ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಯು ಸಂತೃಪ್ತಿ ಮತ್ತು ನೆಮ್ಮದಿ ನೀಡುವ ವೃತ್ತಿಯಾಗಿದೆ. ಶಿಕ್ಷಕರ ತಾಳ್ಮೆ ಹಾಗೂ ನಾಯಕತ್ವ ಗುಣಗಳು ಸಮಾಜದ ಮುನ್ನಡೆಗೆ ಅಗತ್ಯವಾಗಿವೆ. ನಿವೃತ್ತಿಯ ನಂತರ ಶಿಕ್ಷಕರು ರಾಜಕೀಯ ಅಥವಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಯು ಸಂತೃಪ್ತಿ ಮತ್ತು ನೆಮ್ಮದಿ ನೀಡುವ ವೃತ್ತಿಯಾಗಿದೆ. ಶಿಕ್ಷಕರ ತಾಳ್ಮೆ ಹಾಗೂ ನಾಯಕತ್ವ ಗುಣಗಳು ಸಮಾಜದ ಮುನ್ನಡೆಗೆ ಅಗತ್ಯವಾಗಿವೆ. ನಿವೃತ್ತಿಯ ನಂತರ ಶಿಕ್ಷಕರು ರಾಜಕೀಯ ಅಥವಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರಿಗೆ ಬೋಧನಾ ಕಾರ್ಯದ ಜತೆಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿವಿಧ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಉಪನ್ಯಾಸ ನೀಡುತ್ತ, ನವಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ, ಅಧ್ಯಯನಶೀಲತೆ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಮಾತನಾಡಿ, ಬೋಧನೆಯ ಜತೆಗೆ ಚುನಾವಣೆ, ಬಿಎಲ್‌ಒ, ಸಮೀಕ್ಷೆಗಳು ಸೇರಿದಂತೆ ಹಲವು ಹೆಚ್ಚುವರಿ ಕೆಲಸಗಳನ್ನು ಶಿಕ್ಷಕರಿಗೆ ವಹಿಸಲಾಗುತ್ತಿದೆ. ಮಕ್ಕಳ ದಾಖಲಾತಿ, ಫಲಿತಾಂಶ ಸುಧಾರಣೆ, ದ್ವಿಭಾಷಾ ಬೋಧನೆ, ಮಕ್ಕಳನ್ನು ಶಾಲೆಗೆ ಕರೆತರುವುದು, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಮತ್ತಿತರ ಜವಾಬ್ದಾರಿಗಳಿಂದ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿದೆ. ಬೆಳಗ್ಗೆ 9 ಗಂಟೆಗೆ ಹಾಜರಾತಿ ಹಾಕುವ ಒತ್ತಡದಿಂದ ಅಪಘಾತಗಳಂತಹ ಘಟನೆಗಳು ಸಂಭವಿಸಿದರೆ ಶಿಕ್ಷಕರ ಕುಟುಂಬಕ್ಕೆ ಯಾರು ಹೊಣೆ ಎಂಬುದನ್ನೂ ಸರ್ಕಾರ ಪರಿಗಣಿಸಬೇಕು. ಶಿಕ್ಷಕರು ಒತ್ತಡಕ್ಕೆ ಒಳಗಾಗದೇ ಧೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು, ಸಂಘಟನೆ ಅವರೊಂದಿಗೆ ಇರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 18 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ರಸಾದ್, ಡಯಟ್ ಉಪ ನಿರ್ದೇಶಕಿ ಎಸ್.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಆರ್. ವಿಶಾಲಾಕ್ಷಿ, ಪುಷ್ಪಲತಾ, ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ, ಇತರೆ ಅಧಿಕಾರಿ ಸಿಬ್ಬಂದಿ ಇದ್ದರು.

- - -

-5ಕೆಡಿವಿಜಿ43: ದಾವಣಗೆರೆಯಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮವನ್ನು ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.