11ರ ಪೈಕಿ 10 ಸಾವಿಗೆ ಕೋವಿಡ್‌ ಕಾರಣ ಅಲ್ಲ : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jun 12, 2025, 01:20 AM ISTUpdated : Jun 12, 2025, 07:24 AM IST
Karnataka CM Siddaramaiah (Photo: ANI)

ಸಾರಾಂಶ

ರಾಜ್ಯದಲ್ಲಿ ವರದಿಯಾಗಿರುವ 11 ಕೊರೋನಾ ಸಾವಿನಲ್ಲಿ 10 ಮಂದಿ ಆ ಸೋಂಕಿನಿಂದ ಮರಣ ಹೊಂದಿಲ್ಲ ಎಂಬುದು ದೃಢಪಟ್ಟಿದೆ 

 ಬೆಂಗಳೂರು :  ರಾಜ್ಯದಲ್ಲಿ ವರದಿಯಾಗಿರುವ 11 ಕೊರೋನಾ ಸಾವಿನಲ್ಲಿ 10 ಮಂದಿ ಆ ಸೋಂಕಿನಿಂದ ಮರಣ ಹೊಂದಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ಯಾವುದೇ ಕೊರೋನಾ ಸೋಂಕಿತರ ಸಾವು ಆದಾಗ ಆ ಸೋಂಕಿನಿಂದಲೇ ಮೃತಪಟ್ಟಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಮಂಗಳವಾರ ಎರಡು ಕೊರೋನಾ ಸಾವು ಪ್ರಕರಣ ವರದಿ ಆದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ತುರ್ತು ಸಭೆ ಕರೆದ ಸಿದ್ದರಾಮಯ್ಯ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಈವರೆಗೆ 11 ಸಾವು ಸಂಭವಿಸಿವೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಸಾವನ್ನಪ್ಪಿದ್ದು, ಸಾವು ಸಂಭವಿಸಿದಾಗ ಅವರಿಗೆ ಕೊರೋನಾ ಪಾಸಿಟಿವ್‌ ಇತ್ತು ಅಷ್ಟೇ. ಮತ್ತೊಂದು ಡೆತ್ ಆಡಿಟ್ ವರದಿ ಬರಬೇಕಾಗಿದೆ ಎಂದು ತಿಳಿಸಿದ್ದೀರಿ. ಹೀಗಾಗಿ ಪ್ರತಿ ಬಾರಿ ಕೊರೋನಾ ಸಾವು ಆದಾಗಲೂ ಅದು ಕೊರೋನಾ ಸಾವೇ ಅಥವಾ ಅಲ್ಲವೇ ಎಂಬುದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು. ಜನರಲ್ಲಿ ಇರುವ ಆತಂಕವನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಮೇ ತಿಂಗಳ ಬಳಿಕ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಈ ತಿಂಗಳು ಪ್ರತಿ ದಿನ ಸರಾಸರಿ 500 ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ 10 ದಿನಗಳಲ್ಲಿ 5 ಸಾವಿರ ಪರೀಕ್ಷೆ ನಡೆಸಲಾಗಿದ್ದು, 862 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಪರಿಸ್ಥಿತಿ ನೋಡಿದರೆ ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು. ಈ ಬಗ್ಗೆ ಜನರಿಗೆ ತಿಳಿ ಹೇಳಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ಸಮನ್ವಯತೆಯಿಂದ ಕೆಲಸ ಮಾಡಿ:

ಕೋವಿಡ್ ಬಗ್ಗೆ ಯಾರೂ ಅನಗತ್ಯ ಗೊಂದಲ ಮೂಡಿಸಬಾರದು. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಂಕು ಹತೋಟಿಯಲ್ಲಿದೆ- ದಿನೇಶ್:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸೋಂಕಿನಿಂದ ಸಾವಾಗುತ್ತಿಲ್ಲ ಎಂಬುದನ್ನು ಟಿಎಸಿ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಶೇ.8 ರಷ್ಟು ಪಾಸಿಟಿವಿಟಿ ದರ ಇದ್ದು, ಸೋಂಕು ಹತೋಟಿಯಲ್ಲಿದೆ. ಓಡಾಟ ಹಾಗೂ ದಿನನಿತ್ಯದ ವ್ಯವಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ನೆರೆ ರಾಜ್ಯಗಳಲ್ಲೂ ಗಂಭೀರ ಸ್ಥಿತಿಯಿಲ್ಲ. ಹೀಗಾಗಿ ಅನಗತ್ಯ ಆತಂಕ ಬೇಕಾಗಿಲ್ಲ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?