ಹಗರಿಬೊಮ್ಮನಹಳ್ಳಿ: ಮಾನವ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಿಸರ, ಪಕ್ಷಿ ಸಂಕುಲದ ಉಳಿವಿಗೆ ಪಣತೊಟ್ಟು ನಿಲ್ಲಬೇಕು ಎಂದು ಬಳ್ಳಾರಿಯ ಎಂಎಲ್‌ಸಿ ವೈ.ಸತೀಶ್ ಹೇಳಿದರು.
ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸದೆ, ಭವಿಷ್ಯದ ಪೀಳಿಗೆಗೆ ಉಳಿವಿನ ಮಾರ್ಗದರ್ಶನ ನೀಡೋಣ. ಆರೋಗ್ಯಕರ ಸಮಾಜ ನಿರ್ಮಾಣ ಸುಸಜ್ಜಿತ ದೇಶ ನಿರ್ಮಾಣದ ಅಡಿಪಾಯವಾಗಿದೆ. ಇತ್ತೀಚೆಗೆ ವಿಷಕಾರಿ ರಸಾಯನಿಕಗಳ ವ್ಯಾಪಕ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದ್ದು ಪ್ರತಿಯೊಬ್ಬರು ಸಾವಯವದತ್ತ ಮುಖಮಾಡುವ ಅಗತ್ಯತೆ ಇದೆ. ಜೀವ ವೈವಿಧ್ಯತೆಗಳು ರೈತ ಮಿತ್ರರು ಅವುಗಳ ಉಳಿವಿನಿಂದ ವ್ಯವಸಾಯ ಲಾಭದಾಯಕವಾಗಲಿದೆ. ಮಕ್ಕಳು ಓದಿನ ಜೊತೆಗೆ ಮನೆಯಲ್ಲಿ ತಂದೆತಾಯಿ ಹೇಳುವ ಮನೆಗೆಲಸಗಳನ್ನು ಮಾಡುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಏಳಿಗೆಗೆ ಸಮಯ ಪರಿಪಾಲನೆ ಬಹುಮುಖ್ಯವಾದುದು, ಶಿಕ್ಷಕರ ಬೋಧನೆಯನ್ನು ಉತ್ತಮವಾಗಿ ಅರ್ಥೈಸಿಕೊಂಡು ನಿರಂತರ ಅಭ್ಯಾಸದೊಂದಿಗೆ ಜೀವನದಲ್ಲಿ ಯಶಸ್ವಿಯಾಗಿರಿ ಎಂದರು.ರಾಷ್ಟ್ರೋತ್ಥಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆ ಮಾತನಾಡಿ, ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು. ವಿದ್ಯಾ ಸಂಸ್ಥೆ ನಿರಂತರವಾಗಿ ಉತ್ತಮ ಶಿಕ್ಷಣ, ಸಾಹಿತ್ಯ, ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದು ಸೇರಿ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸುವ ಜವಬ್ದಾರಿಯನ್ನು ಹೊತ್ತು ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಆಯೋಜಿಸಲ್ಪಟ್ಟ ಶಾರೀರಿಕ ಪ್ರದರ್ಶನಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಗಮನಸೆಳೆದವು. ಘೋಷ್, ದಂಡಪ್ರಯೋಗ, ಲೇಜಿಮ್, ಹೂಪ್ಸ್, ನಿಯುದ್ಧ, ಪಿರಮಿಡ್ ಪ್ರದರ್ಶನಗಳು, ಸಾಂಪ್ರದಾಯಿಕ ಪೂಜಾಕುಣಿತ ವಿಶೇಷ ಆಕರ್ಷಣೆಯಾಗಿದ್ದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದವು. ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿ ಬಸವನಗೌಡ, ಪರಿಷತ್ತಿನ ಜಯಣ್ಣ, ಶಾಲೆಯ ಪ್ರಧಾನಾಚಾರ್ಯರಾದ ರಂಗನಾಥ ಇತರರಿದ್ದರು. ಶಾಲೆಯ ಶಿಕ್ಷಕ ವಿನಾಯಕ ಭಟ್ಟ, ಶಾಲಾ ವಿದ್ಯಾರ್ಥಿಗಳು ನಿರ್ವಹಿಸಿದರು.