ಅಕ್ರಮ ನಿವೇಶನ ಹಂಚಿಕೆ ರದ್ದತಿಗೆ ನ್ಯಾಯಾಲಯದ ಮೊರೆ

KannadaprabhaNewsNetwork |  
Published : Sep 09, 2026, 02:15 AM IST
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ | Kannada Prabha

ಸಾರಾಂಶ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ಮತ್ತೊಂದು ಮಜಲು ತಲುಪಿದ್ದು, ಕೇವಲ ಕೋಟ್ಯಂತರ ರುಪಾಯಿ ಲೂಟಿ ಮಾಡಿರುವುದಷ್ಟೇ ಅಲ್ಲ, ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್‌ಮಾಲ್‌ ನಡೆದಿರುವುದರಿಂದ, ನಿಯಮಬಾಹಿರವಾಗಿ ಹಂಚಿಕೆ ಮಾಡಲಾದ ನಿವೇಶನಗಳನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ಮತ್ತೊಂದು ಮಜಲು ತಲುಪಿದ್ದು, ಕೇವಲ ಕೋಟ್ಯಂತರ ರುಪಾಯಿ ಲೂಟಿ ಮಾಡಿರುವುದಷ್ಟೇ ಅಲ್ಲ, ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್‌ಮಾಲ್‌ ನಡೆದಿರುವುದರಿಂದ, ನಿಯಮಬಾಹಿರವಾಗಿ ಹಂಚಿಕೆ ಮಾಡಲಾದ ನಿವೇಶನಗಳನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಸರೋಜಮ್ಮ ಬಡಾವಣೆಯ ನಿವೇಶನ ಹಂಚಿಕೆ ಹಾಗೂ ನೋಂದಣಿ ಅಕ್ರಮದ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮಬಾಹಿರವಾಗಿ ನೋಂದಣಿಯಾಗಿರುವ 63 ನಿವೇಶನಗಳ ಮಾಲೀಕತ್ವ ರದ್ದುಪಡಿಸಿ, ಅವುಗಳನ್ನು ಮರಳಿ ಪ್ರಾಧಿಕಾರದ ವಶಕ್ಕೆ ಪಡೆಯಲು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಲು ನಿರ್ಧರಿಸಲಾಗಿದೆ.

ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದ್ದು, ಅಧಿಕೃತ ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಹೊರತುಪಡಿಸಿ, ಅಡ್ಡದಾರಿಯಲ್ಲಿ ನಿವೇಶನ ಪಡೆದು ನೋಂದಣಿ ಮಾಡಿಸಿಕೊಂಡಿರುವುದನ್ನು ರದ್ಧು ಮಾಡಲು ಮುಂದಾಗಿದೆ.

ಲಾಟರಿ 87 ಮಂದಿಗೆ; 63 ಮಂದಿಗೆ ಅಡ್ಡದಾರಿ!: ಕೊಪ್ಪಳ ನಗರದ ಮೆಡಿಕಲ್ ಕಾಲೇಜು ಹಿಂಭಾಗದ ಸುಮಾರು 9 ಎಕರೆ ಪ್ರದೇಶದಲ್ಲಿ 119 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರಲ್ಲಿ ನಾಗರಿಕ ಸೌಲಭ್ಯ ಹಾಗೂ ಉದ್ಯಾನಕ್ಕಾಗಿ ಮೂರು ನಿವೇಶನಗಳನ್ನು ಕಾಯ್ದಿರಿಸಿ, ಉಳಿದ 116 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು.

ನಿವೇಶನಕ್ಕಾಗಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ನಲೀನ್ ಅತುಲ್ ಅವರು 2022ರಲ್ಲಿ ಲಾಟರಿ ಮೂಲಕ ಮೊದಲ ಹಂತದಲ್ಲಿ 87 ಮಂದಿಯನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಿದ್ದರು.

ಆದರೆ, ಲಾಟರಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಹೊರತಾಗಿ ಹಿಂದಿನ ಆಯುಕ್ತ ಯೋಗಾನಂದ ಹಾಗೂ ಹೊರಗುತ್ತಿಗೆ ನೌಕರ ರವೀಂದ್ರಕುಮಾರ ಅವರ ಮೂಲಕ 63 ಮಂದಿಗೆ ನಿಯಮಬಾಹಿರವಾಗಿ ನಿವೇಶನ ನೋಂದಣಿ ಮಾಡಿಕೊಡಲಾಗಿದೆ ಎಂಬ ಆರೋಪ ದಾಖಲೆಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಫಾರಂ-3 ವಿತರಣೆಗೆ ತಡೆ: ಅಕ್ರಮ ನೋಂದಣಿಯ ಮುಂದುವರಿದ ಪರಿಣಾಮಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸರೋಜಮ್ಮ ಬಡಾವಣೆಯ ನಿವೇಶನಗಳಿಗೆ ಭಾಗ್ಯನಗರ ಪಟ್ಟಣ ಪಂಚಾಯಿತಿಯಿಂದ ಈ ವರೆಗೆ ವಿತರಿಸಿರುವ ಫಾರಂ-3ಗಳನ್ನು ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸೂಚಿಸಲಾಗಿದೆ. ಅಲ್ಲದೆ, ಮುಂದಿನ ಆದೇಶದವರೆಗೆ ಯಾವುದೇ ನಿವೇಶನದ ವರ್ಗಾವಣೆ ಮಾಡಬಾರದು ಹಾಗೂ ಹೊಸದಾಗಿ ಫಾರಂ-3 ವಿತರಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ನೋಂದಣಿ ಪ್ರಕ್ರಿಯೆಯ ಸಮಗ್ರ ವರದಿಗೆ ಸೂಚನೆ: ಈ ವರೆಗೆ ನಡೆದಿರುವ ನಿವೇಶನ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿ, ಅದನ್ನು ಸಕ್ರಮಗೊಳಿಸಲು ಸಾಧ್ಯವೇ ಎಂಬುದೂ ಸೇರಿದಂತೆ ನಿವೇಶನ ನೋಂದಣಿಗೆ ಇರುವ ನಿಯಮಗಳು, ಅನುಸರಿಸಿರುವ ಕ್ರಮ ಹಾಗೂ ನೋಂದಣಿಯಲ್ಲಿ ಆಗಿರುವ ಲೋಪಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ನೋಂದಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.

ಅಕ್ರಮವಾಗಿ ನೋಂದಣಿಯಾಗಿರುವ ನಿವೇಶನಗಳನ್ನು ಕಾನೂನುಬದ್ಧವಾಗಿ ರದ್ದುಪಡಿಸಿ, ಪ್ರಾಧಿಕಾರದ ವಶಕ್ಕೆ ಪಡೆಯಲು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹಂಚಿಕೆಯಾದ ನಿವೇಶನ ನ್ಯಾಯಾಲಯದಿಂದಲೇ ರದ್ದಾಗಬೇಕಾಗಿದೆ. ಹೀಗಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧತೆ ಮಾಡಲಾಗಿದೆ. ಸಬ್‌ ರಿಜಿಸ್ಟ್ರಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ: ಕೊಪ್ಪಳ ಪ್ರಾಧಿಕಾರದ ಅಕ್ರಮ ನೋಂದಣಿ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ಸಬ್‌ರಿಜಿಸ್ಟ್ರಾರ್ ಪ್ರದೀಪ್‌ಕುಮಾರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಅವರು ನೋಂದಣಿ ಮಹಾನಿರೀಕ್ಷಕರಿಗೆ (ಐಜಿಆರ್) ಶಿಫಾರಸು ಮಾಡಿದ್ದಾರೆ. ಆಗ ಆಯುಕ್ತರಾಗಿದ್ದ ಯೋಗಾನಂದ ಅವರಿಗೆ ಕೈಜೋಡಿಸಿ ಅವರ ಸಹಿಯೊಂದಿಗೆ 35 ಮಂದಿಗೆ ಸರೋಜಮ್ಮ ಬಡಾವಣೆಯ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟಿರುವುದು ದಾಖಲೆಗಳ ಪರಿಶೀಲನೆಯಲ್ಲಿ ಕಂಡುಬಂದಿದೆ. ಜಿಲ್ಲಾ ನೋಂದಣಾಧಿಕಾರಿಯಿಂದ ಈ ಕುರಿತು ವರದಿ ಪಡೆದಿರುವ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಅವರು, ಸಬ್‌ ರಿಜಿಸ್ಟ್ರಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನೋಂದಣಿ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ.

ಸಿದ್ಧತೆ: ಕೊಪ್ಪಳ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. ಹಾಗೆ, ಈಗಾಗಲೇ ಬಯಲಾಗಿರುವ ಅಕ್ರಮದಿಂದ ನಿಯಮಬಾಹಿರವಾಗಿ ಹಂಚಿಕೆಯಾದ ನಿವೇಶನಗಳನ್ನು ರದ್ದು ಮಾಡಲು, ಕಾನೂನಿನಲ್ಲಿ ನಮಗೆ ಅವಕಾಶ ಇಲ್ಲದೆ ಇರುವುದರಿಂದ, ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ತಂಡದಿಂದ ವಿದ್ಯಾರ್ಥಿಗಳ ತಪಾಸಣೆ
ಹಲವು ಸವಾಲುಗಳನ್ನೆದುರಿಸಿ ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಳ್ಳಬೇಕಾಗಿದೆ