ಸಂಸ್ಕೃತಿ ಗೌರವಿಸಿದರೆ ದೇಶ ಬೆಳವಣಿಗೆ: ಸಂಸದ ಒಡೆಯರ್

KannadaprabhaNewsNetwork |  
Published : Nov 11, 2024, 11:47 PM IST
ಕೃಷ್ಣದತ್ತ  | Kannada Prabha

ಸಾರಾಂಶ

ವೈವಿಧ್ಯತೆ ಭಾರತದ ಶಕ್ತಿ ಆಗಬೇಕು ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಅರೆಭಾಷೆ ಗಡಿನಾಡ ಉತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅರೆ ಭಾಷೆ ಹಾಗೂ ಅರೆಭಾಷೆ ಸಂಸ್ಕೃತಿಯನ್ನು ಬೆಳೆಸುವುದರೊಂದಿಗೆ ರಾಜ್ಯ , ದೇಶದ, ಸಂಸ್ಕೃತಿ ಗೌರವಿಸಿದಾಗ ಭವಿಷ್ಯದಲ್ಲಿ ಭಾರತೀಯತೆ ಬೆಳೆಯಲು ಸಾಧ್ಯ. ದೇಶದ ಪ್ರತಿ ಗ್ರಾಮ, ನಾಡು, ಜಿಲ್ಲೆಗಳಲ್ಲಿ ವೈವಿಧ್ಯತೆ ಇದೆ.ವೈವಿಧ್ಯತೆ ಭಾರತದ ಶಕ್ತಿ ಆಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆ ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅರೆಭಾಷೆ ಗಡಿನಾಡ ಉತ್ಸವ-2024ರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ, ಅರೆ ಭಾಷೆ ಮಾತನಾಡುವ ಜನಾಂಗ ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ನೆಲೆಸಿದ್ದಾರೆ. ಅವರದೇ ಆದ ಆಚಾರ,ವಿಚಾರ, ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಯುವ ಪೀಳಿಗೆ ಇಂತಹ ಆಚಾರ, ವಿಚಾರ ಸಂಸ್ಕೃತಿಗಳನ್ನು ಪಾಲಿಸಬೇಕು. ವೈವಿಧ್ಯಮಯ ಸಂಸ್ಕೃತಿಗಳನ್ನು ಬೆಳೆಸುವುದರಿಂದ ಕರ್ನಾಟಕದ ನೈಜ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ ಜನಾಂಗ ಭಾಷೆ, ಸಂಪ್ರದಾಯ ಮರೆಯಬಾರದು. ಭಾಷೆ ಸಂಪ್ರದಾಯಗಳನ್ನು ಬೆಳೆಸುವುದು ಎಲ್ಲರ ಜವಾಬ್ದಾರಿ ಅಕಾಡೆಮಿ ನೆರವಿನಿಂದ ಭಾಷೆ, ಸಂಪ್ರದಾಯಗಳನ್ನು ಬೆಳೆಸಬೇಕು. ಸರ್ಕಾರದ ವತಿಯಿಂದ ಇದಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಮಾತನಾಡಿ, ನಾಡು ಅಭಿವೃದ್ಧಿ ಆಗಬೇಕಾದರೆ ಆಚಾರ, ವಿಚಾರ, ಸಂಸ್ಕೃತಿ ಬೆಳೆಯಬೇಕು. ಆ ಮೂಲಕ ಊರು ಅಭಿವೃದ್ಧಿ ಆಗಲು ಸಾಧ್ಯ. ಅರೆ ಭಾಷೆ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ ಸಮಾಜವನ್ನು ಕಟ್ಟುವ ಕೆಲಸ ಉತ್ಸವದಿಂದ ಸಾಧ್ಯವಾಗಿದೆ ಎಂದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಸಮಾರೋಪ ಭಾಷಣ ಮಾಡಿ, ಮಾತೃವಿನಿಂದ ಕಲಿತ ಭಾಷೆಯನ್ನು ಪ್ರೀತಿಸಿ ಗೌರವಿಸಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಾನಂದ ಮಾವಜಿ ಮಾತನಾಡಿ ಚೆಯ್ಯಂಡಾಣೆಯಲ್ಲಿ ನಡೆಸಲಾಗುತ್ತಿರುವ ಗಡಿನಾಡ ಉತ್ಸವ ಎರಡನೇ ಕಾರ್ಯಕ್ರಮ. ವಿಶೇಷವಾಗಿ ಕ್ರೀಡಾ ಸ್ಪರ್ಧೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬರಹಗಾರರಿಗೂ ಅಕಾಡೆಮಿ ವತಿಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು. ಅಕಾಡೆಮಿಯ ನಿರ್ದೇಶಕಿ ಚಂದ್ರಾವತಿ ಬಡ್ಡಡ್ಕ ಪ್ರಾಸ್ತವಿಕ ಮಾತನಾಡಿದರು.

ಸಾಂಸ್ಕೃತಿಕ ಮೆರವಣಿಗೆ:

ಕಾರ್ಯಕ್ರಮಕ್ಕೂ ಮೊದಲು ಚೆಯ್ಯಂಡಾಣೆ ಮುಖ್ಯರಸ್ತೆಯಿಂದ ಶಾಲೆವರೆಗೆ ವಾದ್ಯ ಮೇಳ, ಹುಲಿ ವೇಷ, ಸಾಂಪ್ರದಾಯಿಕ ಉಡುಪು ,ತಳಿಲಿಯೆಕ್ಕಿ ಬೊಳಕಿನೊಂದಿಗೆ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.

ಹಿರಿಯ ಅರೆಭಾಷೆ ದಂಪತಿ, ಗ್ರಾಮದ ಹಿರಿಯರಾದ ಆನಂದಯ್ಯ , ಕೃಷಿ ಕ್ಷೇತ್ರದಲ್ಲಿ ಅಯ್ಯಟಿ ಸುಗುಣ, ಕ್ರೀಡಾ ಕ್ಷೇತ್ರದಲ್ಲಿ ಬಾರಿಕೆ ಜೀವಿತ, ಶಿಕ್ಷಣ ಕ್ಷೇತ್ರದಲ್ಲಿ ಚಂದ್ರಾವತಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೋಟಂಬೈಲು ಅನಂತ ಕುಮಾರ್, ಕೊಟ್ಟಕೇರಿಯ ನರ್ಮೇಂದ್ರ ಸಾಧಕ ಅವರನ್ನು ಸನ್ಮಾನಿಸಲಾಯಿತು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಪಾರಾಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ, ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಕೆದಮುಳ್ಳೂರು ಗ್ರಾ.ಪಂ. ಮಾಜಿ ಸದಸ್ಯ ಗೌಡುಧಾರೆ ಚೋಟು ಬಿದ್ದಪ್ಪ, ಉತ್ಸವದ ಸಂಚಾಲಕ ವಿನೋದ್ ಮೂಡಗದ್ದೆ, ಅಕಾಡೆಮಿ ಸದಸ್ಯರಾದ , ಅಯ್ಯಪ್ಪ ಯುವಕ ಸಂಘದ ಪದಾಧಿಕಾರಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಉದ್ಘಾಟನಾ ಸಮಾರಂಭ: ಮಕ್ಕಳಿಗೆ ಅರೆಭಾಷೆಯನ್ನು ಕಲಿಸಿದರೆ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯ. ಈ ರೀತಿಯ ಕಾರ್ಯಕ್ರಮಗಳನ್ನು ಇನ್ನಷ್ಟು ಆಯೋಜಿಸಿ ಅರೆಭಾಷೆ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಹೇಳಿದರು.

ಅರೆಭಾಷೆ ಗಡಿನಾಡ ಉತ್ಸವದ ಕ್ರೀಡಾಕೂಟ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಧ್ವಜಾರೋಹಣ ನೆರವೇರಿಸಿದರು.ನಿವೃತ್ತ ಶಿಕ್ಷಕಿ ಮಂಞಂಡ್ರ ರೇಖಾ ಉಲ್ಲಾಸ್ ಮಾತನಾಡಿ, ಆಟದಲ್ಲಿ ಸಕಾರಾತ್ಮಕ ಭಾವನೆ ಇರಬೇಕು. ಕ್ರೀಡೆಗೆ ಸಂಬಂಧಿಸಿದಂತೆ ಸೋಲನ್ನು ಯಶಸ್ಸಿನ ಮೆಟ್ಟಿಲು ಎಂದು ಪರಿಗಣಿಸಬೇಕು ಎಂದು ಹೇಳಿದರು.ಗಡಿನಾಡ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟಕ್ಕೆ ಪ್ರಮುಖರು ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಕಡಂಗ ಗಣಪತಿ ದೇವಸ್ಥಾನದ ಎದುರು ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಗಾಳಿಯಲ್ಲಿ ಗುಂಡು ಹಾರಿಸಿ, ಸದಾನಂದ ಮಾವಜಿ ಮಾವಜಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಪುರುಷರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಓಟದಲ್ಲಿ ಭಾಗವಹಿಸಿದ್ದರು.ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾವಜಿ ದೀಪ ಬೆಳಗಿದರು.

ಬಳಿಕ ವಿವಿಧ ಕ್ರೀಡಾಕೂಟಗಳು ಮತ್ತು ಸ್ಪರ್ಧೆಗಳು ನಡೆದವು. ತೋಟಂ ಬೈಲು ಅನಂತಕುಮಾರ್, ಪೊಕ್ಕಳಂಡ್ರ ಧನೋಜ್, ಮನೋಜ್, ಚಂಡಿರ ರಾಲಿ ಗಣಪತಿ,ವಿ ನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಅಕಾಡೆಮಿ ವತಿಯಿಂದ ಪುಸ್ತಕ ಮಾರಾಟ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
ಹೋರಾಟಗಾರರ ಮೇಲಿನ ಎಲ್ಲ ಕೇಸ್ ಹಿಂಪಡೆಯಿರಿ