ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಗುರುವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ವಿವಿದ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳು ಹಾಗೂ ಸಹಕಾರಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದು 7 ನೇ ಅಧಿಸೂಚನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದವರ ಪೂರ್ಣ ಒಪ್ಪಿಗೆ ಹಾಗೂ ಒಕ್ಕೊರಲ ತೀರ್ಮಾನದೊಂದಿಗೆ ಕಸ್ತೂರಿ ರಂಗನ್ ವರದಿಯನ್ನೇ ಸಮಗ್ರವಾಗಿ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಮಾಲೋಚನಾ ಸಭೆಯ ನೇತೃತ್ವವನ್ನು ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ರಾಜಕೀಯ ಮೀರಿದ ವಿಷಯ. ಅರಣ್ಯ ಇಲಾಖೆಯ ಕಿರುಕುಳದಿಂದ ನಾವು ಈ ಪ್ರದೇಶದಲ್ಲಿ ಹುಟ್ಟಿದ್ದೇ ತಪ್ಪಾಯ್ತು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಬದುಕಿಗೆ ಮಾರಕವಾಗಿರುವ ಈ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಚೌಕಟ್ಟನ್ನು ಮೀರಿ ಸಂಘಟಿತರಾಗಿ ನಿರ್ಣಯ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಈ ವರದಿ ಜಾರಿಯಾಗಬಾರದು. ಹೊಸದಾಗಿ ಸಮಗ್ರ ಸರ್ವೇ ಆಗಬೇಕಿದೆ ಎಂದೂ ಆಗ್ರಹಿಸಿದರು.ಪಾಶ್ಚಿಮಾತ್ಯರಿಂದ ಕಲುಷಿತಗೊಂಡಿರುವ ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಪಶ್ಚಿಮಘಟ್ಟದಿಂದ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅವರ ಹಣದಲ್ಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ತಾಲೂಕಿನ ಒಕ್ಕೊರಲ ನಿರ್ಣಯ ಕೇಂದ್ರ ರಾಜ್ಯ ಸರ್ಕಾರಗಳ ಗಮನ ಸೆಳೆಯಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ಈ ವರದಿಯನ್ನು ವಿರೋಧಿಸಿ ಸರ್ಕಾರಕ್ಕೆ ಪತ್ರಗಳನ್ನು ಬರೆಯಬೇಕು ಎಂದೂ ಹೇಳಿದರು.
ಮುಖ್ಯ ಭಾಷಣಕಾರರಾಗಿದ್ದ ದಿಗಂತ್ ಬಿಂಬೈಲು ಮಾತನಾಡಿ, ವಿದೇಶಿ ಪ್ರಭಾವ ಹಾಗೂ ಲಾಗಾಯ್ತಿನಿಂದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದ್ದು ನಾವು ಇಂದಿಗೂ ಬ್ರಿಟೀಷರ ಆಳ್ವಿಕೆಯಲ್ಲೇ ಇದ್ದೀವಾ ಎಂಬಂತಾಗಿದೆ. ಸಮಸ್ಯೆಗಳಿಗೆ ಸೋತು ಜನರು ಗುಳೆ ಹೋಗುವಂತಹ ವಾತಾವರಣ ನಿರ್ಮಿಸುವುದು ಇದರ ಹಿಂದಿನ ಮರ್ಮ ಎಂದರು.
ಸುಪ್ರೀಕೋರ್ಟಿನ ಹಸಿರುಪೀಠದ ಆದೇಶದನ್ವಯ ವರದಿಯ 7 ನೇ ಅಧಿಸೂಚನೆಯಲ್ಲಿ ತಾಲೂಕಿನ 157 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು ಇದರಲ್ಲಿ ಶಾಲಾ ಕಾಲೇಜುಗಳು, ಜನವಸತಿ, ಕೃಷಿಭೂಮಿ, ಸಂಪರ್ಕ ರಸ್ತೆಗಳು, ಸರ್ಕಾರಿ ಕಚೇರಿಗಳು, ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದ್ದು ಅದಿಸೂಚನೆ ಆಧಾರದಲ್ಲಿ ಜಾರಿಯಾದರೆ ಮಲೆನಾಡಿನ ಜನರು ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿದೆ.