ಕೊಟ್ಟೂರು: ನ್ಯಾಯಾಲಯಕ್ಕೆ ಅವಶ್ಯವಾಗಿ ಬೇಕಿರುವ ಮಾನದಂಡಗಳ ಅನುಸಾರ ಕಟ್ಟಡವನ್ನು ಎಷ್ಟು ಬೇಗ ತಯಾರು ಮಾಡಿ ಕೊಡುತ್ತೀರೋ ಅದೇ ವೇಗದಲ್ಲಿ ಕೊಟ್ಟೂರಿನಲ್ಲಿ ಜೆಎಂಎಫ್ಸಿ ಮತ್ತು ಸಿಜೆ ನ್ಯಾಯಾಲಯವನ್ನು ಆರಂಭಿಸಲು ಉಚ್ಚ ನ್ಯಾಯಾಲಯಕ್ಕೆ ಶಿಫಾರಸು ವರದಿ ಕಳುಹಿಸಲಾಗುವುದು ಎಂದು ಹೊಸಪೇಟೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಸಂಜೆ ನ್ಯಾಯಾಲಯ ಆರಂಭಿಸಲು ಸಿದ್ದವಿರುವ ಪಟ್ಟಣದಲ್ಲಿನ ಹಳೆ ಪಟ್ಟಣ ಪಂಚಾಯಿತಿ ಕಟ್ಟಡವನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಕಟ್ಟಡ ಬಾಲ ಭವನಕ್ಕೆಂದು ನಿರ್ಮಿಸಿದೆ. ಇದನ್ನು ನ್ಯಾಯಾಲಕ್ಕೆ ಬೇಕಾಗುವ ರೀತಿಯಲ್ಲಿ ಮಾರ್ಪಡಿಸಿ ಕಟ್ಟಡವನ್ನು ಸಿದ್ಧಗೊಳಿಸಿದರೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ ಎಂದರು.ಜಿಲ್ಲಾ ನ್ಯಾಯಾಧೀಶರು ಒಂದು ತಾಸಿನವರೆಗೆ ಕಟ್ಟಡವನ್ನು ಸಮಗ್ರವಾಗಿ ಪರಿಶೀಲಿಸಿದರು. ನ್ಯಾಯಾಲಯ ಸ್ಥಾಪಿಸುವ ಸಂಬಂಧ ಹೈಕೋರ್ಟ್ ನ ಆಡಳಿತ ವಿಭಾಗದ ನ್ಯಾಯಾಧೀಶರಿಗೆ ಸೂಕ್ತ ವರದಿ ಸಲ್ಲಿಸಲಾಗುವುದು ಎಂದರು.
ಕೊಟ್ಟೂರು ವಕೀಲರ ಸಂಘದ ಅಧ್ಯಕ್ಷ ಎಂ.ಗುರುಸಿದ್ದನಗೌಡ ನ್ಯಾಯಾಧೀಶರಿಗೆ ಸ್ಥಳೀಯ ಶಾಸಕ ಕೆ.ನೇಮರಾಜ ನಾಯ್ಕ್ ಕಟ್ಟಡ ಮಾರ್ಪಡಿಸಿ ನವೀಕರಿಸಲು ಬೇಕಾದ ಅನುದಾನವನ್ನು ಡಿಎಂಎಫ್ ನಿಂದ ತಡವಿಲ್ಲದೇ ಅನುದಾನ ನೀಡುವ ಭರವಸೆ ನೀಡಿದ್ದಾರೆಂದು ತಿಳಿಸಿದರು.ಕೂಡ್ಲಿಗಿ ನ್ಯಾಯಾಲಯದ ನ್ಯಾಯಧೀಶ ಯೋಗೇಶ್ವರ ಜೆ ಜಿಪಂ ಇಂಜಿನೀಯರ್ ರುದ್ರೇಶ್ ಜಿಲ್ಲಾ ನ್ಯಾಯಾಧೀಶರೊಂದಿಗೆ ಇದ್ದರು.
ಪಪಂ ಮುಖ್ಯಾಧಿಕಾರಿ ಎ.ನಸುರುಲ್ಲಾ, ಟಿಪಿ ಇಒ, ಡಾ.ಆನಂದಕುಮಾರ್ ಪಿಎಸ್‌ಐ ದುರ್ಗಪ್ಪ, ಪಿಎಸ್‌ಐ ಗೀತಾಂಜಲಿ ಸಿಂಧೆ, ಕೊಟ್ಟೂರು ನ್ಯಾಯಾಲಯ ಸ್ಥಾಪನೆ ಹೋರಾಟ ಸಮಿತಿ ಕಾರ್ಯದರ್ಶಿ ಭಾವಿಕಟ್ಟಿ ಶಿವಾನಂದ, ಉಪಾಧ್ಯಕ್ಷ ಪಿಸೆ ಪ್ರಭುದೇವ, ಹಿರೀಯ ವಕೀಲ ಹೊ.ಮ. ಪಂಡಿತಾರಾಧ್ಯ ವಕೀಲರಾದ ಟಿ.ಎಂ. ಸೋಮಯ್ಯ, ಡಿ.ಲಿಂಗರಾಜ್, ಬಿ.ಹನುಮಂತಪ್ಪ ಮದ್ದಾನಪ್ಪ, ಸಿದ್ದವೀರಪ್ಪ ರಮೇಶ್, ಸೋಮಶೇಖರ್, ಪ್ರಕಾಶ್ ಇದ್ದರು.