ವಾಲ್ಮೀಕಿ ಅಕ್ರಮದ ಹಣ ವಾಪಸ್ ಸೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಸೋಮವಾರ ಜನಸಾಗರವೇ ಹರಿದು ಬಂತು.
ಕನ್ನಡಪ್ರಭ ವಾರ್ತೆ ಗಂಗಾವತಿ/ಬಳ್ಳಾರಿ
ವಾಲ್ಮೀಕಿ ಅಕ್ರಮದ ಹಣ ವಾಪಸ್ ಸೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಸೋಮವಾರ ಜನಸಾಗರವೇ ಹರಿದು ಬಂತು. ಪಾದಯಾತ್ರೆಯ ಮಾರ್ಗದುದ್ದಕ್ಕೂ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಹಾರ ಹಾಕಿ ವಿಜಯೇಂದ್ರ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು.7ನೇ ದಿನದ ಯಾತ್ರೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ಹಳೆ ದರೋಜಿವರೆಗೆ ಸುಮಾರು 20 ಕಿ.ಮೀ.ಕ್ರಮಿಸಿತು. 7ನೇ ದಿನದ ಪಾದಯಾತ್ರೆಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ.ರಾಘವೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಂಡು ವಿಜಯೇಂದ್ರಗೆ ಸಾಥ್ ನೀಡಿದರು.
ಬೆಳಗ್ಗೆ 10 ಗಂಟೆಗೆ ಕಂಪ್ಲಿಯ ಅಂಬೇಡ್ಕರ್ ಸರ್ಕಲ್ ನಿಂದ ಆರಂಭವಾದ ಪಾದಯಾತ್ರೆಗೆ ಹೂಮಳೆ ಸುರಿಸಿ, ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ, ಸ್ಥಳೀಯ ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಬೃಹತ್ ಹಣ್ಣಿನ ಹಾರ ಹಾಕಿ, ಸ್ವಾಗತ ಕೋರಿದರು. ಪಾದಯಾತ್ರೆಯಲ್ಲಿ ಭಾರಿ ಜನಸ್ತೋಮವೇ ಸೇರಿತು.ಬಳಿಕ, ಕಂಪ್ಲಿ ಹೊರವಲಯದಲ್ಲಿ ರೈತ ಕೂಲಿ ಕಾರ್ಮಿಕರ ಜೊತೆಗೆ ಸಂವಾದ ನಡೆಸಿ, ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಪಟಾಕಿ ಸಿಡಿಸಿ, ಡೊಳ್ಳು, ಗೊಂಬೆ ಕುಣಿತದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ, ವಿಜಯೇಂದ್ರ ಅವರು ರೈತರು ಮತ್ತು ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಟ್ರಾಕ್ಟರ್ ಚಾಲನೆ ಮಾಡುವ ವೇಳೆ ವಿಜಯೇಂದ್ರ ಜೊತೆ ಸೆಲ್ಫಿ ತೆಗೆದುಕೊಂಡು ಕಾರ್ಯಕರ್ತರು ಸಂಭ್ರಮಿಸಿದರು.
ಬಳಿಕ, ಯಾತ್ರೆ ಮೆಟ್ರಿ ಗ್ರಾಮಕ್ಕೆ ಬರುತ್ತಿದ್ದಂತೆ ನಡುಬೀದಿಯಲ್ಲಿ ಬೃಹತ್ ಹಾರ ಹಾಕಿ, ಗ್ರಾಮಸ್ಥರು ಅವರಿಗೆ ಸ್ವಾಗತ ಕೋರಿದರು. ಎರಡು ಬೃಹತ್ ಕ್ರೇನ್ ಮೂಲಕ ಹಾರ ಹಾಕಿ ಹೂ ಎಸೆದು ಸ್ವಾಗತ ಕೋರಿದರು. ಮೆಟ್ರಿ ಗ್ರಾಮದ ಹೊರವಲಯದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿದ ವಿಜಯೇಂದ್ರ, ಜನ್ ಝೀ ಗಳೊಂದಿಗೆ ಸಂವಾದ ನಡೆಸಿದರು. ವಿಜಯನಗರ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರು ಸೇರಿದಂತೆ ಕಾಲೇಜು ಯುವಕರು ಭಾಗಿಯಾಗಿದ್ದರು.ಬಳಿಕ ಯಾತ್ರೆ ದೇವಲಪುರ ತಲುಪಿದಾಗ ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಕಂಬಳಿ ಹಾಕಿ, ಕುರಿ ನೀಡಿ ಸತ್ಕರಿಸಿದರು.
ಬಳಿಕ, ಹಳೇ ದರೋಜಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸುವ ಮೂಲಕ 7ನೇ ದಿನದ ಯಾತ್ರೆಗೆ ಮಂಗಳ ಹಾಡಿದರು. 8ನೇ ದಿನ ಮಂಗಳವಾರ, ಯಾತ್ರೆ ಹಳೆ ದರೋಜಿಯಿಂದ ಸಂಡೂರು ಕ್ಷೇತ್ರಕ್ಕೆ ಬರಲಿದೆ.ಜೆನ್‌ಝೀಗಳೊಂದಿಗೆ ಬಿವೈವಿ ಸಂವಾದ:ಜಾಗತಿಕ ಮಟ್ಟದ ಹಲವು ಸವಾಲುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಮುನ್ನಡೆಸುತ್ತಿದ್ದಾರೆ. ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ. ಬದಲಾವಣೆ ತರುವ ಪ್ರಾಮಾಣಿಕ ಕಳಕಳಿ ಹಾಗೂ ಮನಸ್ಥಿತಿ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಯುವಕರು ತಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಂಡು ಹೊಸ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯುವಕರಿಗೆ ಕರೆ ನೀಡಿದರು. ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಸೋಮವಾರ ಜೆನ್‌ಝೀ ಯುವಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಯುವಕರ ನಿರೀಕ್ಷೆ, ಆಶಯಗಳನ್ನು ತಿಳಿದುಕೊಂಡು ಅವುಗಳಿಗೆ ಸ್ಪಂದಿಸುವ ಉದ್ದೇಶದಿಂದಲೇ ಸಂವಾದ ನಡೆಸಲಾಗುತ್ತಿದೆ. ಇದು ಕೇವಲ ಪಾದಯಾತ್ರೆಯ ಸಂದರ್ಭದಲ್ಲಿ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮವಲ್ಲ. ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆ ಹಾಗೂ ತಲ್ಲಣಗಳನ್ನು ಅರಿತುಕೊಳ್ಳುವ ಪ್ರಯಾಣಿಕ ಪ್ರಯತ್ನವಾಗಿದೆ ಎಂದು ಸ್ಪಷ್ಟಪಡಿಸಿದರು.ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವಕರಿದ್ದಾರೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಯುವಶಕ್ತಿಯ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಈ ವರೆಗೆ ಒಂದು ಸಾವಿರ ಹುದ್ದೆಗಳನ್ನೂ ಸಮರ್ಪಕವಾಗಿ ಭರ್ತಿ ಮಾಡಿಲ್ಲ. ಪರೀಕ್ಷೆ ನಡೆಸುವುದು, ಫಲಿತಾಂಶ ಪ್ರಕಟಿಸುವುದು, ಅಂತಿಮ ಪಟ್ಟಿ ಬಿಡುಗಡೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.2028ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.ಕಲ್ಯಾಣ ಕರ್ನಾಟಕದತ್ತ ಗಮನ ಹರಿಸಲಿ:ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗದ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ವಲಸೆ ನಡೆಯುತ್ತಿದೆ. ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸಿಗದಿರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗಕ್ಕೆ ಮೀಸಲಿಟ್ಟ ಅನುದಾನವೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ವಿಜಯೇಂದ್ರ ಹೇಳಿದರು.ಕಲ್ಯಾಣ ಕರ್ನಾಟಕದ ನೀರಾವರಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.ಸಂವಾದದಲ್ಲಿ ಯುವಕ-ಯುವತಿಯರು ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಕೊರತೆ, ಶಿಕ್ಷಕರ ಸಮಸ್ಯೆ, ಮೂಲ ಸೌಕರ್ಯಗಳ ಅಭಾವ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಸಾಧಕ-ಬಾಧಕಗಳ ಕುರಿತು ಪ್ರಶ್ನಿಸಿದರು. ವಿಜಯೇಂದ್ರ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಯುವಕರ ಪ್ರಶ್ನೆಗಳಿಗೆ ಉತ್ತರಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಿದರು.