ಕುಂಜಾಲು ರಸ್ತೆಯಲ್ಲಿ ಗೋವಿನ ರುಂಡ ಪತ್ತೆ ಪ್ರಕರಣ: 6 ಆರೋಪಿಗಳ ಬಂಧನ

KannadaprabhaNewsNetwork | Published : Jul 1, 2025 12:47 AM

ಆರೋಪಿಗಳು ದನವೊಂದನ್ನು ಕಡಿದು ಮಾಂಸ ಮಾಡಿ, ಉಳಿದ ತಲೆ ಮತ್ತು ತ್ಯಾಜ್ಯವನ್ನು ಎಸೆಯಲು ರಾತ್ರಿ ಸ್ಕೂಟರಿನಲ್ಲಿ ತೆರಳುತಿದ್ದಾಗ, ಅದು ರಸ್ತೆಗೆ ಬಿದ್ದು ಹೋಗಿದ್ದು, ಮರುದಿನ ಅದು ತೀವ್ರ ಗೊಂದಲಗಳಿಗೆ ಕಾರಣವಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿನ ಮುಖ್ಯರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬಾತ ತಲೆಮರೆಸಿಕೊಂಡಿದ್ದಾನೆ.

ಬಂಧಿತ ಆರೋಪಿಗಳು ಸ್ಥ‍ಳೀಯ ನಿವಾಸಿಗಳಾದ ರಾಮ ಕುಂಜಾಲು (49), ಪ್ರಸಾದ್ ಕುಂಜಾಲು (21), ನವೀನ್ ಮಟಪಾಡಿ (35), ಕೇಶವ ನಾಯ್ಕ್ ಕುಂಜಾಲು (50), ಸಂದೇಶ್ ಕುಂಜಾಲು (35) ಮತ್ತು ರಾಜೇಶ್ ಕುಂಜಾಲು (28).ಆರೋಪಿಗಳು ದನವೊಂದನ್ನು ಕಡಿದು ಮಾಂಸ ಮಾಡಿ, ಉಳಿದ ತಲೆ ಮತ್ತು ತ್ಯಾಜ್ಯವನ್ನು ಎಸೆಯಲು ರಾತ್ರಿ ಸ್ಕೂಟರಿನಲ್ಲಿ ತೆರಳುತಿದ್ದಾಗ, ಅದು ರಸ್ತೆಗೆ ಬಿದ್ದು ಹೋಗಿದ್ದು, ಮರುದಿನ ಅದು ತೀವ್ರ ಗೊಂದಲಗಳಿಗೆ ಕಾರಣವಾಗಿತ್ತು.ಕೇಶವ ಅವರಿಗೆ ಸೇರಿದ್ದ ಒಂದೂವರೆ ವರ್ಷದ ದನ ಅದಾಗಿದ್ದು, ಅದನ್ನು ಸಾಕಲಾಗದೇ ರಾಮ ಅವರಿಗೆ ನೀಡಿದ್ದರು. ಅದನ್ನು ಸ್ವಿಪ್ಟ್ ಕಾರಿನಲ್ಲಿ ಸಾಗಿಸಿ, ಆರೋಪಿಗಳು ತಮ್ಮ ಮನೆಯಲ್ಲಿ ಬಳಕೆಗಾಗಿ ಕಡಿದು ಮಾಂಸ ಮಾಡಿದ್ದರು. ನಂತರ 40-50 ಕೆ.ಜಿ. ಮಾಂಸ ಮತ್ತು ಉಳಿದ ತ್ಯಾಜ್ಯವನ್ನು ಸ್ಕೂಟಿಯಲ್ಲಿ ಸಾಗಿಸುತ್ತಿದ್ದಾಗ, ತ್ಯಾಜ್ಯ ದಾರಿ ಮಧ್ಯೆ ಬಿದ್ದು ಹೋಗಿದ್ದು, ಸಾಗಿಸುತ್ತಿದ್ದ ಆರೋಪಿ ಸ್ಕೂಟರ್ ಚಾಲಕನಿಗೆ ತಿಳಿದಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಭಾನುವಾರ ಮುಂಜಾನೆ ಕುಂಜಾಲಿನ ರಸ್ತೆಯಲ್ಲಿ ಈ ಗೋವಿನ ತಲೆ, ತ್ಯಾಜ್ಯಗಳು ಪತ್ತೆಯಾಗಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರಿಂದ ಅನಪೇಕ್ಷಿತ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು, ಗ್ರಾ.ಪಂ. ಮೂಲಕ ಗೋವಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿಸಿ, ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿತ್ತು. ಕುಂಜಾಲು ಮತ್ತು ಸುತ್ತಮುತ್ತ 3- 4 ಕಿ.ಮೀ. ಪರಿಸರದ ಸಿಸಿ ಕ್ಯಾಮರಗಳನ್ನು ಪರಿಶೀಲಿಸಲಾಗಿತ್ತು. ಅದರಲ್ಲಿ ಕುಂಜಾಲು ರಸ್ತೆಯಲ್ಲಿ ಶನಿವಾರ ರಾತ್ರಿ ಒಂಟಿ ಸ್ವಿಪ್ಟ್ ಕಾರು ಓಡಾಟವನ್ನು ಪತ್ತೆ ಮಾಡಿ, ಆರೋಪಿಗಳ‍ನ್ನು ಬಂಧಿಸಲಾಗಿದೆ.ಈ ಮಧ್ಯೆ ಪ್ರಕರಣವನ್ನು ಅನ್ಯ ಕೋಮಿನ ವಿರುದ್ಧ ಬಳಸುವ ಅನಾಪೇಕ್ಷಿತ ಪ್ರಯತ್ನಗಳೂ ನಡೆದಿದ್ದು, ಪೊಲೀಸರು ಸಕಾಲದಲ್ಲಿ ಆರೋಪಿಗಳ ಬಂಧಿಸಿ ಈ ಪ್ರಯತ್ನಗಳನ್ನು ವಿಫಲಗೊಳಿಸಿದ್ದಾರೆ.ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಗೋಹತ್ಯೆ ನಿಷೇಧ ಕಾಯ್ದೆಯಂತೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಂದ ಗೋಹತ್ಯೆಗೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡು, ಹತ್ಯೆಯ ಸ್ಥಳ ಮಹಜರು ನಡೆಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.