ಶಿಕ್ಷಕರ ಕೈಯಲ್ಲಿ ದೇಶದ ಅಭಿವೃದ್ಧಿ ಪಥ: ಶಾಸಕ ನಾರಾ ಭರತ್ ರೆಡ್ಡಿ

KannadaprabhaNewsNetwork |  
Published : Sep 06, 2024, 01:12 AM IST
ಬಳ್ಳಾರಿಯ ಶ್ರೀವಾಲ್ಮೀಕಿ ಭವನದಲ್ಲಿ ಜರುಗಿದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ರವರ 136 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಮಕ್ಕಳನ್ನು ಸರಿದಾರಿಗೆ ನಡೆಸಿ, ಅವರ ಭವಿಷ್ಯ ಕಟ್ಟಿಕೊಡುವ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು.

ಬಳ್ಳಾರಿ: ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಮಾತ್ರ ಯಾವುದೇ ವ್ಯಕ್ತಿ ಉನ್ನತವಾಗಿ ಬೆಳೆಯಲು ಸಾಧ್ಯ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಜಿಲ್ಲಾಡಳಿತ ಹಾಗೂ ಶಿಕ್ಷಣ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಶ್ರೀವಾಲ್ಮೀಕಿ ಭವನದಲ್ಲಿ ಜರುಗಿದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ರವರ 136 ನೇ ಜನ್ಮದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳನ್ನು ಸರಿದಾರಿಗೆ ನಡೆಸಿ, ಅವರ ಭವಿಷ್ಯ ಕಟ್ಟಿಕೊಡುವ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು. ಶಿಕ್ಷಕರು ದೈವ ಸ್ವರೂಪಿಗಳು. ದೇಶದ ಅಭಿವೃದ್ಧಿಯ ಪಥ ಶಿಕ್ಷಕರ ಕೈಯಲ್ಲಿದೆ ಎಂದು ಸ್ಮರಿಸಿದರಲ್ಲದೆ, ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಶಿಕ್ಷಕರು ಶಾಲೆಯ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಗುಣಮಟ್ಟದ ಶಿಕ್ಷಣ ನೀಡುವುದು ಶ್ಲಾಘನೀಯ ಕಾರ್ಯವಾಗಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯಲು ಶಿಕ್ಷಕರ ಶ್ರಮ ಪ್ರಮುಖವಾದುದು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ.ಉಮಾದೇವಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸಮಾಜಶಾಸ್ತ್ರ ಉಪನ್ಯಾಸಕ ಡಾ.ಯು.ಶ್ರೀನಿವಾಸಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಿದರು. ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿರಾವ್ ಸೇರಿದಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ

ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ ಮೇಟಿ, ಹೊನ್ನುರ್.ಬಿ., ಕುಮಾರಸ್ವಾಮಿ.ಎಲ್., ಫಕ್ರುದ್ದೀನ್ ಸಾಹೇಬ್.ಪಿ., ಹಿರಿಯ ಪ್ರಾಥಮಿಕ ಶಾಲೆಯ ವಿ.ತ್ರಿವೇಣಿ, ಗವಿಸಿದ್ದಪ್ಪ, ಅರ್ಚನಾ.ಕೆ., ಎರೆಪ್ಪ.ಸಿ.ಡಿ.ಕೆ.ಎನ್.ಮಲ್ಲಿಕಾರ್ಜುನ ಹಾಗೂ ಪ್ರೌಢ ಶಾಲೆಯ ಟಿ.ಜಿ.ನಾಗರಾಜ, ಶ್ರೀಲತಾ.ಪಿ., ಭಾಷಾ ಮೆಹಬೂಬ ಹಾಗೂ ಸಂತೋಷ್.ಆರ್. ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''