ಕನ್ನಡಪ್ರಭ ವಾರ್ತೆ ಆಲೂರುಪಟ್ಟಣದ ಸಮೀಪದ ಹಳೆ ಆಲೂರು ಗ್ರಾಮದ ವಾಸದ ಮನೆಯಲ್ಲಿ ಸೋಮವಾರ ರಾತ್ರಿ ನಿಗೂಢ ವಸ್ತುಗಳು ಸ್ಫೋಟಗೊಂಡಿದ್ದು, ಸುದರ್ಶನ್ ಆಚಾರ್ (32), ಕಾವ್ಯ (28) ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೋಹನ್ ಆಚಾರ್ ಎಂಬುವರ ಇತ್ತೀಚೆಗೆ ನಿರ್ಮಾಣಗೊಂಡ ಹೊಸ ಮನೆಯಲ್ಲಿ ನಿಗೂಢ ವಸ್ತುಗಳು ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ವಾಸದ ಮನೆಯ ವಸ್ತುಗಳು ಕಿಟಕಿ ಬಾಗಿಲುಗಳು ಪೀಠೋಪಕರಣಗಳ ಗಾಜುಗಳು ಪುಡಿಪುಡಿ ಆಗಿವೆ. ಮನೆಗೆ ಹಾಕಿದ್ದ ಮೇಲ್ಛಾವಣಿಯ ತಗಡಿನ ಶೀಟ್‌ಗಳು ಸುಮಾರು 100-150 ಅಡಿಗಳಷ್ಟು ದೂರ ಹಾರಿ ಬಿದ್ದಿವೆ. ಕೆಲ ಶೀಟುಗಳು ರಸ್ತೆ ಬದಿಗಿದ್ದ ಸುಮಾರು 40- 50 ಅಡಿ ಎತ್ತರದ ಮರದ ಮೇಲೆ ಹೋಗಿ ನೇತುಹಾಕಿಕೊಂಡಿವೆ. ಕೆಲವೊಂದು ರಸ್ತೆ ಬದಿಯಲ್ಲಿ ಹಾರಿ ಬಿದ್ದಿವೆ. ಮನೆಯೊಳಗಿದ್ದ ಸುದರ್ಶನ್ ಆಚಾರ್‌ರ ತಂದೆ ಮೋಹನ್ ಆಚಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸ್ಫೋಟದ ದೃಶ್ಯ ನೋಡಿದ ಸ್ಥಳೀಯರಲ್ಲಿ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇನ್ನೂ ತೀವ್ರ ಸ್ವರೂಪದ ಗಾಯಗಳಾಗಿದ್ದ ದಂಪತಿಯನ್ನು ಸೋಮವಾರ ರಾತ್ರಿಯೇ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಸ್ಥಳಾಂತರ ಮಾಡಲಾಗಿದೆ.
ಕಾರಣ ನಿಗೂಢ:ಘಟನೆ ಸಂಭವಿಸಲು ಕಾರಣ ನಿಗೂಢವಾಗಿದ್ದು, ನಿಗೂಢ ಸ್ಫೋಟದ ಬಗ್ಗೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮಾಹಿತಿ ಕಲೆ ಹಾಕುತ್ತಿದ್ದು, ಘಟನೆ ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತಾ ಹಾಗೂ ಸಕಲೇಶಪುರ ವ್ಯಾಪ್ತಿಯ ಡಿವೈಸ್‌ಪಿ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಶೇಷ ತನಿಖಾ ದಳಗಳು ಬಾಂಬ್ ನಿಷ್ಕ್ರಿಯದಳ ಮುಂತಾದ ತನಿಖಾ ದಳಗಳು ಭೇಟಿ ನೀಡಿ ಅಗತ್ಯ ಸಾಕ್ಷ್ಯ ಸಂಗ್ರಹಿಸಿವೆ.
ಘಟನೆ ನಡೆದ ಸ್ಥಳವು ಒಂಟಿ ಮನೆಯಾಗಿದ್ದರಿಂದ ಭಾರಿ ದುರಂತ ತಪ್ಪಿದೆ. ಘಟನೆಯ ತೀವ್ರತೆಗೆ ಘಟನಾ ಸ್ಥಳದಿಂದ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಗೆ ಶಬ್ದ ಕೇಳಿ ಜನರು ಭಯಭೀತರಾಗಿದ್ದರು.ಜಿಲೆಟಿನ್ ಮಾದರಿಯ ಸ್ಪೋಟಕ:
ಸ್ಫೋಟದ ತೀವ್ರತೆಯನ್ನು ಗಮನಿಸಿದರೆ ಅದು ಕಲ್ಲು ಕ್ವಾರಿಗಳಲ್ಲಿ ಬಳಸುವ ಜಿಲೆಟಿನ್ ಮಾದರಿಯಂತಿದ್ದು, ಸ್ಥಳೀಯವಾಗಿ ತಯಾರಿಸುವ (ನಾಡ ಜಿಲೆಟಿನ್) ಜಿಲೆಟಿನ್ ನಂತಿದ್ದವು. ದಂಪತಿ ಮನೆಯ ಹೊರಭಾಗದಲ್ಲಿ ಇಂತಹ ಸ್ಫೋಟಕಗಳನ್ನು ತಯಾರಿಸುವಾಗ ಈ ಅವಘಡ ಸಂಭವಿಸಿದೆ. ಸ್ಫೋಟಕ ತೀವ್ರತೆಗೆ ಕಾವ್ಯ ಅವರ ಎರಡೂ ಕಾಲುಗಳು ಸೀಳಿಹೋಗಿವೆ. ಸುದರ್ಶನ್ ಆಚಾರ್ ಅವರ ಇಡೀ ದೇಹದ ಮೇಲ್ಮೈ ಸುಟ್ಟಿದೆ.