ಗುಂಡ್ಲುಪೇಟೆಗೆ ದೇಶದ ಮೊದಲ ಎಐ ಸೆಂಟರ್‌

KannadaprabhaNewsNetwork |  
Published : Sep 04, 2026, 01:45 AM IST
3ಜಿಪಿಟಿ4ಗುಂಡ್ಲುಪೇಟೆಯಲ್ಲಿ ಆರಂಭವಾಗಲಿರುವ ಎಐ ಮೈಕ್ರೋ ಡೇಟಾ ಕೇಂದ್ರ. | Kannada Prabha

ಸಾರಾಂಶ

ಇಲ್ಲಿಯವರೆಗೆ ಡೇಟಾ ಸೆಂಟರ್ ಎಂದರೆ ಬೆಂಗಳೂರು, ಹೈದರಾಬಾದ್, ಮುಂಬೈನಂತಹ ಮಹಾನಗರಗಳಲ್ಲಿರುವ ದೈತ್ಯ ಕಟ್ಟಡಗಳು ಎಂಬ ಕಲ್ಪನೆ ನಮ್ಮದಾಗಿತ್ತು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿಯವರೆಗೆ ಡೇಟಾ ಸೆಂಟರ್ ಎಂದರೆ ಬೆಂಗಳೂರು, ಹೈದರಾಬಾದ್, ಮುಂಬೈನಂತಹ ಮಹಾನಗರಗಳಲ್ಲಿರುವ ದೈತ್ಯ ಕಟ್ಟಡಗಳು ಎಂಬ ಕಲ್ಪನೆ ನಮ್ಮದಾಗಿತ್ತು.

ಆದರೆ ಆ ಕಲ್ಪನೆ ಇದೀಗ ಬದಲಾಗುತ್ತಿದೆ. ಸಣ್ಣ ಪಟ್ಟಣಗಳಲ್ಲೂ ಜಾಗತಿಕ ತಂತ್ರಜ್ಞಾನ ತಲುಪಿಸುವ ಪ್ರಯತ್ನವಾಗಿ, ಪ್ರಥಮವಾಗಿ ದೇಶದಲ್ಲೇ ಮೊದಲಿಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಎಐ ಮೈಕ್ರೋ ಡೇಟಾ ಕೇಂದ್ರ ಸೆ.5ರಂದು ಆರಂಭವಾಗಲಿದ್ದು, ಸೈನಾಪಿನ್ ಸಂಸ್ಥೆಯು ಈ ಕೇಂದ್ರವನ್ನು ಪ್ರಾರಂಭಿಸುತ್ತಿದೆ.

ಮೈಕ್ರೋ ಡೇಟಾ ಸೆಂಟರ್ ಎಂದರೇನು?:

ದೊಡ್ಡ ಡೇಟಾ ಸೆಂಟರ್‌ಗೆ ಎಕರೆಗಟ್ಟಲೆ ಜಾಗ, ಭಾರಿ ಮೆಗಾವ್ಯಾಟ್‌ ವಿದ್ಯುತ್ ಬೇಕು. ಆದರೆ ಮೈಕ್ರೋ ಡೇಟಾ ಸೆಂಟರ್ ಒಂದು ಫ್ರಿಡ್ಜ್ ಗಾತ್ರದ ಕ್ಯಾಬಿನೆಟ್‌ನಂತಿರುತ್ತದೆ. ಅದರೊಳಗೇ ಸರ್ವರ್, ಬ್ಯಾಟರಿ ಬ್ಯಾಕಪ್, ಕೂಲಿಂಗ್ ಸಿಸ್ಟಂ, ಸೆಕ್ಯುರಿಟಿ ವ್ಯವಸ್ಥೆ ಎಲ್ಲವೂ ಇರುತ್ತದೆ.

ಇದನ್ನು ಯಾವುದೇ ಸಣ್ಣ ಕೊಠಡಿಯಲ್ಲೂ ಅಳವಡಿಸಬಹುದು. ಇದು ದೊಡ್ಡ ಕ್ಲೌಡ್‌ನ ಚಿಕ್ಕ ರೂಪ. ಇದರ ಜತೆಗೆ ‘ಎಐ’ ಸೇರಿದಾಗ ಅದರ ಶಕ್ತಿ ದುಪ್ಪಟ್ಟಾಗುತ್ತದೆ.ಸಾಮಾನ್ಯ ಕಂಪ್ಯೂಟರ್ ಸಿಪಿಯುನಲ್ಲಿ ಕೆಲಸ ಮಾಡಿದರೆ, ಎಐ ಸೆಂಟರ್‌ನಲ್ಲಿ ಜಿಪಿಯು ಚಿಪ್‌ಗಳಿರುತ್ತವೆ.

ಇದರಿಂದ ಕೃತಕ ಬುದ್ಧಿ ಮತ್ತೆ ಮಾದರಿಗಳನ್ನು ಸ್ಥಳೀಯವಾಗಿಯೇ ತರಬೇತಿ ನೀಡಿ,ಫಲಿತಾಂಶ ಪಡೆಯಬಹುದಾಗಿದೆ. ಇದನ್ನೇ ‘ಎಡ್ಜ್ ಕಂಪ್ಯೂಟಿಂಗ್’ ಎನ್ನುತ್ತಾರೆ.

ರೈತರಿಗೆ, ವಿದ್ಯಾರ್ಥಿಗಳಿಗೆ ಲಾಭವೇನು:

ಉದಾಹರಣೆಗೆ,ಗುಂಡ್ಲುಪೇಟೆಯ ರೈತನೊಬ್ಬ ತನ್ನ ಬೆಳೆಯ ಫೋಟೋ ತೆಗೆದು ಎಐ ಮೂಲಕ ರೋಗ ಗುರುತಿಸಲು ಬಯಸಿದರೆ,ಆ ಫೋಟೋ ಬೆಂಗಳೂರಿನ ಸರ್ವರ್‌ಗೆ ಹೋಗಿ ವಾಪಸ್ ಬರಲು ಸಮಯ ಹಿಡಿಯುತ್ತದೆ.

ಅದೇ ಡೇಟಾ ಗುಂಡ್ಲುಪೇಟೆಯಲ್ಲೇ ಪ್ರೊಸೆಸ್ ಆದರೆ ಕೆಲವೇ ಸೆಕೆಂಡುಗಳಲ್ಲಿ ಉತ್ತರ ಸಿಗುತ್ತದೆ. ವೇಗ ಹೆಚ್ಚು, ವೆಚ್ಚ ಕಡಿಮೆ, ಡೇಟಾ ಸುರಕ್ಷತೆ ಹೆಚ್ಚು.ಇದು ಸ್ಥಳೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ವರದಾನವಾಗಲಿದೆ.

ಕೇಂದ್ರ ಸರ್ಕಾರದ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (DPDP) ಕಾಯ್ದೆ-2023 ರ ಆಶಯದಂತೆ, ಸ್ಥಳೀಯ ಡೇಟಾ ಸ್ಥಳೀಯವಾಗಿಯೇ ಸುರಕ್ಷಿತವಾಗಿ ಉಳಿಯಲು ಇದು ಸಹಕಾರಿಯಾಗಲಿದೆ.ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಇಂತಹ ವ್ಯವಸ್ಥೆ ಗುಂಡ್ಲುಪೇಟೆಯಂತಹ ಸಣ್ಣ ಪಟ್ಟಣದಲ್ಲಿ ಆರಂಭವಾಗುತ್ತಿರುವುದು ಡಿಜಿಟಲ್ ಇಂಡಿಯಾ ಕನಸನ್ನು ಹಳ್ಳಿಗಳಿಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆ ಇದಾಗಿದೆ.

ಇದು ಕೇವಲ ಒಂದು ಕಂಪನಿಯ ಉದ್ಘಾಟನೆಯಲ್ಲ, ಗುಂಡ್ಲುಪೇಟೆ ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಗುರುತಿಸಿಕೊಳ್ಳಲು ಸಿಕ್ಕಿರುವ ಅವಕಾಶ ಮತ್ತು ಸ್ಥಳೀಯರಿಗೆ ಉದ್ಯೋಗಾಂಕ್ಷಿಗಳಿಗೆ ಅನುಕೂಲಕರವಾಗಿದೆ.

ಸ್ಥಳೀಯ ಎನ್ನುವುದು ಹೆಮ್ಮೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಎಐ ಮೈಕ್ರೋ ಡೇಟಾ ಕೇಂದ್ರವನ್ನು ಪಟ್ಟಣದ ಸ್ಥಳೀಯರೇ ಆದ ವಿಜಯ್ ಗ್ಯಾಸ್ ಏಜೆನ್ಸೀಸ್ (ಭಾರತ್ ಗ್ಯಾಸ್) ಮಾಲೀಕ ಜಿ.ಆರ್.ದೊರೆಸ್ವಾಮಿ ಅವರ ಪುತ್ರ ಜಿ.ಎಸ್.ಡಿ. ಶ್ರೀನಿಧಿ ತಮ್ಮ ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಮತಿಘಟ್ಟದಲ್ಲಿ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಜಾಗೃತಿ
ಕಿಂಗ್‌ಪಿನ್‌’ ಕನ್ನಾಳೆ ಆಪ್ತರ ಮನೆಗೆ ಸಿಐಡಿ ಲಗ್ಗೆ