ಭೀಮಣ್ಣ ಗಜಾಪುರ
ಕನ್ನಡಪ್ರಭ ದಿನಪತ್ರಿಕೆಯು ಕಳೆದ 15 ದಿನಗಳಿಂದ ವಿಂಡ್ ಫ್ಯಾನ್ ಅವಾಂತರಗಳ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಇದೇ ಅ.12ರೊಳಗೆ ಅಧಿಕಾರಿಗಳ ಸಭೆ ಕರೆಯಲು ಸೂಚನೆ ನೀಡಿದ್ದಾರೆ.
ಜೀವ ವೈವಿಧ್ಯಕ್ಕೆ ಕುತ್ತು:ಏಷ್ಯಾದ 2ನೇ ಕರಡಿಧಾಮ ಗುಡೇಕೋಟೆಯ ಸುತ್ತ ಕರ್ಕಶ ಶಬ್ದದ ಅಲೆ ಎಬ್ಬಿಸುವ ವಿಂಡ್ ಫ್ಯಾನ್‌ಗಳು ತಲೆ ಎತ್ತಿದ್ದರೂ ಅರಣ್ಯ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ. ವನ್ಯಜೀವಿ ತಜ್ಞರು, ರೈತ, ಪ್ರಗತಿಪರ ಸಂಘಟನೆಗಳು ಈ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ.
ವಿಂಡ್ ಫ್ಯಾನ್ ಅಬ್ಬರ ನೋಡಿದರೆ ಇನ್ನು ಹತ್ತಾರು ವರ್ಷ ಹೋದರೆ ರೈತರಿಗೆ ಜೋಳ, ರಾಗಿ, ಸಜ್ಜೆ, ಶೇಂಗಾ ಬೆಳೆಯಲು ಭೂಮಿ ಸಿಗುವುದಿಲ್ಲ. ಇದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು, ಎಲ್ಲದಕ್ಕಿಂತ ಮುಖ್ಯವಾಗಿ ರೈತರು ಅರ್ಥಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ಕಮ್ಯುನಿಷ್ಠ್ ಪಕ್ಷದ ಮುಖಂಡ ಬಯಲು ತುಂಬರಗುದ್ದಿ ಚಂದ್ರು.
ವಿಂಡ್ ಫ್ಯಾನ್ ಅವಾಂತರದ ಬಗ್ಗೆ ಕನ್ನಡಪ್ರಭದ ಸರಣಿ ವರದಿಗಳನ್ನು ಗಮನಿಸಿದ್ದೇನೆ. ಅಕ್ಟೋಬರ್ 12ರೊಳಗೆ ಕೂಡ್ಲಿಗಿಯಲ್ಲಿ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ಎಸ್ಪಿ ಸೇರಿದಂತೆ ವಿಂಡ್ ಫ್ಯಾನ್‌ಗೆ ಸಂಬಂಧಿಸಿದ ಕಂಪನಿಗಳ ಅಧಿಕಾರಿಗಳನ್ನು ಸಭೆಗೆ ಕರೆದು ವಿಂಡ್ ಫ್ಯಾನ್‌ಗಳಿಂದ ಜನತೆಗೆ, ವನ್ಯಜೀವಿಗಳಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳುವೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.