ಕಚೇರಿಯಲ್ಲಿದ್ದ ಕಂಪ್ಯೂಟರ್, ಪೀಠೋಪಕರಣ, ವಸ್ತುಗಳು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ
ಕನ್ನಡಪ್ರಭ ವಾರ್ತೆ ಮದ್ದೂರುವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಗ್ರಾಮ ಪಂಚಾಯಿತಿ ನೌಕರನಿಗೆ ಪರಿಹಾರ ನೀಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮ ಪಂಚಾಯಿತಿ ಆಸ್ತಿಯನ್ನು ಪಟ್ಟಣದ ಜೆಎಂಎಫ್ ನ್ಯಾಯಾಲಯ ಗುರುವಾರ ಜಪ್ತಿ ಮಾಡಿದೆ.
ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಧಾ ಎಂ.ಎಸ್.ಹರಿಣಿ ಅವರ ಆದೇಶದ ಮೇರೆಗೆ ನ್ಯಾಯಾಲಯದ ಜಾರಿಕಾರರಾದ ಎಂ.ಪಿ.ತ್ರಿವೇಣಿ, ವಿ.ಶಿವರಾಂ ಮತ್ತು ನೌಕರ ರವಿ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಬಿ.ರಾಮಕೃಷ್ಣೇಗೌಡ, ಟಿ.ಜೆ.ಸುನಿಲ್ ಕುಮಾರ್ ಅವರ ತಂಡ ಗ್ರಾಪಂ ಕಚೇರಿಯಲ್ಲಿದ್ದ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ನೀಡಿದರು.ಗ್ರಾಮ ಪಂಚಾಯತಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ರವಿ ಕಳೆದ 2009ರ ನವೆಂಬರ್ 21ರಂದು ದುರಸ್ತಿಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದನು. ಪತಿ ರವಿ ಸಾವಿಗೆ ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪತ್ನಿ ಸುಜಾತ ಪರಿಹಾರ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಈ ಸಂಬಂಧ ಪಿಡಿಒ ಹಾಗೂ ಜನಪ್ರತಿನಿಧಿಗಳು ಸುಜಾತಾಳಿಗೆ ಪರಿಹಾರ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಸುಜಾತ ತಮ್ಮ ಪರ ವಕೀಲ ರಾಮಕೃಷ್ಣೇಗೌಡ, ಸಹ ವಕೀಲ ಸುನಿಲ್ ಕುಮಾರ್ ಮೂಲಕ ಮದ್ದೂರು ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅಂತಿಮವಾಗಿ ನ್ಯಾಯಾಲಯದಲ್ಲಿ 15 ವರ್ಷಗಳ ಕಾಲ ವಿಚಾರಣೆ ನಡೆದು ಮೊದಲ ಹಂತದಲ್ಲಿ ರವಿ ಪತ್ನಿ ಸುಜಾತರಿಗೆ 4,24,840 ರು. ಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತು ಮನ್ನಣೆ ನೀಡದ ಪಿಡಿಒ ಸುಜಾತ ತಮ್ಮ ಪರ ವಕೀಲರ ಮೂಲಕ ಅರ್ಜಿ ಸಲ್ಲಿಸಿ ಪರಿಹಾರದ ಹಣ ಕಟ್ಟದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಪಿಡಿಒ ಸುಜಾತಾ ಅರ್ಜಿಯನ್ನು ವಜಾ ಗೊಳಿಸಿದ ನ್ಯಾಯಾಧೀಶರಾದ ಎಂ.ಎಸ್.ಹರಿಣಿ ಗ್ರಾಪಂ ಆಸ್ತಿಯ ಜಪ್ತಿಗೆ ಆದೇಶ ಹೊರಡಿಸಿದ್ದಾರೆ.