿಸಲಾಗುವುದು ಎಂದು ಹೇಳಿದರು.

ಪಾರದರ್ಶಕ, ಶಾಂತಿಯುತ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮತ ಎಣಿಕೆಗೆ ಜಿಲ್ಲಾಡಳಿತ ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆ 8 ರಿಂದ ಎಣಿಕೆ ಆರಂಭವಾಗಲಿದೆ. ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭವಾಗುತ್ತದೆ. ಪ್ರತಿ 1 ಟೇಬಲ್‌ಗೆ ಒಬ್ಬ ಎಆರ್‌ಒ, ಒಬ್ಬ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರು ಇರಲಿದ್ದಾರೆ ಎಂದು ತಿಳಿಸಿದರು.

- - -

ಕೋಟ್‌ ಪ್ರತಿ ಸುತ್ತಿನಲ್ಲೂ ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿವಾರು ಮತಗಳ ಬಗ್ಗೆ ಸರ್ಟಿಫೈಡ್ ಮಾಡಿದ್ದನ್ನು, ತಾವು ಸೇರಿದಂತೆ ವೀಕ್ಷಕರು ಪ್ರಕಟಿಸುತ್ತೇವೆ. ಪಾರದರ್ಶಕ ಎಣಿಕೆಗಾಗಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುವುದು. ಪ್ರತಿ ಇವಿಎಂಗಳನ್ನು ಎಣಿಕಾ ಸ್ಥಳಕ್ಕೆ ಕೊಂಡೊಯ್ಯುವಾಗ ಕ್ಯಾಮರಾ ಕಣ್ಗಾವಲು ಇರಲಿದೆ. ಒಟ್ಟಾರೆ ಪಾರದರ್ಶಕ, ಶಾಂತಿಯುತ, ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ

- ಡಾ. ಎಂ.ವಿ. ವೆಂಕಟೇಶ, ಡಿಸಿ, ದಾವಣಗೆರೆ

- - - -3ಕೆಡಿವಿಜಿ11, 12, 13, 14 15:

ದಾವಣಗೆರೆ ತಾಲೂಕು ಶಿವಗಂಗೋತ್ರಿಯ ದಾವಣಗೆರೆ ವಿವಿ ಕ್ಯಾಂಪಸ್ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕಾ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಪರಿಶೀಲಿಸಿದರು.

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ