ಸಮಾಜಕ್ಕೆ ದೈವೀ ಶಕ್ತಿಯೊಂದಿಗೆ ಗೋ ಶಕ್ತಿ ಬಲ: ಪೇಜಾವರ ಶ್ರೀ

KannadaprabhaNewsNetwork |  
Published : Dec 02, 2025, 03:00 AM IST
ಫೋಟೋ: ೩೦ಪಿಟಿಆರ್-ಶ್ರೀನಿವಾಸ ಪುತ್ತೂರಿನಲ್ಲಿ ಹಿಂದವೀ ಸಾಮ್ರಾಜ್ಯೋತ್ಸವ ನಡೆಯಿತು. | Kannada Prabha

ಸಾರಾಂಶ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಸಮಾರಂಭ ಸಂಪನ್ನಗೊಂಡಿತು.

ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ‘ಹಿಂದವೀ ಸಮ್ರಾಜ್ಯೋತ್ಸವ’

ಪುತ್ತೂರು: ಸಮಾಜಕ್ಕೆ ಬಲ ತುಂಬುವುದು ದೈವೀ ಶಕ್ತಿ ಒಂದೆಡೆಯಾದರೆ, ಇನ್ನೊಂದು ರೀತಿಯಲ್ಲಿ ಗೋವುಗಳು. ಊರಿಗೊಂದಾದರೂ ಗೋ ಶಾಲೆ ಇರಬೇಕಾದ ಅನಿವಾರ್ಯತೆ ಇಂದಿದೆ. ಶ್ರೀನಿವಾಸ ಎಲ್ಲಿದ್ದಾನೆ ಎಂದು ಜಗತ್ತಿಗೆ ತೋರಿಸಿದ್ದು ಗೋವುಗಳು. ಅದ್ದರಿಂದ ನಾವು ಗೋವುಗಳ ರಕ್ಷಣೆ ಮಾಡಲೇ ಬೇಕಾಗಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಸಮಾರಂಭದ ಸಂದರ್ಭದಲ್ಲಿ ಶನಿವಾರ ರಾತ್ರಿ ನಡೆದ ಹಿಂದವಿ ಸಾಮ್ರಾಜ್ಯೋತ್ಸವದಲ್ಲಿ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಾಮಾಜಿಕ ಜಾಲ ತಾಣಗಳ ಅತಿಯಾದ ಬಳಕೆಯಿಂದ ಯುವ ಸಮುದಾಯ ದಾರಿ ತಪ್ಪುತ್ತಿದೆ. ಹೀಗಾಗಿ ಮನೆ ಮನೆಗಳಲ್ಲಿ ಧರ್ಮ, ಸಂಸ್ಕಾರ, ಬದುಕಿನ ಶಿಕ್ಷಣ ನೀಡುವ ಅಗತ್ಯ ಇದೆ ಎಂದರು.

ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಸನಾತನ ಧರ್ಮದ ಸಂಸ್ಕೃತಿ, ಸಂಸ್ಕಾರದ ಅನಾವರಣಗೊಂಡಿದೆ ಎಂದರು.

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸಂಬಂಧ ಮುರಿದು ಹೋಗಲು ಮುಖ್ಯ ಕಾರಣ ಧಾರ್ಮಿಕತೆಯ ಅರಿವು ಕಡಿಮೆ ಆಗಿರುವುದು ಎಂದರು.ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದ, ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹಪ್ರಸಾದ್ ಶುಭ ಹಾರೈಸಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಂಘ ಶತಾಬ್ದಿಯ ನೆನಪು ಶಾಶ್ವತವಾಗಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾಮೂಹಿಕ ವಿವಾಹ ಜೋಡಿಸಿದ್ದೇವೆ. ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕು ಮತ್ತು ಸನಾತನ ಹಿಂದು ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಹಿಂದು ಸಮಾಜದ ಮುಂದಿರುವ ನೂರಾರು ಸವಾಲುಗಳಿಗೆ ಒಂದಾಗಿ ಒಟ್ಟಾಗಿ ಸಂದೇಶ ಕೊಡುವ ಕಾರ್ಯಕ್ರಮ ಇದಾಗಿದೆ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಕೇಶವಪ್ರಸಾದ್ ಮುಳಿಯ, ದಿವಾಕರ ದಾಸ್ ನೇರ್ಲಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಸ್ವಾಗತ ಸಮಿತಿ ಸಹ ಸಂಚಾಲಕ ಅನಿಲ್ ತೆಂಕಿಲ, ವೆಂಕಟ್ರಮಣ ಕಡಬ, ಸ್ವಾಗತ ಸಮಿತಿ ಕಾರ್ಯದರ್ಶಿ ಮನೀಶ್ ಕುಲಾಲ್, ಪ್ರೇಮ್‌ರಾಜ್ ಹಾಜರಿದ್ದರು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಸಹಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿ ಮಠ ವಂದಿಸಿದರು. ನಿರೂಪಕ ಪ್ರದೀಪ್ ಬಡೆಕ್ಕಿಲ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಜತೆ ಕಾರ್ಯದರ್ಶಿ ನವೀನ್ ರೈ ಪಂಜಳ ನಿರೂಪಿಸಿದರು. ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು. ಸಭಾ ಕಾರ್ಯಕ್ರಮದ ಆರಂಭ ಮತ್ತು ನಂತರ ವಿಜಯಶ್ರೀ ಮುಳಿಯ ಅವರ ತಂಡದಿಂದ ‘ಸಂಧ್ಯಾ ಗೀತಂ’ ಕಾರ್ಯಕ್ರಮ ನಡೆಯಿತು.

ವೈಭವದ ಮೆರವಣಿಗೆ:

ಶನಿವಾರ ಸಂಜೆ ಸಾವಿರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ತ್ರಿನೇತ್ರ ಮಂಟಪಕ್ಕೆ ಸ್ವಾಗತಿಸಲಾಯಿತು. ನಗರದ ಬೊಳುವಾರಿನಲ್ಲಿ ಸರ್ವವಾದ್ಯಗಳ ಘೋಷದೊಂದಿಗೆ ಮಹಿಳೆಯರು ಕಲಶ ಹಿಡಿದು ವಿವಿಧ ಭಜನಾ ತಂಡಗಳು ಕುಣಿತ ಭಜನೆಯೊಂದಿಗೆ ಶ್ರೀನಿವಾಸ ದೇವರನ್ನು ಸ್ವಾಗತಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಕರ್ಪೂರ ಬೆಳಗಿದ ತೆಂಗಿನ ಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸುಬ್ರಹ್ಮಣ್ಯ ಬಳ್ಳಕುರಾಯ, ಸಮಿತಿ ಅಧ್ಯಕ್ಷ ನರಸಿಂಹಪ್ರಸಾದ್ ಸಹಿತ ಪದಾಧಿಕಾರಿಗಳು ತೆಂಗಿನ ಕಾಯಿ ಒಡೆದರು. ಚೆಂಡೆಕುಣಿತ, ನೃತ್ಯ ಭಜನೆ ತಂಡದೊಂದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಕಲಶವನ್ನು ಹಿಡಿದು ಮೆರವಣಿಯುದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಪ್ರಧಾನ ಅಂಚೆ ಕಚೇರಿ ಮೂಲಕ ಬರಮಾಡಿಕೊಳ್ಳಲಾಯಿತು.

ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ನರಸಿಂಹಪ್ರಸಾದ್, ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಮನೀಶ್ ಕುಲಾಲ್, ಅನಿಲ್ ತೆಂಕಿಲ, ಪ್ರವೀಣ್ ಭಂಡಾರಿ, ಗಣೇಶ್ ಮಕರಂದ ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೆ ಹೆಗಲಮೇರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ವಿಶಾಲವಾದ ತ್ರಿನೇತ್ರ ಮಂಟಪದಲ್ಲಿ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ವೆಂಕಟರಮಣ ಗೋವಿಂದ... ಗೋವಿಂದಾ... ಶ್ರೀನಿವಾಸ ಗೋವಿಂದ... ಸ್ಮರಣೆಯಲ್ಲಿ ಭಕ್ತರು ಮುಳುಗಿದರು. ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು. ಶ್ರೀನಿವಾಸ ದೇವರ ಪ್ರತಿಷ್ಠೆಗೂ ಮುಂದೆ ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ ದೇವರ ಪುರಪ್ರವೇಶ ಸಂದರ್ಭ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವ ಸಲಹೆಗಾರ ಶಶಾಂಕ ಕೊಟೇಚಾ, ಚಂದಪ್ಪ ಮೂಲ್ಯ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಡಾ. ಸುರೇಶ್ ಪುತ್ತೂರಾಯ, ಶ್ರೀಕೃಷ್ಣ ಉಪಾಧ್ಯಾಯ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸುನಿಲ್ ಬೋರ್ಕರ್, ಕುಂಟಾರು ಗುರು ತಂತ್ರಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ