ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಜನರ ಬೇಸರ
ಅಧಿಕಾರಿಗಳು ಮಾಡುವ ತಪ್ಪಿಗೆ ಸಾರ್ವಜನಿಕರು ವರ್ಷಾನುಗಟ್ಟಲೇ ನ್ಯಾಯಾಲಯ ಅಲೆಯಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮುಖ್ಯಾಧಿಕಾರಿ ವೀಣಾ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನಿರೀಕ್ಷಿತ ಆದಾಯ ಮತ್ತು ಖರ್ಚುಗಳ ಜತೆಗೆ ಪುರಸಭೆ ಆದಾಯದ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸಂಪನ್ಮೂಲ ಕ್ರೂಡೀಕರಣದಲ್ಲಿ ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಪುರಸಭೆಗೆ ಸೇರಿದ ಸುಮಾರು 82 ಮಳಿಗೆಗಳಿವೆ. ಮೂರು ದಶಕಗಳ ಹಿಂದೆ ನಿಗಧಿಪಡಿಸಿದ್ದ ಬಾಡಿಗೆಯನ್ನೇ ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಪುರಸಭೆ ಆದಾಯ ಕ್ಷೀಣಿಸುತ್ತಿದೆ. ಮಳಿಗೆಗಳಿಗೆ ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆ, ಹಳ್ಳ ಕೊಳ್ಳಗಳಿಂದ ಕೂಡಿರುವ ರಸ್ತೆ ಅಭಿವೃದ್ಧಿ, ಹಾರೋಹಳ್ಳಿಗೆ ಸ್ಮಶಾನ ಮಂಜೂರಾತಿ, ಪಟ್ಟಣದಲ್ಲಿರುವ ಸ್ಮಶಾನಗಳಿಗೆ ಮೂಲ ಸೌಕರ್ಯ ಒದಗಿಸುವುದು, ಪುರಸಭೆಗೆ ಸೇರಿದ ನಿವೇಶನಗಳು ಒತ್ತುವರಿಯಾಗಿವೆ. ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೀಣಾ ಮಾತನಾಡಿ, ಮಳಿಗೆಗಳ ಬಾಡಿಗೆ ನಿಗಧಿಪಡಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಬಳಿಕ ಮರುಹರಾಜು ನಡೆಸಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಾಡಿಗೆ ವಸೂಲಿ ಮಾಡಲಾಗುವುದು ಎಂದರು.
11.37 ಕೋಟಿ ನಿರೀಕ್ಷಿತ ಆದಾಯ:
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತನಿಧಿ, 15ನೇ ಹಣಕಾಸು ಅನುದಾನ, ಕುಡಿಯುವ ನೀರು ಅನುದಾನ, ನಗರೋತ್ಥಾನ ಅನುದಾನ, ಎಸ್‌ಎಫ್‌ಸಿ ವೇತನ ಅನುದಾನ ಹಾಗೂ ಎಸ್‌ಎಫ್‌ಸಿಯು ವಿದ್ಯುಚ್ಛಕ್ತಿ ಅನುದಾನದಿಂದ 8.50 ಕೋಟಿ ಸೇರಿದಂತೆ ಒಟ್ಟಾರೆ 11.37 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಪೈಕಿ ನಿರೀಕ್ಷಿತ ವೆಚ್ಚ 11.29 ಕೋಟಿಗಳಾಗಿದ್ದು, 7.50 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.
----------
ಪಾಂಡವಪುರ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಬಜೆಟ್‌ಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಿದರು.