ಬಾಂಬ್‌ ಬೆದರಿಕೆ ಸಂದೇಶ ಕಳಿಸಿದ್ದವನಿಗೆ ಕೋರ್ಟ್‌ ತರಾಟೆ

KannadaprabhaNewsNetwork |  
Published : Sep 08, 2026, 02:15 AM IST
ಹೈಕೋರ್ಟ್‌  | Kannada Prabha

ಸಾರಾಂಶ

ನಗರದ ಲೂಲು ಮಾಲ್‌, ಮಂತ್ರಿ ಸ್ಕ್ವೇರ್‌ ಸೇರಿ ನಗರದ ಹಲವು ಮಾಲ್‌ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆ ಜೈಶ್‌-ಏ-ಮೊಹಮ್ಮದ್‌ ಹೆಸರಿನಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಆರೋಪದ ಸಂಬಂಧ ದಕ್ಷಿಣ ದೆಹಲಿ ನಿವಾಸಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಆತನ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಲೂಲು ಮಾಲ್‌, ಮಂತ್ರಿ ಸ್ಕ್ವೇರ್‌ ಸೇರಿ ನಗರದ ಹಲವು ಮಾಲ್‌ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆ ಜೈಶ್‌-ಏ-ಮೊಹಮ್ಮದ್‌ ಹೆಸರಿನಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಆರೋಪದ ಸಂಬಂಧ ದಕ್ಷಿಣ ದೆಹಲಿ ನಿವಾಸಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಆತನ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.

ಇ-ಮೇಲ್‌ ಹ್ಯಾಕ್‌ ಮಾಡಲಾಗಿತ್ತು ಎಂಬ ಆರೋಪಿಯ ವಾದ ತಳ್ಳಿಹಾಕಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಕಂಪ್ಯೂಟರ್ ಅಥವಾ ಇಂಟರ್ನೆಟ್ ಸಂಪನ್ಮೂಲ ದುರುಪಯೋಗಪಡಿಸಿಕೊಂಡು ಜನರಲ್ಲಿ ಭಯ ಉಂಟುಮಾಡಿದ ಅಪರಾಧ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಎಫ್‌) ಅಡಿಯಲ್ಲಿ ತನ್ನ ವಿರುದ್ಧ ಬೆಂಗಳೂರು ಸೈಬರ್‌ ಕ್ರೈಂ ಠಾಣಾ ಪೊಲೀಸರು ದಾಖಲಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ದಕ್ಷಿಣ ದೆಹಲಿ ನಿವಾಸಿ ಅಭಯ್ ಶ್ರೀ ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2025ರ ನ.30ರಂದು ಇ-ಮೇಲ್‌ನಿಂದ ಹುಸಿ ಬಾಂಬ್‌ ಬೆದರಿಕೆ ಹಾಕಿರುವುದಕ್ಕೆ ಪ್ರಕರಣ ಸಂಬಂಧಿಸಿದೆ. ಅರ್ಜಿದಾರರ ಇ-ಮೇಲ್‌ಗೆ ಸಂಪರ್ಕ ಸಮಸ್ಯೆ ಇತ್ತು. ಆ ಬಗ್ಗೆ ಮೊಬೈಲ್‌ ನೆಟ್‌ವರ್ಕ್‌ ಕಂಪನಿಗೆ ದೂರು ನೀಡಿದ್ದು, ಅದನ್ನು ಪರಿಗಣಿಸಿ ಬಗೆಹರಿಸಲಾಗಿದೆ ಎಂದು ವಾದಿಸಿದರು.

ಆಗ ನ್ಯಾಯಪೀಠ, ಅರ್ಜಿದಾರರ ಇ-ಮೇಲ್‌ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಅಲ್ಲವೇ ಎಂದು ಕೇಳಿದಾಗ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಇ-ಮೇಲ್‌ ಖಾತೆ ಹ್ಯಾಕ್‌ ಆಗಿತ್ತು ಎಂದು ಉತ್ತರಿಸಿದರು. ಅದಕ್ಕೆ ನ್ಯಾಯಪೀಠ, ಹಾಗಾದರೆ ಆ ವಿಚಾರ ಸಾಕ್ಷ್ಯಧಾರಕ್ಕೆ ಸಂಬಂಧಿಸಿದೆ ಬಿಡಿ ಎಂದು ಸೂಚಿಸಿತು. ಅರ್ಜಿದಾರರ ಪರ ವಕೀಲರು ಮುಂದುವರಿದು, ಇ-ಮೇಲ್‌ ಅರ್ಜಿದಾರರಿಗೆ ಸಂಬಂಧಿಸಿದ್ದಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಸಿಲ್ಲ. ದೆಹಲಿ ಪೊಲೀಸರು ಸಹ ಇದೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಇದರಿಂದ ಕೊಂಚ ಕೋಪಗೊಂಡ ನ್ಯಾಯಪೀಠ, ಕೆಂಪೇಗೌಡ ವಿಮಾನ ನಿಲ್ದಾಣ, ಲೂಲು ಮಾಲ್‌, ಮಂತ್ರಿ ಸ್ಕ್ವೇರ್‌, ಓರಿಯಾನ್‌ ಮಾಲ್‌ ಅನ್ನು ಟಾರ್ಗೆಟ್ ಮಾಡಲಾಗಿದೆ. ರಾತ್ರಿ 7 ಗಂಟೆ ನಂತರ ಬಾಂಬ್‌ನಿಂದ ಸ್ಫೋಟಿಸಲಾಗುವುದು ಎಂದು ಬೆದರಿಕೆ ಸಂದೇಶ 2025ರ ನ.30ರಂದು ಬೆಳಗ್ಗೆ 11.53ಕ್ಕೆ ಅರ್ಜಿದಾರರ ಇ-ಮೇಲ್‌ ಖಾತೆಯಿಂದಲೇ ಬಂದಿದೆ. ಈ ಸಂಗತಿ ಬಹಿರಂಗವಾದ ನಂತರ ಇ-ಮೇಲ್‌ ಹ್ಯಾಕ್‌ ಆಗಿದೆ ಎಂದು ಸಬೂಬು ಹೇಳಿದರೆ, ನ್ಯಾಯಾಲಯ ಒಪ್ಪುವುದಿಲ್ಲ. ಹ್ಯಾಕ್‌ ವಿಚಾರ ಸಾಕ್ಷ್ಯಧಾರಗಳಿಂದ ದೃಢಪಡಲಿ ಎಂದು ತೀಕ್ಷ್ಣವಾಗಿ ಹೇಳಿತು.

ಅಲ್ಲದೆ, ಇ-ಮೇಲ್‌ ಹ್ಯಾಕ್‌ ಆದ ಬಗ್ಗೆ ದೂರು ನೀಡಲಾಗಿದೆಯೇ ಪ್ರಶ್ನಿಸಿದ ನ್ಯಾಯಪೀಠ, ಬಾಂಬ್‌ ಬೆದರಿಕೆ ಹಾಕಿ ಅರ್ಜಿದಾರರು ಇ-ಮೇಲ್‌ ಕಳುಹಿಸಿದ್ದಾರೆ. ಈಗ ನ್ಯಾಯಾಲಯಕ್ಕೆ ಬಂದು ಹ್ಯಾಕ್‌ ಕಥೆ ಹೇಳುತ್ತಿದ್ದಾರೆ. ನಿಜವಾಗಿಯೂ ಬಾಂಬ್‌ ಹಾಕಲಾಯಿತೋ ಅಥವಾ ಇಲ್ಲವೋ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಜನರಿಗೆ ಆತಂಕ ಮೂಡಿಸಲಾಗಿದೆ. ಇಂತಹ ನಡೆ ಒಪ್ಪಲಾಗದು. ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈಗ ಹೈಕೋರ್ಟ್‌ ಮಧ್ಯಪ್ರವೇಶಿಸಿ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು ಎಂದು ನುಡಿದು ಅರ್ಜಿ ವಜಾಗೊಳಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಪಿನಾಥಂನಲ್ಲಿ ₹3 ಕೋಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ: ಶಾಸಕ ಮಂಜುನಾಥ್
ಮನಸಿಗೆ ನೆಮ್ಮದಿ ನೀಡುವ ಶಿಕ್ಷಕ ವೃತ್ತಿ: ದಿನೇಶ ಶೆಟ್ಟಿ