ಹೂವಿನಹಡಗಲಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಜಯನಗರ ಜಿಲ್ಲೆಯಲ್ಲೇ ಹೂವಿನಹಡಗಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಈ ಹಿಂದೆ ಗಣತಿದಾರರಿಗೆ ಆಗುತ್ತಿರುವ ತೊಂದರೆಗಳನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಕೆಲ ಗ್ರಾಮಗಳು ಸಮೀಕ್ಷೆ ನಕ್ಷೆ (ಜಿಯೊ ಟ್ಯಾಗ್)ಯಿಂದ ದೂರ ಉಳಿದಿವೆ. ಗಡಿ ಭಾಗದಲ್ಲಿರುವ ಬೇರೆ ಜಿಲ್ಲೆಗಳ ವ್ಯಾಪ್ತಿಗೆ ಸೇರ್ಪಡೆಯಾದ ಮಕರಬ್ಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕರಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ, ಕೋಟಿಹಾಳ್, ಚಿಕ್ಕಬನ್ನಿಮಟ್ಟಿ, ನವಲಿ ಗ್ರಾಪಂ ವ್ಯಾಪ್ತಿಯ 63 ತಿಮ್ಲಾಪುರ ಗ್ರಾಮಗಳ ಸೇರ್ಪಡೆ ಮಾಡಲು, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳಿಗೆ, ಮಾಹಿತಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಸೇರ್ಪಡೆ ಮಾಡಿ ಸಮೀಕ್ಷೆ ಮಾಡಲಾಗುವುದು ಎಂದರು.
ತಾಲೂಕಿನ ತುಂಗಭದ್ರ ನದಿ ತೀರದಲ್ಲಿ ಈಗಾಗಲೇ ಮರಳಿ ಸ್ಟಾಕ್ ಯಾರ್ಡ್‌ಗಳ ಟೆಂಡರ್ ಕರೆಯುವ, ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಎಲ್ಲರಿಗೂ ಮರಳು ಸಿಗಲಿದೆ ಎಂದ ಅವರು, ಕೊಟ್ಟೂರಿನ ಅಲಬೂರು ಬಳಿ ಇರುವ ಮರಳಿನ ಸ್ಟಾಕ್‌ಯಾರ್ಡ್‌ನಿಂದ ಸಾಮರ್ಥ್ಯ ಮೀರಿ ಲಾರಿಗಳು ಮರಳು ತುಂಬಿಕೊಂಡು ಬರುತ್ತಿವೆ. ನಿಯಮಗಳನ್ನು ಉಲ್ಲಂಘನೆ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಒಂದೇ ಪಾಸ್ ಪಡೆದು ಹತ್ತಾರು ಬಾರಿ ಮರಳು ತುಂಬಿಕೊಂಡು ಲೂಟಿ ಮಾಡುತ್ತಿರುವುದು ಹಾಗೂ ಇದರಿಂದ ಸರ್ಕಾರಕ್ಕೆ ಸಾಕಷ್ಟು ರಾಜಸ್ವ ಧನ ನಷ್ಟವಾಗುತ್ತಿದೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ, ಈಗಾಗಲೇ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಮಾಡಲಾಗಿದೆ. ಮರಳು ಲೂಟಿ ಕುರಿತು ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.ಇದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ 20ಕ್ಕೂ ಹೆಚ್ಚು ನಿವೃತ್ತ ನೌಕರರು ಸೇರಿದ್ದರು. ಅವರ ಬಳಿ ಹೋಗಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಿದ ಡಿಸಿ ಕವಿತಾ ಎಸ್.ಮನ್ನಿಕೇರಿ, ಪ್ರವಾಸಿ ಮಂದಿರದ ಕ್ಯಾಂಟಿನ್‌ನಲ್ಲಿದ್ದ ಗಾಯಕಿ ಕಾವ್ಯ ಪಾರಿ ಎಂಬ ಅಂಧ ಯುವತಿಯಿಂದ ಮಧುರವಾದ ಹಾಡು ಅಲಿಸಿ ತಲೆದೂಗುತ್ತಾ, ಉತ್ತಮ ಹಾಡುಗಾರ್ತಿಯಾಗು ಎಂದು ಹಾರೈಸಿದರು.
ಪಟ್ಟಣದ ಸೋಗಿ ರಸ್ತೆ, ಹರಿಜನ ಕಾಲೋನಿ ಸೇರಿದಂತೆ 50ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಡಿಸಿ, ಮನೆಯಲ್ಲಿದ್ದ ಮಹಿಳೆಯರಿಗೆ ಸಮೀಕ್ಷೆ ಕುರಿತು ಮಾಹಿತಿ ನೀಡುತ್ತಾ ಜಾಗೃತಿ ಮೂಡಿಸುವ ಕೆಲಸ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಸಂತೋಷಕುಮಾರ್, ಬಿಸಿಎಂ ವಿಸ್ತರಣಾ ಅಧಿಕಾರಿ ರಮೇಶ, ಸಿಡಿಪಿಒ ರಾಮನಗೌಡ, ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಬಿಇಒ ಮಹೇಶ ಪೂಜಾರ್ ಸೇರಿದಂತೆ ಕಂದಾಯ, ಪುರಸಭೆ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.