;Resize=(412,232))
ಬೆಂಗಳೂರು : ಮನೆಗೆಲಸದ ಮಹಿಳೆ ಮೇಲಿನ ಲೈಂಗಿ* ಕಿರುಕುಳ ಆರೋಪ ಪ್ರಕರಣದಲ್ಲಿ ಒಂದನೇ ಆರೋಪಿ ಮಾಜಿ ಸಚಿವ, ಹಾಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಐಪಿಸಿ ಸೆಕ್ಷನ್ 354 ಎ(ಲೈಂಗಿ* ಕಿರುಕುಳ) ಅಡಿಯ ಆರೋಪವನ್ನು ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ(42ನೇ ಎಸಿಜೆಎಂ) ನಿರಾಕರಿಸಿದೆ. ಈ ಮೂಲಕ ಅವರಿಗೆ ಪ್ರಕರಣದಲ್ಲಿ ಕ್ಲೀನ್‌ಚಿಟ್ ಸಿಕ್ಕಂತಾಗಿದೆ.
ಈ ಪ್ರಕರಣ ಕುರಿತು ಸೋಮವಾರ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು, ವಿಳಂಬವಾಗಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಎ ಅಡಿ ಮಾಡಲಾದ ಆರೋಪ ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ.
ಈ ಪ್ರಕರಣ ಸಂಬಂಧ ಈ ಹಿಂದೆ ಆರೋಪಿ ಎಚ್.ಡಿ.ರೇವಣ್ಣ ವಿರುದ್ಧ ಮಾಡಲಾಗಿದ್ದ ಐಪಿಸಿ ಸೆಕ್ಷನ್ 354(ಲೈಂಗಿ* ದೌರ್ಜನ್ಯ) ಅಡಿ ಆರೋಪವನ್ನು ಹೈಕೋರ್ಟ್ ಕೈಬಿಟ್ಟಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐಪಿಸಿ ಸೆಕ್ಷನ್ 354 ಎ ಅಡಿ ಮಾಡಲಾದ ಆರೋಪ ಕೈಬಿಟ್ಟಿದೆ. ಸಿಐಡಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಎಚ್.ಡಿ.ರೇವಣ್ಣ ವಿರುದ್ಧ ಸಲ್ಲಿಸಿದ್ದ ದೋಷಾರೋಪದಿಂದ ಬಿಡುಗಡೆಗೊಂಡಿರುವುದರಿಂದ ಜೆಡಿಎಸ್ ನಾಯಕನಿಗೆ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ 2ನೇ ಆರೋಪಿ. ಇವರ ವಿರುದ್ಧ ಅತ್ಯಾ*ರ, ಲೈಂಗಿ* ದೌರ್ಜನ್ಯ, ಲೈಂಗಿ* ಕಿರುಕುಳ ಸೇರಿ ಹಲವು ಆರೋಪಗಳಿವೆ. ಪ್ರಜ್ವಲ್ ವಿರುದ್ಧದ ಆರೋಪಗಳ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ.
ದೂರುದಾರೆ ಸಂತ್ರಸ್ತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣರ ಶಿಫಾರಸ್ಸಿನ ಮೇರೆಗೆ ಹೊಳೆನರಸೀಪುರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 2019ರಿಂದ 2022ರ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹೊಳೆನರಸೀಪುರದ ಎಚ್.ಡಿ.ರೇವಣ್ಣ ಅವರ ಮನೆಗೆಲಸಕ್ಕೂ ಈ ಸಂತ್ರಸ್ತೆಯನ್ನು ಬಳಸಿಕೊಳ್ಳುತ್ತಿದ್ದರು.
2020ನೇ ಸಾಲಿನಲ್ಲಿ ಪತ್ನಿ ಭವಾನಿ ಅವರು ಮನೆಯಲ್ಲಿಲ್ಲದ ಸಮಯದಲ್ಲಿ ಮನೆಗೆಲಸ ಮಾಡುತ್ತಿದ್ದ ಸಂತ್ರಸ್ತೆಗೆ ಹಣ್ಣು ಕೊಡುವ ನೆಪದಲ್ಲಿ ಎಚ್.ಡಿ.ರೇವಣ್ಣ ಅವರು ಸ್ಟೋರ್ ರೂಮ್‌ಗೆ ಕರೆಸಿಕೊಂಡು ಬಳಿಕ ಆಕೆಯನ್ನು ಹತ್ತಿರಕ್ಕೆ ಎಳೆದುಕೊಂಡು ಮೈ-ಕೈ ಮುಟ್ಟಿ ಲೈಂಗಿ* ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಂತ್ರಸ್ತೆ 2024ರ ಏಪ್ರಿಲ್‌ನಲ್ಲಿ ರೇವಣ್ಣ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕನ್ಷ್ 354 ಮತ್ತು 354 ಎ ಅಡಿ ಎಫ್‌ಐಆರ್ ದಾಖಲಿಸಿದ್ದರು.
ಬಳಿಕ ಪ್ರಕರಣ ಸಿಐಡಿ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ಬಳಿಕ ಎಸ್ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಸಂತ್ರಸ್ತೆ ಹೇಳಿಕೆ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹ ತನ್ನ ಮೇಲೆ ಅತ್ಯಾ*ರ ಹಾಗೂ ಲೈಂಗಿ* ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪಿಸಿದ್ದರು. ಬಳಿಕ ಈ ಪ್ರಕರಣಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ ಮಾಡಲಾಯಿತು. ಬಳಿಕ ಎಸ್ಐಟಿ ಅಧಿಕಾರಿಗಳು ಈ ಇಬ್ಬರು ಆರೋಪಿಗಳ ಕುರಿತು ತನಿಖೆ ನಡೆಸಿ ಸಂತ್ರಸ್ತೆ ಹೇಳಿಕೆ, 150ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ, ಕೆಲ ಸಾಕ್ಷ್ಯಾಧಾರಗಳು ಒಳಗೊಂಡಂತೆ ಸುಮಾರು 2,144 ಪುಟಗಳ ದೋಷಾರೋಪಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮನೆಗೆಲಸದ ಮಹಿಳೆಗೆ ಲೈಂಗಿ* ಕಿರುಕುಳ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು 2024ರ ಮೇ 4ರ ಸಂಜೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರ ನಿವಾಸದಲ್ಲಿ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮೇ 13ರಂದು ಎಚ್.ಡಿ.ರೇವಣ್ಣ ಷರತ್ತುಬದ್ಧ ಜಾಮೀನು ಪಡೆದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.
ವಿಚಾರಣೆ ಹಂತದಲ್ಲಿ ಮತ್ತೊಂದು ಪ್ರಕರಣ
ಕೆ.ಆರ್.ನಗರದ ಅತ್ಯಾ*ರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಕೂಡ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದೀಗ ಒಂದು ಪ್ರಕರಣದಲ್ಲಿ ನಿರಾಳರಾದ ರೇವಣ್ಣ ಅವರಿಗೆ ಈ ಅತ್ಯಾ*ರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಸಂಕಷ್ಟ ಮುಂದುವರೆದಿದೆ.