- ತರೀಕೆರೆ ಅರುಣೋದಯ ಶಾಲೆಯಲ್ಲಿ ಸಿರಿಧಾನ್ಯ ದಿವಸ ಆಚರಣೆ
ಆರೋಗ್ಯ ಸುಧಾರಣೆಗಾಗಿ ಈಗ ಮತ್ತೆ ಸಿರಿಧಾನ್ಯಗಳ ಮೊರೆ ಹೋಗಬೇಕಾದ ಅತ್ಯವಶ್ಯಕತೆಯಿದೆ ಎಂದು ಅರುಣೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಜಿ.ಎಚ್.ಶ್ರೀ ಹರ್ಷ ಹೇಳಿದ್ದಾರೆ.ಅರುಣೋದಯ ವಿದ್ಯಾ ಸಂಸ್ಥೆಯಿಂದ ರಾಷ್ಟ್ರೀಯ ರೈತ ದಿವಸ ಪ್ರಯುಕ್ತ ಶಾಲೆಯಲ್ಲಿ ನಡೆದ ಸಿರಿಧಾನ್ಯ ದಿವಸ ಆಚರಣೆ ಯಲ್ಲಿ ಮಾತನಾಡಿದರು. ಹಸಿರು ಕ್ರಾಂತಿ ಹಾಗೂ ನೀರಾವರಿ ವ್ಯವಸ್ಥೆಗಳಲ್ಲಿ ಸುಧಾರಣೆ ಪರಿಣಾಮ ನಮ್ಮ ದೇಶದಲ್ಲಿ ಭತ್ತ ಹಾಗು ಗೋದಿ ಉತ್ಪಾದನೆ ಹೆಚ್ಚಾಗಿದ್ದು ನಾವೆಲ್ಲರೂ ನಮ್ಮ ಪೂರ್ವಜರು ಪ್ರತಿನಿತ್ಯ ಬಳಸುತ್ತಿದ್ದ ಸಿರಿಧಾನ್ಯಗಳ ಬಳಕೆ ಕಡಿಮೆ ಮಾಡಿದ್ದೇವೆ. ನಮ್ಮೆಲ್ಲರ ದಿನನಿತ್ಯದ ಆಹಾರ ಕ್ರಮದಲ್ಲಿ ಹೊಟ್ಟು ತೆಗೆದ ಪಾಲಿಶ್ ಅಕ್ಕಿ ಹಾಗೂ ಮೈದ ಹಿಟ್ಟಿನ ಬಳಕೆ ಅತೀ ಹೆಚ್ಚಾಗಿರುವ ಪರಿಣಾಮ ಇಂದು ಸಣ್ಣ ವಯಸ್ಸಿನಲ್ಲಿಯೇ ಸ್ಥೂಲಕಾಯ, ಬೊಜ್ಜು ಸಂಬಂಧಿತ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬು ರೋಗ, ಮಾನಸಿಕ ಸಮಸ್ಯೆಗಳು ಹಾಗೂ ನಾನಾ ರೀತಿ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಕು.ಖುಷಿ ಟಿ.ಎಂ. ನಮ್ಮಲ್ಲಿ ಸ್ಥಳೀಯವಾಗಿ ದೊರಕುವ ಸಿರಿಧಾನ್ಯಗಳಾದ ನವಣೆ, ಸಜ್ಜೆ, ಹಾರಕ, ಬರಗು, ಜೋಳ, ಊದಲು ಹಾಗೂ ರಾಗಿಯನ್ನು ಮಕ್ಕಳಿಗೆ ಪ್ರದರ್ಶಿಸಿ ಅವುಗಳ ಬಗೆಗಿನ ವಿವರ ನೀಡಿದರು. ಕು.ಪ್ರಾರ್ಥನ ಮತ್ತು ಕು.ಯಶಸ್ವಿ ಮಾತನಾಡಿ ಅನ್ನ ಹಾಗೂ ಸಿರಿಧಾನ್ಯಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಮತ್ತು ಸಿರಿಧಾನ್ಯಗಳಲ್ಲಿರುವ ಹೆಚ್ಚಿನ ಪ್ರೋಟೀನ್ ಅಂಶ, ನಾರಿನ ಅಂಶ ಹಾಗೂ ಪೋಷಕಾಂಶಗಳ ಮಾಹಿತಿ ನೀಡಿದರು. ಮಾ.ಇಕ್ಷಿತ್ ಟಿ.ಎಮ್. ನಾರುಯುಕ್ತ ಆಹಾರ ಪದಾರ್ಥಗಳ ಬಳಕೆಯಿಂದ ನಮ್ಮ ದೊಡ್ಡ ಕರುಳಿನ ಆರೋಗ್ಯ ಸುಧಾರಣೆ ಬಗ್ಗ ಮಾ.ಶ್ರೀಶಾ ಆರ್. ಹಾಗೂ ರೋಗನಿರೋಧಕ ಶಕ್ತಿ, ಮಾನಸಿಕ ಆರೋಗ್ಯ ಮತ್ತು ಜೀರ್ಣಕ್ರಿಯೆಯಲ್ಲಿ ಕರುಳಿನ ಸೂಕ್ಷ್ಮಜೀವಿಗಳ ಪಾತ್ರದ ಬಗ್ಗೆ ಮಾಹಿತಿ ಕೊಟ್ಟರು. ಕು.ಸಂಜೀವಿನಿ ನಮ್ಮ ದೇಹದ ಸ್ವಾಸ್ತ್ಯಕ್ಕಾಗಿ ಅವಶ್ಯಕವಿರುವ ಬಿ ಅನ್ನಾಂಗ, ಕೆ ಅನ್ನಾಂಗ ಹಾಗೂ ಇತರೆ ಪೋಷಕಾಂಶ ಗಳಾದ ಪೋಸ್ಟ್ ಬಯೋಟಿಕ್ ಉತ್ಪನ್ನ ಮಾಡುವ ದೊಡ್ಡಕರುಳಿನಲ್ಲಿ ವಾಸಿಸುವ ಕೋಟ್ಯಂತರ ಸೂಕ್ಷ್ಮಜೀವಿಗಳಾದ ಪ್ರೋಬ ಯೋಟಿಕ್ ಸಂವರ್ಧಿಗೆ ಸಿರಿಧಾನ್ಯ, ಮೊಸರು, ಮಜ್ಜಿಗೆ, ತರಕಾರಿ, ಹಣ್ಣುಗಳು ಹಾಗೂ ಇತರೆ ಪ್ರಿಬಯೋಟಿಕ್ ಬಳಕೆ ಮಹತ್ವ ತಿಳಿಸಿದರು.ಕು.ವಫೀಯಾ ಕೌಸರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಸೇವಿಸುತ್ತಿರುವ ಮೈದಾ ಉತ್ಪನ್ನಗಳಾದ ಬೇಕರಿ ತಿಂಡಿಗಳು, ಸಿಹಿ ತಿನಿಸುಗಳು, ಸಿಹಿ ಪಾನೀಯಗಳು ಹಾಗೂ ತೀವ್ರವಾಗಿ ಸಂಸ್ಕರಿಸಿದ ಆಹಾರಗಳಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿದರು. ಸಿರಿಧಾನ್ಯ ದಿವಸ ಆಚರಣೆ ಅಂಗವಾಗಿ ಶಾಲೆ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರು ಸಿರಿಧಾನ್ಯದಿಂದ ತಯಾರಿಸಲಾದ ಭೋಜನವನ್ನೇ ಸೇವಿಸಿದರು.-
28ಕೆಟಿಆರ್.ಕೆ.1ಃತರೀಕೆರೆಯಲ್ಲಿ ಅರುಣೋದಯ ವಿದ್ಯಾ ಸಂಸ್ಥೆಯಿಂದ ಶಾಲೆಯಲ್ಲಿ ನಡೆದ ಸಿರಿಧಾನ್ಯ ದಿವಸ ಕಾರ್ಯಕ್ರಮದಲ್ಲಿ ವಿದ್ಯಾ
ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ಮಾತನಾಡಿದರು.