ಕೋವಿಡ್‌ ಹಗರಣ : ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಗೆ ಎಸ್‌ಐಟಿ ಕುಣಿಕೆ!

KannadaprabhaNewsNetwork |  
Published : Nov 15, 2024, 12:38 AM ISTUpdated : Nov 15, 2024, 07:59 AM IST
BS Yediyurappa

ಸಾರಾಂಶ

ರಾಜ್ಯ ಸರ್ಕಾರವು ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಶಾಕ್‌ ನೀಡಿದೆ.

 ಬೆಂಗಳೂರು : ರಾಜ್ಯ ಸರ್ಕಾರವು ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಶಾಕ್‌ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅ‍ವಧಿಯಲ್ಲಿ ನಡೆದಿತ್ತು ಎನ್ನಲಾದ ಕೊರೋನಾ ಭ್ರಷ್ಟಾಚಾರದ ಕುರಿತು ನ್ಯಾ.ಮೈಕಲ್‌ ಡಿ ಕುನ್ಹಾ ಆಯೋಗದ ವರದಿ ಆಧರಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ನಿರ್ಧಾರ ಮಾಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ತನಿಖೆಗೆ ಐಜಿಪಿ ದರ್ಜೆ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ.

‘ಕುನ್ಹಾ ಆಯೋಗವು ಬಿಜೆಪಿಯ ಅವಧಿಯ ಕೊರೋನಾ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ತನ್ನ ಮಧ್ಯಂತರ ವರದಿಯಲ್ಲಿ ಬಿಡಿಸಿಟ್ಟಿದೆ. ಕೋಟ್ಯಂತರ ರು. ಲೂಟಿ ಜತೆಗೆ 1.24 ಲಕ್ಷ ಜನರ ಸಾವನ್ನು ಮುಚ್ಚಿಟ್ಟು ಘೋರ ಅಪರಾಧ ಎಸಗಿರುವುದು ಬಹಿರಂಗಗೊಂಡಿದೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯಬಿದ್ದರೆ ಎಫ್‌ಐಆರ್‌ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಎಸ್‌ಐಟಿ ರಚನೆ ಮಾಡಲಾಗಿದೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಟೀಲ್, ‘ಕೊರೋನಾ ಅವಧಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಜನ ಸಾಯುತ್ತಿದ್ದರೆ ಬಿಜೆಪಿ ಸರ್ಕಾರ ಹಣ ಲೂಟಿಯಲ್ಲಿ ಮಗ್ನವಾಗಿತ್ತು. ಈ ಬಗ್ಗೆ ಸಾರ್ವಜನಿಕರ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿ ಪರಿಶೀಲನೆಗೆ ಮುಂದಾದಾಗ ಅಡ್ಡಿ ಉಂಟು ಮಾಡಿತ್ತು. ಇದೀಗ ಕುನ್ಹಾ ವರದಿ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ’ ಎಂದು ಹೇಳಿದರು.

‘330 ರಿಂದ 400 ರು. ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್‌ಗಳನ್ನು 2117 ರು. ನೀಡಿ 3 ಲಕ್ಷ ಕಿಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಜತೆಗೆ ಖಾಸಗಿ ಲ್ಯಾಬ್‌ಗಳಿಗೆ ಅಕ್ರಮವಾಗಿ 6.93 ಕೋಟಿ ರು. ಅಕ್ರಮವಾಗಿ ಸಂದಾಯ ಮಾಡಲಾಗಿದೆ. ಪ್ರಚಾರಕ್ಕಾಗಿ ಇಟ್ಟಿದ್ದ 7.03 ಕೋಟಿ ರು.ಗಳಲ್ಲೂ ಅಕ್ರಮ ನಡೆಸಿದ್ದು ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ ₹8 ಲಕ್ಷ 85 ಸಾವಿರ ನಿಯಮ ಬಾಹಿರವಾಗಿ ಪಾವತಿ ಮಾಡಲಾಗಿದ್ದು, ₹5 ಕೋಟಿ ವೆಚ್ಚದ ಬಗ್ಗೆ ದಾಖಲೆಗಳೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾವಿನ ಬಗ್ಗೆ ಸರಿಯಾಗಿ ಲೆಕ್ಕ ಕೊಡದೇ ಸಾವಿನ ಲೆಕ್ಕ ಪರಿಶೋಧನೆ ನಡೆಸದೇ ನೈಜ ಸಾವಿನ ಸಂಖ್ಯೆಗಳನ್ನು ಮುಚ್ಚಿಡಲಾಗಿದೆ. ಈ ಎಲ್ಲಾ ಅವ್ಯವಹಾರಗಳಲ್ಲಿನ ಅಪರಾಧಿ ಅಂಶಗಳನ್ನು ತನಿಖೆ ಮಾಡಿ ಎಫ್ಐಆರ್‌ ದಾಖಲಿಸಿ, ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಮಾಡಲು ಸಚಿವ ಸಂಪುಟ ಈ ತೀರ್ಮಾನ ಮಾಡಿದೆ’ ಎಂದು ವಿವರಿಸಿದರು.

‘ಚೀನಾ ಕಂಪನಿಗಳೊಂದಿಗೆ ನಡೆಸಿದ ಅಕ್ರಮ ವ್ಯವಹಾರದ ಬಗ್ಗೆ ರಾಜ್ಯ ಪೊಲೀಸರು ಹೇಗೆ ತನಿಖೆ ನಡೆಸುತ್ತಾರೆ?’ ಎಂಬ ಪ್ರಶ್ನೆಗೆ, ‘ಅಕ್ರಮದ ಬಗ್ಗೆ ತನಿಖೆ ನಡೆಸಲು ಚೀನಾಗೆ ಹೋಗಬೇಕಾಗಿಲ್ಲ. ಚೀನಾದಿಂದ ಪಿಪಿಇ ಕಿಟ್‌ ಖರೀದಿಸಿರುವ ಮಾಹಿತಿ ಹಾಗೂ ಅಕ್ರಮವಾಗಿ ಮುಂಗಡ ಹಣ ಪಾವತಿಸಿರುವ ವಿವರಗಳೆಲ್ಲವೂ ಇಲ್ಲೇ ಲಭ್ಯವಾಗುತ್ತವೆ. ಹೀಗಾಗಿ ಪೊಲೀಸ್‌ ಎಸ್‌ಐಟಿಯೇ ಸಮರ್ಥವಾಗಿ ತನಿಖೆ ನಡೆಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''