ಕುಮಟಾ: ಪ್ರಕೃತಿಗೆ ಮನುಷ್ಯನ ಆಸೆಗಳನ್ನು ಪೂರೈಸುವ ಶಕ್ತಿ ಇದೆಯೇ ಹೊರತು ದುರಾಸೆಗಳನ್ನಲ್ಲ. ಮನುಷ್ಯ ಅತಿರೇಕದ ದುರಾಸೆಯಿಂದ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ಸ್ವತಃ ವಿನಾಶದೆಡೆಗೆ ಸಾಗಿದ್ದಾನೆ ಎಂದು ಎಸಿಎಫ್ ಜಿ. ಲೋಹಿತ್ ತಿಳಿಸಿದರು.
ಪರಿಸರ ನಾಶ ಹೀಗೆಯೇ ಮುಂದುವರಿದರೆ ೧೯೫೦ರ ಹೊತ್ತಿಗೆ ಭೂಮಿಯ ಶೇ. ೭೫ರಷ್ಟು ಮರುಭೂಮಿಯಾಗಲಿದೆ. ಅರಣ್ಯ ನಾಶದ ಪರಿಣಾಮವಾಗಿ ಮಳೆಯ ವಿಷಮತೆ, ಮಾಲಿನ್ಯದ ಹೆಚ್ಚಳ, ಕ್ಷಾಮ, ಕೃಷಿ ಕ್ಷೇತ್ರಕ್ಕೆ ಹಿನ್ನಡೆ ಇತ್ಯಾದಿ ಸಮಸ್ಯೆಗಳು ತಲೆದೋರುತ್ತಾ ದೇಶದ ಆರ್ಥಿಕತೆಗೆ ಭಾರಿ ಹೊಡೆತವನ್ನು ನೀಡುತ್ತದೆ. ಇನ್ನಾದರೂ ಜಾಗೃತರಾಗಿ ಪರಿಸರವನ್ನು ರಕ್ಷಿಸಲು ಕಂಕಣಬದ್ಧರಾಗಬೇಕು. ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ, ಮುಖ್ಯವಾಗಿ ಯುವಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಮುಖ್ಯ ಅತಿಥಿ ಆರ್‌ಎಫ್‌ಒ ಎಸ್.ಟಿ. ಪಟಗಾರ ಮಾತನಾಡಿ, ಇಂತಹ ಕಾರ್ಯಕ್ರಮಗಳು ನೆಪಮಾತ್ರಕ್ಕೆ ಎಂಬಂತಾಗದೇ ಅರ್ಥಪೂರ್ಣವಾಗಿ ಪ್ರಯೋಜನಕಾರಿಯಾಗುವಂತಾಗಬೇಕು. ಅಂದಾಗ ಮಾತ್ರ ಪರಿಸರ ಪೂರಕ ಚಟುವಟಿಕೆಗಳಿಗೆ ಸಾರ್ಥಕತೆ ದೊರೆಯುತ್ತದೆ ಎಂದರು.ಅತಿಥಿ ಹಿರೇಗುತ್ತಿ ಆರ್‌ಎಫ್‌ಒ ಪ್ರವೀಣಕುಮಾರ, ಪ್ರಕೃತಿಯೇ ನಿಜವಾದ ದೇವರಾಗಿದ್ದು, ಇದನ್ನು ಪ್ರೀತಿ, ಗೌರವ, ಕಾಳಜಿಯಿಂದ ಕಂಡರೆ ಒಳ್ಳೆಯ ಫಲ ಖಂಡಿತ ದೊರೆಯುತ್ತದೆ. ಇಂತಹ ದಿನಾಚರಣೆಗಳು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯವೂ ಪರಿಸರ ಕಾಳಜಿ ನಮ್ಮ ಧ್ಯೇಯ, ಗುರಿಯಾಗಬೇಕು. ಅರಣ್ಯ ಅತಿಕ್ರಮಣದಂತಹ ಸಮಸ್ಯೆ ತಡೆಗಟ್ಟಲು ಅರಣ್ಯ ಇಲಾಖೆಯ ಜತೆಗೆ ಯುವಜನತೆ ಕೈಜೋಡಿಸಬೇಕು ಎಂದರು.