ಕನ್ನಡಪ್ರಭ ವಾರ್ತೆ ಮಂಡ್ಯ
ಸಾಧನೆ ಮತ್ತು ಸಮಾಜಸೇವೆಗೆ ಅಂಗ ವೈಕಲ್ಯಕ್ಕಿಂತ ಧೈರ್ಯ ಮತ್ತು ಆತ್ಮಸ್ಥೈರ್ಯ ಮುಖ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅಭಿಪ್ರಾಯಪಟ್ಟರು.ಇಲ್ಲಿನ ನೆಹರು ನಗರದಲ್ಲಿರುವ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ದೇಶದ ನಾಗರೀಕ ಗೌರವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ನಮ್ಮ ಸಾಧನೆಗೆ, ನಿಮ್ಮೆಲ್ಲರ ಕೀರ್ತಿಗೆ ಧೈರ್ಯ, ಛಲ, ಆತ್ಮವಿಶ್ವಾಸವೇ ಕಾರಣ. ಕೀಳರಿಮೆ, ಹಿಂಜರಿಕೆ ಇದ್ದಲ್ಲಿ ಸಾಧನೆ ಮಾಡಲಾಗುವುದಿಲ್ಲ. ಅದೆಲ್ಲವನ್ನೂ ಬದಿಗಿಟ್ಟು ಗುರಿ ಸಾಧನೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಳ್ಳಬೇಕು ಎಂದು ನುಡಿದರು.ನನ್ನಿಂದ ಹೆಚ್ಚು ಓದುವುದಕ್ಕೆ ಸಾಧ್ಯವಾಗಲಿಲ್ಲ. ನನ್ನ ಕೈಲಿ ಎಷ್ಟು ಓದಲಿಕ್ಕೆ ಸಾಧ್ಯವೋ ಅಷ್ಟನ್ನು ಓದಿದೆ. ಆದರೂ ದೇಶದ ನಾಗರಿಕ ಗೌರವ ಪ್ರಶಸ್ತಿಗೆ ಭಾಜನನಾಗಿದ್ದೇನೆ. ಈ ಪುರಸ್ಕಾರಕ್ಕೆ ಪಾತ್ರನಾಗಲು ನನ್ನ ಸಾಧನೆ ಜೊತೆಗೆ ಹಿರಿಯರ ಆಶೀರ್ವಾದ ಜನರ ಪ್ರೀತಿಯೇ ಕಾರಣ ಎಂದು ನುಡಿದರು.
ಈಗಿನ ಕಾಲದ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಿವೆ, ನಿಮ್ಮಲ್ಲಿರುವ ಪ್ರತಿಭೆ ಗುರುತಿಸಿಕೊಳ್ಳಬೇಕು. ಓದಿನೊಂದಿಗೆ ಸಾಧನೆಯ ಹಂಬಲ ನಿಮ್ಮಲ್ಲಿ ಸದಾ ತುಡಿಯುತ್ತಿರಬೇಕು. ಗುರು ಮತ್ತು ತಂದೆ-ತಾಯಿ ಅವರ ಆಶಯದಂತೆ ಗುರಿ ಇರಿಸಿಕೊಂಡು ಸಾಧಕರಾಗಿ ಹೊರಹೊಮ್ಮುವಂತೆ ಸಲಹೆ ನೀಡಿದರು.ದೇಶದ ೪ ಅತ್ಯುನ್ನತ ಗೌರವ ಪುರಸ್ಕಾರಗಳನ್ನು ಪಡೆಯುವುದಕ್ಕೆ ಪೂರಕವಾಗಿ ನಿಮ್ಮ ಸಾಧನೆ ಇರಬೇಕು. ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಗೌರವ ಪ್ರಶಸ್ತಿ ಪುರಸ್ಕಾರಗಳು ನಿಮ್ಮದಾಗಲಿ, ನಾಗರೀಕ ಪುರಸ್ಕಾರ ಲಭಿಸುವಂತೆ ಸಾಧನೆ ಮಾಡಿ, ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಹಲವು ಶ್ರೇಷ್ಠ ಹುದ್ದೆಗಳತ್ತ ಗುರಿಯಾಗಿಸಿಕೊಂಡು ಕಲಿಕೆಯಲ್ಲಿ ತೊಡಗಬೇಕು ಎಂದರು.
ಡ್ಯಾಫೋಡಿಲ್ಸ್ ಶಾಲೆಯ ಕಾರ್ಯದರ್ಶಿ ಸುಜಾತ ಕೃಷ್ಣ ಮಾತನಾಡಿ, ಮಂಡ್ಯ ಜಿಲ್ಲೆಯ ಹೆಮ್ಮೆಯ ಸುಪುತ್ರ ಪದ್ಮಶ್ರೀ ಗೌರವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರು ನಮ್ಮೆಲ್ಲರ ಸ್ಫೂರ್ತಿಯಾಗಿದ್ದಾರೆ, ರಾಷ್ಟ್ರಪತಿಯವರಿಂದ ನಾಗರೀಕ ಗೌರವ ಪುರಸ್ಕಾರಕ್ಕೆ ಭಾಜನರಾಗಿ ಕೀರ್ತಿ ತಂದಿದ್ದಾರೆ. ವಿಶೇಷಚೇತನರ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಡ್ಯಾಫೋಡಿಲ್ಸ್ ಶಾಲೆ ಟ್ರಸ್ಟಿ ಮದನ್‌ಲಾಲ್, ಮುಖ್ಯಶಿಕ್ಷಕಿ ನಯನಾ ಮತ್ತು ಶಿಕ್ಷಕಿಯರ ವೃಂದ ಹಾಜರಿದ್ದರು.