)
ಗದಗ: ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆ ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರು ಶುಕ್ರವಾರ ನೇರವಾಗಿ ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಅಧಿಕೃತ ಕಾರನ್ನೇ ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ, ಮೇವುಂಡಿ, ಕೊರ್ಲಹಳ್ಳಿ, ಯಕ್ಲಾಸಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಬರೋಬ್ಬರಿ 300ಕ್ಕೂ ಹೆಚ್ಚು ಎಕರೆ ಫಲವತ್ತಾದ ಭೂಮಿಯನ್ನು ಕಳೆದುಕೊಂಡಿದ್ದರು. ಆದರೆ, ಭೂಸ್ವಾಧೀನವಾಗಿ ದಶಕಗಳೇ ಉರುಳಿದರೂ ಸರ್ಕಾರ ಮಾತ್ರ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿತ್ತು.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಸರ್ಕಾರದ ವಿಳಂಬ ಧೋರಣೆಯಿಂದ ಬೇಸತ್ತ ರೈತರು, ಅಂತಿಮವಾಗಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಪರಿಹಾರ ನೀಡದ ಹಿನ್ನೆಲೆ ಜಿಲ್ಲಾಧಿಕಾರಿಗಳ ವಾಹನವನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಈ ಆದೇಶದ ಬೆನ್ನಲ್ಲೇ ಬೀಡನಾಳ ಗ್ರಾಮದ ರೈತರು ತಮ್ಮ ವಕೀಲರೊಂದಿಗೆ ಆಗಮಿಸಿ ಡಿಸಿ ಕಾರನ್ನು ಜಪ್ತಿ ಮಾಡಿ ಕೊಂಡೊಯ್ದಿದ್ದಾರೆ.ಕಣ್ಣೀರಿಟ್ಟ ರೈತ ಮಹಿಳೆಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತ ರೈತ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ತಮ್ಮ ಅಳಲು ತೋಡಿಕೊಂಡರು. ಹತ್ತು ವರ್ಷಗಳೇ ಕಳೆದುಹೋದವು. ನಮಗೆ ಬರಬೇಕಾದ ಪರಿಹಾರದ ಹಣ ಮಾತ್ರ ಸಿಗಲಿಲ್ಲ. ಈ ಹೋರಾಟದ ನಡುವೆಯೇ ನನ್ನ ಗಂಡ ತೀರಿಹೋದರು. ನೋಡಿಕೊಳ್ಳಲು ಮಕ್ಕಳೂ ಇಲ್ಲ. ಇಳಿವಯಸ್ಸಿನಲ್ಲಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಹೋರಾಡಿ ನಮಗೆ ಸಾಕಾಗಿ ಹೋಗಿದೆ. ನಮ್ಮ ಹೊಟ್ಟೆಪಾಡಿಗೆ ದಾರಿಯೇ ಇಲ್ಲದಂತಾಗಿದೆ ಎಂದು ಬಿಕ್ಕಿ ಬಿಕ್ಕಿ ಅತ್ತರು.