ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸೋಮವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ಆತ್ಮನಿರ್ಭರತೆ ಇದು ಜಾಗತೀಕರಣ ವಿರೋಧವಲ್ಲ. ಇದು ಕಾರ್ಯತಂತ್ರದ ಸ್ವಾಯತ್ತತೆ, ಗೌರವ. ಆರ್ಥಿಕ ಶಕ್ತಿ ಎಂದರೆ ಪ್ರತಿರೋಧಕ ಸಾಮರ್ಥ್ಯ ಹೊರಗಿನ ಅಘಾತಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ, ದೇಶೀಯ ಜೀವನೋಪಾಯಗಳನ್ನು ಬಲಪಡಿಸುವುದು, ಮತ್ತು ಬೆಳವಣಿಗೆಯನ್ನು ನಗರ ಕೇಂದ್ರಗಳಷ್ಟೇ ಅಲ್ಲ, ಗ್ರಾಮೀಣ ಭಾಗಗಳಿಗೂ ತಲುಪಿಸುವುದಾಗಿದೆ ಎಂದರು.
ಸ್ವದೇಶಿ ಜಾಗರಣೆ, ಯೂತ್ ಫಾರ್ ನೇಷನ್ ಜಾಥಾ ರಾಜ್ಯದಲ್ಲಿ 2 ಹಂತದಲ್ಲಿ ಸಂಚರಿಸಲಿದೆ. ಈಗಾಗಲೇ ಡಿ.13ಕ್ಕೆ ಬೆಂಗಳೂರಿನಿಂದ 2 ತಂಡಗಳಲ್ಲಿ ಜಾಥಾ ರಾಜಾದ್ಯಂತ ಸಂಚರಿಸುತ್ತಿದೆ. ಬೆಂಗಳೂರಿನಿಂದ ಹೊರಟ ಒಂದು ತಂಡವು ಈಗಾಗಲೇ 920 ಕಿಲೋಮೀಟರ್‌ಗಳನ್ನು ಕ್ರಮಿಸಿ ಕರಾವಳಿ ಜಿಲ್ಲೆಯನ್ನು ಪ್ರವೇಶಿಸಿದೆ. ಮತ್ತೊಂದು ತಂಡವು 25ರಿಂದ ಹೊರಟು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮೂಲಕ ಹೊನ್ನಾಳಿ ಮಾರ್ಗವಾಗಿ ಇದೀಗ ದಾವಣಗೆರೆ ಜಿಲ್ಲೆಗೆ ಆಗಮಿಸಿದ್ದು, ಒಟ್ಟು 460 ಕಿಮಿ ಕ್ರಮಿಸಿದೆ. ದಾವಣಗೆರೆಯ ಜಾಥಾವು ದಾವಣಗೆರೆಯಿಂದ ಹಾವೇರಿ ಜಿಲ್ಲೆಗೆ ಸಾಗಿ ನಂತರ ಇತರೆ ಜಿಲ್ಲೆಗಳಿಗೆ ಸಾಗಲಿದೆ. ಈ ಜಾಥಾದಲ್ಲಿ ಒಟ್ಟು 37 ಜನರ ತಂಡವಿದ್ದು, 17 ದಿನ ಜಾಥಾ ಸಾಗಲಿದೆ. ಸೈಕಲ್ ಮೂಲಕ ಸಾಗುವ ಜಾಥಾವು ಪ್ರತಿ ದಿನ 105 ರಿಂದ 110 ಕಿಮಿ ಸಾಗಲಿದೆ. ಒಟ್ಟು 3600 ಕಿಮೀ ಕ್ರಮಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.ಸ್ವದೇಶಿ ಅಭಿಯಾನ ಹಿಂದಕ್ಕೆ ಹೋಗುವ ಹೆಜ್ಜೆಯಲ್ಲ ಇದು ಮುಂದಕ್ಕೆ ಸಾಗುವ ಹೆಜ್ಜೆ, ದೇಶದ ಎಲ್ಲ ನಾಗರಿಕರು, ನಗರ ಅಥವಾ ಗ್ರಾಮದಲ್ಲಿ ಕೆಲಸದಲ್ಲಿ ಇರುವವರಿಗೆ ಗೌರವ, ಆತ್ಮನಿರ್ಭರತೆ, ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡುವ ಭಾರತವನ್ನು ನಿರ್ಮಿಸುವ ದಾರಿಯೇ ಯೂತ್ ಫಾರ್ ನೇಷನ್ ಮತ್ತು ಸ್ವದೇಶಿ ಜಾಗರಣದ ಉದ್ದೇಶವಾಗಿದೆ ಎಂದು ತಿಳಿಸಿದರು.
ಇತಿಹಾಸದಲ್ಲಿ ಸ್ವದೇಶಿಯ ಪರಿಕಲ್ಪನೆ ಕೇವಲ ಆರ್ಥಿಕವಾಗಿರಲಿಲ್ಲ, ಅದು ದೇಶಭಕ್ತಿಯ ಆಧಾರವೂ ಆಗಿತ್ತು ವಿದೇಶಿ ಶೋಷಣೆಗೆ ಪ್ರತಿರೋಧ, ಸ್ಥಳೀಯ ಉದ್ಯಮಗಳ ಪುನರುಜ್ಜಿವನ ಮತ್ತು ರಾಷ್ಟ್ರೀಯ ಗೌರವದ ಪುನರ್ ಸ್ಥಾಪನೆ. ಇಂದಿನ ಜಾಗತಿಕ ವ್ಯಾಪಾರ ಸಂಘರ್ಷಗಳು ಮತ್ತು ಬದಲಾಗುತ್ತಿರುವ ಭೂರಾಜಕೀಯ ಒಕ್ಕೂಟಗಳು, ಅಸ್ಥಿರ ಸುಂಕಗಳು, ವ್ಯಾಪಾರ ನಿರ್ಬಂಧಗಳು, ಸರಬರಾಜು ಸರಪಳಿಯ ವ್ಯತ್ಯಯಗಳು, ಇವುಗಳ ನಡುವೆ ವಿದೇಶಿ ಆಮದುಗಳ ಮೇಲೆ ಅಧಿಕ ಅವಲಂಬನೆ ಆರ್ಥಿಕ ಭದ್ರತೆಯನ್ನು ಅಪಾಯದಲ್ಲಿಡುತ್ತದೆ ಎಂದರು.