ಶಿಕ್ಷಕ ಕಾಲಮಾನದ ಹೊಸ ಪೀಳಿಗೆಯ ದಿಕ್ಸೂಚಕ: ಇಮ್ಮಡಿ ಸಿದ್ದರಾಮೇಶ್ವರ ಶ್ರೀ

KannadaprabhaNewsNetwork |  
Published : Sep 06, 2024, 01:12 AM IST
ಚಿ್ತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಚಿತ್ರದುರ್ಗ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಎಸ್ ಜೆ ಎಸ್ ಸಮೂಹ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆಯ ನಿಮಿತ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಶಿಕ್ಷಕರ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿಕ್ಷಕ ನಡೆದಾಡುವ ವಿಶ್ವಕೋಶ. ಭವ್ಯಭವಿಷ್ಯದ ಮಾರ್ಗದರ್ಶಕ. ತನ್ನ ಕಾಲಮಾನದ ಹೊಸ ಪೀಳಿಗೆಯ ದಿಕ್ಸೂಚಕ. ಸ್ವಾಸ್ಥ್ಯ ಸಮಾಜ ಸುಧಾರಕ. ನವಯುಗದ ನಾವಿಕ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಣ್ಣಿಸಿದರು.ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಎಸ್‌ಜೆಎಸ್ ಸಮೂಹ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಅಕ್ಷರ ಗುರುಗಳಿಗೆ ಆಧ್ಯಾತ್ಮದ ಗುರುಗಳಿಂದ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ದೀಪ ತಾನುರಿದು ಜಗತ್ತಿಗೆ ಬೆಳಕು ನೀಡುವ ಹಾಗೇ ಶಿಕ್ಷಕರು ತಮ್ಮ ನಿಸ್ವಾರ್ಥ ಸೇವೆಯಿಂದ ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿ ಕಲಿಸಿ ಉಜ್ವಲ ಭವಿಷ್ಯ ರೂಪಿಸುತ್ತಾರೆ ಎಂದರು.

ಗುರು ಎಂದರೆ ವ್ಯಕ್ತಿಯಲ್ಲ, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಒಂದು ಶಕ್ತಿ. ತಂದೆ ತಾಯಿ ಜನ್ಮ ಕೊಡುತ್ತಾರೆ. ಆದರೆ ಗುರುಗಳು ನಮಗೆ ವಿದ್ಯೆ ಬುದ್ಧಿ ಕಲಿಸಿ ನಮ್ಮ ಜೀವನಕ್ಕೊಂದು ಅರ್ಥ ಕೊಡುತ್ತಾರೆ. ಜೀವನ ವಿಕಾಸದ ಪ್ರಚೋದಕರಾಗುತ್ತಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಹಳಿತಪ್ಪಿದ ವಿದ್ಯಾರ್ಥಿಗಳ ವಿದ್ಯಾಪಥವನ್ನು ಪುನರ್ಜೀವನಗೊಳಿಸುವ ಸವಾಲಿನಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿತ್ತು ಎಂದರು.

ಬೋಧಕ ವೃತ್ತಿಯನ್ನು ಇಷ್ಟಪಟ್ಟು, ಸಂತಸದಿಂದ ಆಯ್ಕೆ ಮಾಡಿಕೊಂಡು ಶಿಕ್ಷಕನಾಗಬೇಕು. ಶಿಕ್ಷಣ ವೃತ್ತಿ ಬಗ್ಗೆ ಅಪಾರ ಅಭಿಲಾಷೆಯಿರಬೇಕು. ಶಿಕ್ಷಕ ಆಯ್ಕೆ ಮಾಡಿಕೊಂಡ ಶಿಸ್ತೀಯ ವಿಷಯಗಳ ಬಗ್ಗೆ ಉತ್ತಮ ಮಟ್ಟದ ಜ್ಞಾನ ಹೊಂದಿರಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ಕಾಣುವ ಗುಣವಿರಬೇಕು. ಪ್ರೀತಿ ವಾತ್ಸಲ್ಯಗಳಿಂದ ಬೋಧನೆ ಮಾಡಬೇಕು. ಬೋಧಿಸುವ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನುಂಟು ಮಾಡುವ ಸಾಮರ್ಥ್ಯ ಹೊಂದಿರಬೇಕು. ಉತ್ತಮ ಗುಣಮಟ್ಟದ ಸಂವಹನ ಕೌಶಲ್ಯ ಹೊಂದಿರಬೇಕು ಎಂದರು.

ಜೀವನ ಪರ್ಯಂತ ಹೊಸತನ್ನು ಕಲಿಯುವ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುವ ಇಚ್ಛಾಶಕ್ತಿ ಶಿಕ್ಷಕರಲ್ಲಿ ಇರಬೇಕು. ಎಲ್ಲಾ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಒಂದೇ ಮಟ್ಟದಲ್ಲಿರುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದಲ್ಲಿರುವ ವ್ಯತ್ಯಾಸಗಳನ್ನು ತಿಳಿದು, ಅದರಂತೆ ಬೋಧನಾ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕನಲ್ಲಿ ವೃತ್ತಿಪರ ನಡವಳಿಕೆಗೂ ಮತ್ತು ವೈಯಕ್ತಿಕ ನಡವಳಿಕೆಗೂ ವ್ಯತ್ಯಾಸವಿರಬಾರದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅದರ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟು, ಪ್ರೋತ್ಸಾಹಿಸಬೇಕು. ಪಾಠದ ಜೊತೆಗೆ, ಮುಖ್ಯವಾಗಿ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಶಿಕ್ಷಕರಿಗೆ ಇರಬೇಕೆಂದು ಇಮ್ಮಡಿ ಶ್ರೀ ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಪೀಠದಲ್ಲಿರುವ ಶಿಕ್ಷಕರಿಗೆ ಗುರುಪೀಠದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಮೋಹನ ಡಿ ಸಿ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ, ಶಾರದ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಹನುಮಂತಪ್ಪ, ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ ತಳವಾರ, ಎಸ್ ಜೆ ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದಿನೇಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು